ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಅನ್ಸರುಲ್ಲಾ ಬಾಂಗ್ಲಾ ಮೂಲದ ಉಗ್ರರ ಕರಿ ನೆರಳು ಬಿದ್ದಿದ್ದು, ಎನ್‌ಐಎ ಅಧಿಕಾರಿಗಳು ತಂಡ ಉಗ್ರರ ಅಡಗುತಾಣಗಳ ಬಗ್ಗೆ ತೀವ್ರ ತನಿಖೆ ನಡೆಸಿದೆ.
ಬೆಂಗಳೂರು, (ನ.22): ಸಿಲಿಕಾನ್ ಸಿಟಿಯಲ್ಲಿ ಬಾಂಗ್ಲಾ ಮೂಲದ ಉಗ್ರರು ನೆಲೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ರಾಷ್ಟ್ರೀಯ ತನಿಖಾ ತಂಡ ಚುರುಕಿನ ತಪಾಸಣೆ ನಡೆಸಿದೆ.
ಬೆಂಗಳೂರಿನ ಸೋಲದೇವನಹಳ್ಳಿಯ ಪ್ಯಾರಡೈಸ್ ಪಿಜಿಯಲ್ಲಿ ಉಗ್ರರು ಅಡಗಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಎನ್‌ಐಎ ಅಧಿಕಾರಿಗಳು ತಪಾಸಣೆ ತೀವ್ರಗೊಳಿಸಿದ್ದಾರೆ. ಕೋಲ್ಕತ್ತಾ ಎನ್‌ಐಎ ಅಧಿಕಾರಿಗಳು ಕೆಲ ದಿನಗಳ ಹಿಂದೆ ಮೇಘಾಲಯದಲ್ಲಿ ಫರ್ಹಾನ್ ಎಂಬಾತನನ್ನು ಬಂಧಿಸಿದ್ದರು.
ಸ್ಫೋಟಕ ಮಾಹಿತಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಗ್ರರ ಕರಿ ನೆರಳು
ಬಾಂಗ್ಲಾ ಮೂಲದ ಅನ್ಸರುಲ್ಲಾ ಎಂಬ ಉಗ್ರ ಸಂಘಟನೆಯ ಭಯೋತ್ಪಾದಕರು ವಿದ್ಯಾರ್ಥಿಗಳ ಸೋಗಿನಲ್ಲಿ ಬೆಂಗಳೂರಿನ ಸೋಲದೇವನಹಳ್ಳಿಯ ಪಿಜಿಯಲ್ಲಿ ನೆಲೆಸಿದ್ದಾರೆಂಬ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಅಲ್ಲದೇ ಈತನೊಂದಿಗೆ ಇನ್ನೊಬ್ಬ ಉಗ್ರ ಇದೇ ಪಿಜಿಯಲ್ಲಿ ತಂಗಿದ್ದ ವಿಚಾರವನ್ನೂ ಸಹ ಎನ್‌ಐಎ ಅಧಿಕಾರಿಗಳ ಮುಂದೆ ಹೇಳಿದ್ದಾನೆ.
ಈ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ಎನ್‌ಐಎ ಅಧಿಕಾರಿಗಳು ಸೋಲದೇವನಹಳ್ಳಿಯ ಪಿಜಿಯನ್ನು ಮಹಾಜರು ಮಾಡಿದ್ದು, ಉಗ್ರರ ಅಡಗುತಾಣಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಆಯ್ತು, ಇದೀಗ ಮತ್ತೊಂದು ಬಾಂಗ್ಲಾ ಉಗ್ರ ಸಂಘಟನೆ ನಗರಕ್ಕೆ ಎಂಟ್ರಿ ಕೊಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಉಗ್ರರ ವಾಸ್ತವ್ಯಕ್ಕೆ ಬೆಂಗಳೂರು ಸೇಫ್ ಸಿಟಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.