Drugs Racket: ಡ್ರಗ್ಸ್‌ ದಂಧೆ ಜತೆ ಸುಲಿಗೆಯನ್ನೂ ಮಾಡ್ತಿದ್ದ ಖತರ್ನಾಕ್‌ ಪೊಲೀಸರು

By Kannadaprabha NewsFirst Published Jan 23, 2022, 7:18 AM IST
Highlights

*  ಸಿಸಿಬಿ ತನಿಖೆ ಚುರುಕು
*  ಡ್ರಗ್ಸ್‌ ಸೇವಿಸುತ್ತಿದ್ದ ವ್ಯಕ್ತಿಯಿಂದ 5 ಸಾವಿರ ಸುಲಿಗೆ ಮಾಡಿದ ಆರೋಪ
*  ಬಂಧನದ ಸುದ್ದಿ ತಿಳಿದು ದೂರು
 

ಬೆಂಗಳೂರು(ಜ.23): ಮುಖ್ಯಮಂತ್ರಿಗಳ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದಾಗ ಡ್ರಗ್ಸ್‌(Drugs) ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಇಬ್ಬರು ಪೊಲೀಸ್‌ ಕಾನ್ಸ್‌ಟೇಬಲ್‌ಗಳ(Police Constables) ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಐದು ಸಾವಿರ ರು. ಸುಲಿಗೆ ಮಾಡಿದ್ದಾರೆಂದು ಆಡುಗೋಡಿಯ ಇಲಿಯಾಜ್‌ ಎಂಬುವರ ದೂರಿನ ಮೇರೆಗೆ ಡ್ರಗ್ಸ್‌ ಪ್ರಕರಣ ಆರೋಪಿಗಳಾದ ಕೋರಮಂಗಲ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ಗಳಾದ ಶಿವಕುಮಾರ್‌ ಮತ್ತು ಸಂತೋಷ್‌ನನ್ನು ಬಂಧಿಸಿ(Arrest) ಜೈಲಿಗಟ್ಟಲಾಗಿದೆ(Jail).

ಅ.25ರಂದು ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ದೂರುದಾರರಾದ ಇಲಿಯಾಜ್‌ ಹಾಗೂ ಆತನ ಸ್ನೇಹಿತ ಸೈಯದ್‌ ಅಲಿ ಕೋರಮಂಗಲ 3ನೇ ಬ್ಲಾಕ್‌ನ ಬಿಡಿಎ ಕಾಂಪ್ಲೆಕ್ಸ್‌ ಬಳಿ ಕುಳಿತು ಗಾಂಜಾ(Marijuana) ಸೇವಿಸುತ್ತಿದ್ದರು. ಈ ವೇಳೆ ಕಾನ್ಸ್‌ಟೇಬಲ್‌ಗಳಾದ ಶಿವಕುಮಾರ್‌ ಹಾಗೂ ಸಂತೋಷ್‌ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಸೈಯದ್‌ ಅಲಿ ಹೆದರಿ ಓಡಿ ಹೋಗಿದ್ದಾನೆ. ಬಳಿಕ ಇಲಿಯಾಜ್‌ನನ್ನು ಹಿಡಿದುಕೊಂಡು ತಪಾಸಣೆ ಮಾಡಿದಾಗ 2-3 ಸಿಗರೇಟ್‌ಗೆ ತುಂಬುವಷ್ಟು ಗಾಂಜಾವಿದ್ದ ಪೊಟ್ಟಣ ಸಿಕ್ಕಿದೆ. ಆಗ ಇಲಿಯಾಜ್‌ನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದಿರುವ ಕಾನ್ಸ್‌ಟೇಬಲ್‌ ಶಿವಕುಮಾರ್‌ ಹಾಗೂ ಸಂತೋಷ್‌ ಕೇಸ್‌ ಹಾಕುವುವಾಗಿ ಹೆದರಿಸಿದ್ದಾರೆ.

Bengaluru Drug Bust: ಜೈಲು ಪಾಲಾದ ಲೀಡರ್‌ಗೆ ಬೇಲ್‌ ಕೊಡಿಸಲು ಶಿಷ್ಯರಿಂದ ಡ್ರಗ್ಸ್‌ ದಂಧೆ

1 ಲಕ್ಷಕ್ಕೆ ಬೇಡಿಕೆ:

1 ಲಕ್ಷ ಕೊಟ್ಟರೆ ಕೇಸ್‌ ಹಾಕದೆ ಈಗಲೇ ಬಿಡುವುದಾಗಿ ಇಲಿಯಾಜ್‌ಗೆ ಹೇಳಿದ್ದಾರೆ. ಈ ವೇಳೆ ಇಲಿಯಾಜ್‌ ಅಷ್ಟೊಂದು ಹಣವಿಲ್ಲವೆಂದು ತನ್ನ ಬಳಿಯಿದ್ದ ಐದು ಸಾವಿರ ರು. ಮಾತ್ರವಿದೆ ಎಂದು ಹೇಳಿದ್ದಾನೆ. ಬಳಿಕ ಈ ಇಬ್ಬರು ಕಾನ್ಸ್‌ಟೇಬಲ್‌ಗಳು ಇಲಿಯಾಜ್‌ನಿಂದ ಐದು ಸಾವಿರ ರು. ಕಿತ್ತುಕೊಂಡು ಬಳಿಕ ಈ ವಿಚಾರವನ್ನು ಯಾರಿಗೂ ಹೇಳದಂತೆ ತಾಕೀತು ಮಾಡಿದ್ದಾರೆ. ಯಾರಿಗಾದರೂ ಹೇಳಿದರೂ ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿ ಠಾಣೆಯಿಂದ ಕಳುಹಿಸಿದ್ದಾರೆ.

ಬಂಧನದ ಸುದ್ದಿ ತಿಳಿದು ದೂರು:

ಬಳಿಕ ಇಲಿಯಾಜ್‌ ಈ ವಿಚಾರವನ್ನು ಎಲ್ಲಿಯಾದರೂ ಹೇಳಿದರೆ, ಜೈಲಿಗೆ ಹಾಕುತ್ತಾರೆಂದು ಹೆದರಿ ಯಾವುದೇ ದೂರು ನೀಡದೇ ಸುಮ್ಮನಾಗಿದ್ದರು. ಇತ್ತೀಚೆಗೆ ಈ ಇಬ್ಬರು ಕಾನ್ಸ್‌ಟೇಬಲ್‌ಗಳು ಡ್ರಗ್ಸ್‌ ದಂಧೆಯಲ್ಲಿ(Drugs Racket) ಭಾಗಿಯಾಗಿ, ಜೈಲು ಸೇರಿರುವ ಸುದ್ದಿ ತಿಳಿದು ಇಲಿಯಾಜ್‌ ಜ.19ರಂದು ಕೋರಮಂಗಲ ಠಾಣೆಗೆ ಬಂದು ಅ.25ರಂದು ತಮ್ಮ ಬಳಿ ಐದು ಸಾವಿರ ರು. ಸುಲಿಗೆ ಮಾಡಿದ್ದರೆಂದು ಈ ಇಬ್ಬರು ಪೇದೆಗಳ ವಿರುದ್ಧ ದೂರು(Complaint) ನೀಡಿದ್ದರು. ಈ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಸಿಪಿ ನಿರ್ಲಕ್ಷ್ಯ?

ಎರಡು ತಿಂಗಳ ಹಿಂದೆಯೇ ಈ ಇಬ್ಬರು ಕಾನ್ಸ್‌ಟೇಬಲ್‌ಗಳು ಡ್ರಗ್ಸ್‌ ದಂಧೆಯಲ್ಲಿ ಸಿಕ್ಕಿಬಿದ್ದಿದ್ದು, ಈ ಬಗ್ಗೆ ಕೋರಮಂಗಲ ಠಾಣೆ ಇನ್ಸ್‌ಪೆಕ್ಟರ್‌ ರವಿ, ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್‌ ಜೋಶಿಗೆ ವರದಿ ನೀಡಿದ್ದರು. ಆದರೆ, ಈ ವಿಚಾರವನ್ನು ಡಿಸಿಪಿ ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ. ಹೀಗಾಗಿ ನಗರ ಪೊಲೀಸ್‌ ಆಯುಕ್ತರು ಡಿಸಿಪಿಯ ವಿವರಣೆ ಕೇಳಿದ್ದರು. ಇದರ ಬೆನ್ನಲ್ಲೇ ಇದೀಗ ಇಬ್ಬರು ಆರೋಪಿಗಳನ್ನು ಹಳೇ ಪ್ರಕರಣದಲ್ಲಿ ಬಂಧಿಸಿ ಜೈಲಿಗಟ್ಟಲಾಗಿದೆ.

Drug Mafia: ರಾಜ್ಯದಲ್ಲಿ ಗಾಂಜಾ ಸಾಗಾಟ ಧಂದೆಗೆ ಪೊಲೀಸರೇ ಕಿಂಗ್‌ ಪಿನ್!‌

ಸಿಸಿಬಿ ತನಿಖೆ ಚುರುಕು

ಪೇದೆಗಳು ಭಾಗಿಯಾಗಿರುವ ಡ್ರಗ್ಸ್‌ ದಂಧೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು(CCB Police), ಪ್ರಕರಣದಲ್ಲಿ ಜೈಲು ಸೇರಿದ್ದ ಡ್ರಗ್‌ ಪೆಡ್ಲರ್‌ಗಳಾದ ಅಖಿಲ್‌ ರಾಜ್‌ ಹಾಗೂ ಅಮ್ಜದ್‌ ಖಾನ್‌ನನ್ನು ಬಾಡಿ ವಾರೆಂಟ್‌ ಮೇಲೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳು ರಾಜ್ಯ ಹಾಗೂ ಹೊರರಾಜ್ಯಗಳಿಂದ ಗಾಂಜಾ ತರಿಸಿಕೊಂಡು ಕಾನ್ಸ್‌ಟೇಬಲ್‌ಗಳಾದ ಶಿವಕುಮಾರ್‌ ಹಾಗೂ ಸಂತೋಷ್‌ಗೆ ತಲುಪಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಎಲ್ಲಿಂದ ಹಾಗೂ ಯಾರಿಂದ ಗಾಂಜಾ ಪಡೆಯುತ್ತಿದ್ದರು. ಎಷ್ಟುದಿನಗಳಿಂದ ಕಾನ್ಸ್‌ಟೇಬಲ್‌ಗಳಿಗೆ ಗಾಂಜಾ ಪೂರೈಸುತ್ತಿದ್ದರು. ಯಾರೆಲ್ಲಾ ಇವರ ಸಂಪರ್ಕದಲ್ಲಿದ್ದರು ಇತ್ಯಾದಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
 

click me!