ಗದಗ ಬೆಟಗೇರಿಯಲ್ಲಿ ನಡೆದ ಘಟನೆ| ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಅರೋಪಿ| ಆರೋಪಿ ಬಂಧನ| ಈ ಸಂಬಂಧ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಗದಗ(ಮಾ.18): ಇಷ್ಟ ಪಟ್ಟು ಮದುವೆ ಆಗಬೇಕು ಅಂದುಕೊಂಡಿದ್ದ ಯುವತಿ ಕೈತಪ್ಪಲು ಚಿಕ್ಕಪ್ಪನೇ ಕಾರಣ ಎಂದು ಶಂಕಿಸಿ ಯುವಕನೋರ್ವ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗದಗ ಬೆಟಗೇರಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬೆಟಗೇರಿಯ ನಿವಾಸಿ ಮಂಜುನಾಥ ಗದುಗಿನ (42) ಕೊಲೆಯಾದ ವ್ಯಕ್ತಿ. ಪ್ರವೀಣ ಗದುಗಿನ ಕೊಲೆ ಮಾಡಿದ ಆರೋಪಿ. ಪ್ರವೀಣ ಬೆಂಗಳೂರಿನಲ್ಲಿ ನವರಸ ಸಿನಿಮಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು, ಬ್ಯಾಚುಲರ್ ಲೈಫ್ ಎಂಬ ಧಾರಾವಾಹಿಯಲ್ಲಿ ನಾಯಕನ ಸ್ನೇಹಿತನಾಗಿ ನಟಿಸಿದ್ದಾನೆ. ಆದರೆ ಇನ್ನೂ ಆ ಧಾರವಾಹಿ ಬಿಡುಗಡೆಯಾಗಿಲ್ಲ. ಆದಾದ ಮೇಲೆ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಗದಗಕ್ಕೆ ಬಂದು ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.
ಮಂಡ್ಯ; ದೆವ್ವಕ್ಕೆ ಹೆದರಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದರು!
ತನ್ನ ಸಂಬಂಧಿಯೇ ಆಗಿದ್ದ ಯುವತಿಯನ್ನು ಇಷ್ಟಪಟ್ಟಿದ್ದು, ಮದುವೆಯಾಗಬೇಕು ಎಂಬ ಬಯಕೆ ಹೊಂದಿದ್ದ. ಆದರೆ ಯುವತಿ ಮನೆಯವರು ಒಪ್ಪಿರಲಿಲ್ಲ. ಇದಕ್ಕೆಲ್ಲಾ ಕಾರಣ ತನ್ನ ಚಿಕ್ಕಪ್ಪನೇ ಎಂದು ನಿರ್ಧರಿಸಿದ್ದ. ಬೆಟಗೇರಿಯ ತೆಂಗಿನಕಾಯಿ ಬಜಾರ್‌ನಲ್ಲಿ ತೆರಳುತ್ತಿದ್ದ ಮಂಜುನಾಥನ ಮುಖಕ್ಕೆ ಪ್ರವೀಣ ಕಾರದಪುಡಿ ಎರಚಿ, ಚಾಕುವಿನಿಂದ ಕುತ್ತಿಗೆ ಭಾಗವನ್ನು ಕೊಯ್ದು, ಆನಂತರ ಸಿಕ್ಕಸಿಕ್ಕಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇರಿದ ರಭಸಕ್ಕೆ ಚಾಕು ಕೂಡ ಮುರಿದುಹೋಗಿದೆ. ಸ್ಥಳದಲ್ಲೇ ಚಿಕ್ಕಪ್ಪನ ಪ್ರಾಣಪಕ್ಷಿ ಹಾರಿ ಹೋಗಿದೆ. ಅದೇ ಮಾರ್ಗವಾಗಿ ತೆರಳುತ್ತಿದ್ದ ಪೊಲೀಸರು ಕೂಡಲೇ ಪ್ರವೀಣ ಗದುಗಿನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಮದುವೆಯಾಗಬೇಕು ಎಂದುಕೊಂಡಿದ್ದ ಯುವತಿ ಮನೆಯವರು ನಿರಾಕರಣೆ ಮಾಡಲು ಚಿಕ್ಕಪ್ಪ ಮಂಜುನಾಥನೆ ಕಾರಣ ಎಂದು ಪ್ರವೀಣ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ಹೆಚ್ಚಿನೆ ತನಿಖೆ ನಡೆಸಲಾಗುವುದು ಎಂದು ಗದಗ ಎಸ್ಪಿ ಯತೀಶ ಎನ್ ತಿಳಿಸಿದ್ದಾರೆ.