
ಬಾಗಲಕೋಟೆ(ಮೇ.29): ರಾಜ್ಯಾದ್ಯಂತ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ನಕಲಿ ಎಸಿಬಿ ಅಧಿಕಾರಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಬಾಗಲಕೋಟೆಯ ಸಿಇಎನ್ ಪೊಲೀಸರು ವಂಚಕರನ್ನು ಹಾಸನ ಜಿಲ್ಲೆಯಿಂದ ಬಂಧಿಸಿ ಶನಿವಾರ ಕರೆತಂದಿದ್ದಾರೆ.
ಬಾಗಲಕೋಟೆಯ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಬಿವೃದ್ಧಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಈಶ್ವರ ಕುರುಬಗಟ್ಟಿ ಎಂಬ ಅಧಿಕಾರಿಗೆ ಏ.29ರಂದು ಕರೆಮಾಡಿ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ನಂತರ ಅಧಿಕಾರಿ ನೀಡಿದ ದೂರಿನ ಮೆರೆಗೆ ಬಾಗಲಕೋಟೆ ಜಿಲ್ಲಾ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಮುಂದಾಗಿದ್ದರ ಪರಿಣಾಮ ಇಬ್ಬರು ನಕಲಿ ವಂಚಕರನ್ನು ಬಂಧಿಸಲು ಸಾಧ್ಯವಾಗಿದೆ.
ರಾಜ್ಯದ ವಿವಿಧೆಡೆ ನಕಲಿ ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದ ಮುರುಗೇಶ ಕುಂಬಾರ ಹಾಗೂ ಹಾಸನ ಜಿಲ್ಲೆಯ ಮೂಗುಳಿ ಗ್ರಾಮದ ರಜನಿಕಾಂತ ಎಂಬುವರನ್ನು ಬಾಗಲಕೋಟೆ ಸಿಇಎನ್ ಪೊಲೀಸ್ ಅಧಿಕಾರಿ ವಿಜಯ ಮುರುಗುಂಡಿ ನೇತೃತ್ವದ ತಂಡ ಹಾಸನದಲ್ಲಿ ಬಂಧಿಸಿ ಬಾಗಲಕೋಟೆಗೆ ಕರೆತಂದಿದೆ.
ಹಾವೇರಿ ಮಹಿಳೆ ಮೇಲಿನ ಶೂಟೌಟ್ ಕೇಸ್: ಇಬ್ಬರ ಬಂಧನ
ಈ ಇಬ್ಬರ ವಿರುದ್ಧ ರಾಜ್ಯದ ವಿವಿಧೆಡೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇವರು ಕೆಲವೆಡೆ ಎಸಿಬಿ ಅಧಿಕಾರಿಗಳೆಂದರೆ, ಇನ್ನೂ ಕೆಲವೆಡೆ ಲೋಕಾಯುಕ್ತರ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸ್ವತಃ ಎಸ್ಪಿ ಲೋಕೇಶ ಜಗಲಾಸರ ವಿಶೇಷ ಕಾಳಜಿ ವಹಿಸಿದ್ದರು.
ಏಪ್ರಿಲ್ 29ರಂದು ಬಾಗಲಕೋಟೆಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನಕಲಿ ಎಸಿಬಿ ಅಧಿಕಾರಿಗಳ ಬೆದರಿಕೆ ಕರೆಗಳ ಕುರಿತು ದೂರು ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತಂಡ ರಚಿಸಿ ರಾಜ್ಯದ ಎಲ್ಲೆಡೆ ತನಿಖೆ ನಡೆಸಿ, ಇದೀಗ ಇಬ್ಬರು ವಂಚಕರನ್ನು ಬಂಧಿಸಲಾಗಿದೆ ಅಂತ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ