Kidnap Case: ಮುನಿಸಿಕೊಂಡ ಪ್ರಿಯತಮೆ ಓಲೈಕೆಗೆ ಅಣ್ಣನ ಕಿಡ್ನಾಪ್‌: ಪಾಗಲ್‌ ಪ್ರೇಮಿ ಅಂದರ್‌

By Kannadaprabha News  |  First Published Jan 23, 2022, 4:47 AM IST

*   ವಿಡಿಯೋ ಕಾಲ್‌ ಮೂಲಕ ಹಿಂಸೆ ಕೊಡುವ ದೃಶ್ಯ ತೋರಿಸಿ ಬೆದರಿಕೆ
*   ಐವರನ್ನು ಬಂಧಿಸಿದ ಪೊಲೀಸರು
*   ಯುವತಿಗೆ ವಂಚಿಸಿ ಪರಾರಿ ಆಗಿದ್ದವ ಪೊಲೀಸರ ಬಲೆಗೆ


ಬೆಂಗಳೂರು(ಜ.23):  ತನ್ನಿಂದ ದೂರವಾದ ಪ್ರಿಯತಮೆಯನ್ನು(Lover) ಒಲೈಸಿಕೊಳ್ಳಲು ಆಕೆಯ ಅಣ್ಣನನ್ನು ಅಪಹರಿಸಿ, ಬಳಿಕ ಆತನಿಗೆ ದೈಹಿಕವಾಗಿ ಹಿಂಸಿಸುವುದನ್ನು ವಿಡಿಯೋ ಕಾಲ್‌ ಮಾಡಿ ತೋರಿಸಿದ್ದ ಪ್ರಿಯಕರ ಹಾಗೂ ಆತನ ಐವರು ಸಹಚರರು ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ(Police) ಸಿಕ್ಕಿಬಿದ್ದಿದ್ದಾರೆ.

ಹೆಗ್ಗನಹಳ್ಳಿ ಕ್ರಾಸ್‌ನ ಶ್ರೀನಿವಾಸ್‌ ಅಲಿಯಾಸ್‌ ಬೊಟ್ಟು ಸೀನ, ಬಸವೇಶ್ವರನಗರದ ರೌಡಿ ಶಿವಕುಮಾರ್‌, ಆಕಾಶ್‌, ಹುಚ್ಚೇಗೌಡ, ಗಂಗಾಧರ ಹಾಗೂ ಪ್ರತಾಪ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) ಕಾರು ಜಪ್ತಿ ಮಾಡಲಾಗಿದೆ. ಹೆರೋಹಳ್ಳಿ ಸಮೀಪ ತನ್ನ ಪ್ರಿಯತಮೆ ಸೋದರ ವೆಂಕಟೇಶ್‌ನನ್ನು ಸಹಚರರ ಮೂಲಕ ಗುರುವಾರ ರಾತ್ರಿ ಶ್ರೀನಿವಾಸ್‌ ಅಪಹರಣ ಮಾಡಿದ್ದ. ಬಳಿಕ ಸಂತ್ರಸ್ತೆ ನೀಡಿದ ದೂರು(Complaint) ಆಧರಿಸಿ ಕಾರ್ಯಾಚರಣೆಗಿಳಿದ ಇನ್ಸ್‌ಪ್ಟೆರ್‌ ರವಿಕುಮಾರ್‌, ಸಬ್‌ ಇನ್ಸ್‌ಪೆಕ್ಟರ್‌ ನವೀನ್‌ ಪ್ರಸಾದ್‌ ನೇತೃತ್ವದ ತಂಡವು ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಹೆಬ್ಬಾಳ ಸಮೀಪ ಆರೋಪಿಗಳನ್ನು ಪತ್ತ ಹಚ್ಚಿ ಅಪಹೃತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

undefined

Woman Murder: ಬಡ್ಡಿಗೆ ದುಡ್ಡು ಕೊಟ್ಟಿದ್ದಾಕೆಯ ಕೊಂದು ಒಡವೆ ಲೂಟಿ

ಕಾರಿನಲ್ಲೇ ಸುತ್ತಾಡಿಸಿ ಹಿಂಸೆ:

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಪತಿಯಿಂದ ಪ್ರತ್ಯೇಕವಾಗಿ ಹೆರೋಹಳ್ಳಿಯಲ್ಲಿರುವ ತಾಯಿ ಮನೆಗೆ ಸೌಮ್ಯ(ಹೆಸರು ಬದಲಾಯಿಸಲಾಗಿದೆ) ಬಂದು ನೆಲೆಸಿದ್ದಳು. ಆಗ ಹೆಗ್ಗನಹಳ್ಳಿ ಕ್ರಾಸ್‌ ಸಮೀಪ ವಾಹನಗಳ ಸಾಲ ವಸೂಲಿ ಜಪ್ತಿ ಏಜೆನ್ಸಿ ಹೊಂದಿರುವ ಶ್ರೀನಿವಾಸ್‌ನ ಪರಿಚಯವಾಗಿದ್ದು, ಬಳಿಕ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆದಿತ್ತು.

ಇತ್ತೀಚಿಗೆ ಈ ಜೋಡಿ ಮಧ್ಯೆ ಮನಸ್ತಾಪವಾಗಿತ್ತು. ಸಣ್ಣಪಟ್ಟ ವಿಚಾರಗಳಿಗೆ ತನಗೆ ಕಿರುಕುಳ(Harassment) ನೀಡುತ್ತಾನೆ ಎಂದು ಕೋಪಿಸಿಕೊಂಡ ಸೌಮ್ಯ, ಶ್ರೀನಿವಾಸ್‌ನಿಂದ ದೂರವಾಗಿದ್ದಳು. ಇದರಿಂದ ಬೇಸರಗೊಂಡ ಆತ, ಪ್ರಿಯತಮೆ ಮನವೊಲೈಕೆಗೆ ಕಸರತ್ತು ನಡೆಸಿ ವಿಫಲವಾಗಿದ್ದ. ಕೊನೆಗೆ ಆಕೆಯ ಅಣ್ಣನನ್ನು ಅಪಹರಿಸಿ ಕೊಲ್ಲುವುದಾಗಿ ಬ್ಲ್ಯಾಕ್‌ಮೇಲ್‌(Blackmail) ಮಾಡಿದರೆ ತನ್ನ ಬಳಿ ಸೌಮ್ಯ ಬರುತ್ತಾಳೆ ಎಂದು ಶ್ರೀನಿವಾಸ್‌ ಯೋಜಿಸಿದ್ದ. ಈ ಸಂಚಿಗೆ ರೌಡಿ ಶಿವಕುಮಾರ್‌ ಹಾಗೂ ಆತನ ಸಹಚರರ ಸಾಥ್‌ ಸಿಕ್ಕಿದೆ. ಅಂತೆಯೇ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಸೌಮ್ಯಳ ಅಣ್ಣನನ್ನು ಗುರುವಾರ ರಾತ್ರಿ 9.30ರ ವೇಳೆಗೆ ಹೆರೋಹಳ್ಳಿ ಸಮೀಪ ಆರೋಪಿಗಳು ಅಪಹರಿಸಿದ್ದರು.

ಬಳಿಕ ಸೌಮ್ಯಳಿಗೆ ವಿಡಿಯೋ ಕಾಲ್‌ ಮಾಡಿ ನೀನು ಬಾರದೆ ಹೋದರೆ ನಿನ್ನಣ್ಣನನ್ನು ಕೊಲ್ಲುವುದಾಗಿ(Murder) ಶ್ರೀನಿವಾಸ್‌ ಬೆದರಿಕೆ ಹಾಕಿದ್ದ. ಅಲ್ಲದೆ ಆಕೆಯ ಅಣ್ಣನಿಗೆ ವಿಡಿಯೋ ಕಾಲ್‌ ಮಾಡಿಕೊಂಡೇ ಕಾರಿನಲ್ಲಿ ಹಲ್ಲೆ ನಡೆಸಿದ್ದರು. ಈ ದೃಶ್ಯ ನೋಡಿ ಆತಂಕಗೊಂಡ ಆಕೆ, ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕೂಡಲೇ ಕಾರ್ಯಪ್ರವೃತ್ತರಾಗಿದ್ದರು. ಅಂತಿಮವಾಗಿ ಮೊಬೈಲ್‌ ಕರೆಗಳ ಆಧರಿಸಿ ಅಪಹರಣಕಾರರನ್ನು ಸೆರೆ ಹಿಡಿಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿಗೆ ವಂಚಿಸಿ ಪರಾರಿ ಆಗಿದ್ದವ ಪೊಲೀಸರ ಬಲೆಗೆ

ಪೀಣ್ಯದಾಸರಹಳ್ಳಿ: ಮದುವೆ ಆಗುವುದಾದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿ(Pregnent) ಮಾಡಿ ಕೈಕೊಟ್ಟು ಪರಾರಿ ಆಗಿದ್ದ ಯುವಕನನ್ನು 2 ತಿಂಗಳ ಬಳಿಕ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

Crime News: ಕ್ರೈಸ್ತ ಶಾಲೆಯಲ್ಲಿ ಮತಾಂತರಕ್ಕೆ ಒತ್ತಾಯ: ವಿದ್ಯಾರ್ಥಿನಿ ಆತ್ಮಹತ್ಯೆ

ಗೊರಗುಂಟೆಪಾಳ್ಯ ನಿವಾಸಿ ಅರುಣ್‌(28) ಬಂಧಿತ. ಅರುಣ್‌ನ ಸಂಬಂಧಿಕರ ಕಾರ್ಯಕ್ರಮವೊಂದರಲ್ಲಿ ಈವೆಂಟ್‌ ಮ್ಯಾನೇಜ್‌ಮೆಂಟ್‌ ಮಾಡುತ್ತಿದ್ದ ಸಂತ್ರಸ್ತೆಯ ಪರಿಚಯವಾಗಿತ್ತು. ಪರಿಚಯ ಸಲುಗೆಗೆ ತಿರುಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರು ಲಿವಿಂಗ್‌ ಟುಗೆದರ್‌(Living Together) ಸಂಬಂಧದಲ್ಲಿದ್ದರು. 

ಈ ನಡುವೆ ಇಬ್ಬರು ಮದುವೆ ಆಗಲು ತೀರ್ಮಾನಿಸಿದ್ದರು. ಈ ವೇಳೆ ಯುವತಿಯನ್ನು ಜತೆ ಆರೋಪಿ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದೇ, 4 ಲಕ್ಷ ಸಹ ಪಡೆದಿದ್ದ ಎನ್ನಲಾಗಿದೆ. ಕೊನೆಗೆ ಸಂತ್ರಸ್ತೆ ಗರ್ಭಿಣೆಯಾದ ವಿಷಯ ತಿಳಿದ ಆರೋಪಿ, ಗರ್ಭಪಾತ ಮಾಡಿಸಿಕೊಳ್ಳದಿದ್ದರೆ ಮದುವೆ ಆಗುವುದಿಲ್ಲ ಎಂದು ಒತ್ತಡ ಹಾಕಿದ್ದ. ಕೊನೆಗೆ ಯುವತಿಗೆ ಕೈ ಕೊಟ್ಟು ಪರಾರಿ ಆಗಿದ್ದ. ಈ ಸಂಬಂಧ ಯುವತಿ 2 ತಿಂಗಳ ಹಿಂದೆ ಬಾಗಲಗುಂಟೆ ಠಾಣೆಗೆ ದೂರು ಸಲ್ಲಿಸಿದ್ದಳು. ಸತತ ಕಾರ್ಯಾಚರಣೆ ನಡೆಸಿದ ಎಸ್‌ಐ ಅರುಣ್‌ ನೇತೃತ್ವದ ತಂಡವು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

click me!