ಹಾವೇ​ರಿ​ಯಲ್ಲಿ ಜೋಡಿ ಕೊಲೆ: ಹಳೆ ದ್ವೇಷವೇ ಹತ್ಯೆಗೆ ಕಾರ​ಣ?

By Kannadaprabha News  |  First Published Mar 18, 2021, 11:01 AM IST

ಮಲ​ಗಿ​ದ್ದ​ವರು ಶವ​ವಾ​ದ​ರು| ಆರೋಪಿಗಳ ಪತ್ತೆಗೆ ಜಾಲ ಬೀಸಿದ ಪೊಲೀಸರು| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು| ನಾಲ್ಕೈದು ಜನರ ವಿಚಾರಣೆ ನಡೆಸಿದ ಪೊಲೀಸರು| 


ಹಾವೇರಿ(ಮಾ.18): ಇಲ್ಲಿಗೆ ಸಮೀಪದ ಯತ್ತಿನಹಳ್ಳಿಯಲ್ಲಿರುವ ಬಾಡಿಗೆ ಕಾಂಪ್ಲೆಕ್ಸ್‌ನಲ್ಲಿ ಓರ್ವ ಯುವಕ ಹಾಗೂ ಬಾಲಕನನ್ನು ಜಿಮ್‌ನಲ್ಲಿ ಬಳಸುವ ಡೆಂಬಲ್ಸ್‌ಗಳಿಂದ ಹೊಡೆದು ಬರ್ಬರವಾಗಿ ಕೊಲೆಗೈದಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದ್ದು, ಬುಧವಾರ ಘಟನೆ ಬೆಳಕಿಗೆ ಬಂದಿದೆ.

ನಗರದ ನಿವಾಸಿಗಳಾದ ನಿಂಗಪ್ಪ ಬೆಣ್ಣೆಪ್ಪ ಶಿರಗುಪ್ಪಿ(28) ಹಾಗೂ ಗಣೇಶ ದಿನೇಶ ಕುಂದಾಪುರ(13) ಕೊಲೆಯಾದವರು. ಘಟನಾ ಸ್ಥಳಕ್ಕೆ ಹಾವೇರಿ ಶಹರ ಠಾಣೆಯ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯಾರೋ ಕೊಲೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Tap to resize

Latest Videos

ಇಬ್ಬರೂ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಊಟ ಮಾಡಿದ ಮೇಲೆ ನಿತ್ಯವೂ ಯತ್ತಿನಹಳ್ಳಿಯಲ್ಲಿ ಕಾಂಪ್ಲೆಕ್ಸ್‌ನಲ್ಲಿ ಬಂದು ಮಲಗುತ್ತಿದ್ದರು. ಬೆಳಗ್ಗೆ ಎದ್ದು ಅಲ್ಲಿಯೇ ಡೆಂಬಲ್ಸ್‌ಗಳಿಂದ ವ್ಯಾಯಾಮ ಮಾಡುತ್ತಿದ್ದರು. ಅದೇ ಡೆಂಬಲ್ಸ್‌ನಿಂದ ಇಬ್ಬರನ್ನು ಹೊಡೆದು ಹತ್ಯೆಗೈದಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ನವ ವಿವಾಹಿತೆಯ ಅನುಮಾನಸ್ಪದ ರೀತಿಯ ಸಾವು

ಬುಧವಾರ ಬೆಳಗ್ಗೆ ಬಾಗಿಲು ತೆರೆಯದೇ ಇರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಬಾಗಿಲು ತೆರೆದು ನೋಡಿದಾಗ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ಆಗಮಿಸಿದ ಪೊಲೀಸರು ಕೊಲೆಗೆ ಬಳಸಿದ ಡೆಂಬಲ್ಸ್‌ ಹಾಗೂ ಅಲ್ಲಿದ್ದ ವಸ್ತುಗಳ ಮೇಲಿನ ಬೆರಳಚ್ಚು ಪಡೆದರು. ಶ್ವಾನದಳದವರು ಪರಿಶೀಲನೆ ನಡೆಸಿದಾಗ ಶ್ವಾನವೂ ಘಟನಾ ಸ್ಥಳದಿಂದ ಸ್ವಲ್ಪ ದೂರ ಹೋಗಿ ಮರಳಿ ಬಂದಿದೆ.

ನಿಂಗಪ್ಪ ಈ ಹಿಂದೆ ರಾಣಿಬೆನ್ನೂರಿನಲ್ಲಿ ಡಕಾಯಿತಿ ಕೇಸ್‌ನ ಆರೋಪಿಯಾಗಿದ್ದು, ಬೇಲ್‌ ಮೇಲೆ ಹೊರಗೆ ಬಂದಿದ್ದ. ಹಳೆಯ ದ್ವೇಷವೇ ಆತನ ಹತ್ಯೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಆತನೊಂದಿಗಿದ್ದ ಬಾಲಕ ಗಣೇಶ ಸಹ ಬಲಿಯಾಗಿರುವುದು ದುರಂತ. ದುಷ್ಕರ್ಮಿಗಳು ನಿಂಗಪ್ಪನನ್ನು ಕೊಲೆ ಮಾಡುವುದನ್ನು ಈ ಬಾಲಕ ಎಲ್ಲಿ ಪೊಲೀಸರಿಗೆ ತಿಳಿಸುತ್ತಾನೆಯೇ ಎಂದು ಹೆದರಿ ಅಮಾಯಕ ಬಾಲಕನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ.

ಜೋಡಿ ಕೊಲೆಯ ಆರೋಪಿಗಳ ಪತ್ತೆಗೆ ಜಾಲ ಬೀಸಿರುವ ಪೊಲೀಸರು ಮೃತರ ಸಂಬಂಧಿಕರಿಂದ ರಾತ್ರಿ ಮನೆಯಿಂದ ಎಷ್ಟೊತ್ತಿಗೆ ಯಾರ ಜತೆಯಲ್ಲಿ ಹೋದರು ಎಂಬ ಮಾಹಿತಿ ಪಡೆದಿದ್ದಾರೆ. ಅವರ ಮಾಹಿತಿ ಆಧಾರ ಮೇಲೆ ನಾಲ್ಕೈದು ಜನರನ್ನು ಠಾಣೆಗೆ ಕರೆತಂದು ವಿಚಾರಣೆಯನ್ನು ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್‌ಪಿ ಕೆ.ಜಿ. ದೇವರಾಜ್‌, ಎಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ವಿಜಯಕುಮಾರ ಸಂತೋಷ, ಶಹರ ಠಾಣೆ ಸಿಪಿಐ ಪ್ರಹ್ಲಾದ ಚನ್ನಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
 

click me!