
ನವದೆಹಲಿ(ಜ.13): ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆ ವಿಧ್ವಂಸಕ ಕೃತ್ಯ, ಆತ್ಮಾಹುತಿ ದಾಳಿ ಎಸಗಲು ಯೋಜನೆ ರೂಪಿಸಿದ್ದ ಪಾಕಿಸ್ತಾನ ಮೂಲದ ಅತ್ಯುಗ್ರ ಭಯೋತ್ಪಾದನಾ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ದ 8 ಶಂಕಿತ ಉಗ್ರರ ವಿರುದ್ಧ ಎನ್‌ಐಎ ಶುಕ್ರವಾರ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. 8 ಮಂದಿಯಲ್ಲಿ 6 ಜನರನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿರುವ ಎನ್‌ಐಎ, ಇವರ ವಿರುದ್ಧ ಉಗ್ರವಾದಕ್ಕೆ ಪಿತೂರಿ, ಆತ್ಮಾಹುತಿ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂಬ ಆರೋಪ ಹೊರಿಸಿದೆ.
ಈ ಪ್ರಕರಣದ ಪ್ರಮುಖ ಸೂತ್ರಧಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೇರಳ ಮೂಲದ ನಸೀರ್ ಆಗಿದ್ದು, ಇಬ್ಬರು ಉಗ್ರರಾದ ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದೆ.
ಇವರಲ್ಲದೇ ಕಳೆದ ಜುಲೈ 19ರಂದು ಬೆಂಗಳೂರಲ್ಲಿ ಬಂಧಿತರಾಗಿದ್ದ ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಉಮರ್, ಝಹೀದ್ ತಬ್ರೇಜ್, ಸೈಯದ್ ಮುದಾಸಿರ್ ಮತ್ತು ಫೈಸಲ್ ರಬ್ಬಾನಿ ಹೆಸರುಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಇವರೆಲ್ಲರ ವಿರುದ್ಧ ಐಪಿಸಿ, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ, ಸ್ಫೋಟಕಗಳ ಸಾಗಣೆ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್
ಏನಿದು ಪ್ರಕರಣ?:
ಬೆಂಗಳೂರಿನಲ್ಲಿ ಸ್ಫೋಟ ಕೃತ್ಯ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಅನುಮಾನದ ಮೇಲೆ ಜು.18ರಂದು ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.19ರಂದು ದಾಳಿ ನಡೆಸಿದ ಪೊಲೀಸರು ಐವರು ಲಷ್ಕರ್ ಉಗ್ರರನ್ನು ಬಂಧಿಸಿದ್ದರು. ಈ ವೇಳೆ ಇವರಿಂದ 7 ನಾಡ ಪಿಸ್ತೂಲುಗಳು, 45 ಜೀವಂತ ಗುಂಡುಗಳು, ವಾಕಿವಾಟಿಗಳು, ಡ್ಯಾಗರ್‌ಗಳು ಮತ್ತು 12 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣ ರಾಷ್ಟ್ರೀಯ ಭದ್ರತೆ ಸಂಬಂಧಿಸಿದ ಕಾರಣದಿಂದ 2023ರ ಅಕ್ಟೋಬರ್‌ನಲ್ಲಿ ಎನ್‌ಐಎ ಈ ಪ್ರಕರಣವನ್ನು ತನಿಖೆಗೆ ವಹಿಸಿಕೊಂಡಿತ್ತು.
ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು, ಬೆದರಿಕೆ ಪತ್ರದ ಬೆನ್ನಲ್ಲೇ ಕೇರಳದಲ್ಲಿ ಹೈ ಅಲರ್ಟ್!
ಈ ಪ್ರಕರಣದ ಕುರಿತಾಗಿ ತನಿಖೆ ಆರಂಭಿಸಿದ ಎನ್‌ಐಎ, ಈ ಉಗ್ರರು ಅನ್ಯ ಕೇಸಿನಲ್ಲಿ ಬಂಧಿತರಾಗಿದ್ದಾಗ 2017ರಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಟ್ಟಾಗಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದರು. ಬಳಿಕ 7 ಮಂದಿ ಜೈಲಿಂದ ಬಿಡುಗಡೆ ಆಗಿದ್ದರು. ನಂತರ ಜೈಲಲ್ಲೇ ಇದ್ದ ನಸೀರ್‌ಗೆ ಅನ್ಯ ಕೇಸಿನಲ್ಲಿ ಶಿಕ್ಷೆಯಾದರೆ ಇಬ್ಬರು ಪರಾರಿಯಾಗಿದ್ದರು. 5 ಜನರು ಕಳೆದ ವರ್ಷ ಜು.18ರಂದು ಮತ್ತೆ ಬಂಧಿತರಾಗಿದ್ದರು.
ಇವರು ಯುವಕರ ಬ್ರೈನ್‌ವಾಶ್ ಮಾಡಿ ಉಗ್ರ ಸಂಘಟನೆಗಳಿಗೆ ಸೇರ್ಪಡೆ ಮಾಡುತ್ತಿದ್ದರು. ಅಕ್ರಮವಾಗಿ ಉಗ್ರ ಸಂಘಟನೆಗಳಿಗೆ ಹಣ ರವಾನೆ ಮಾಡುತ್ತಿದ್ದರು ಎಂದು ಪತ್ತೆ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಮೊದಲ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರೆಸಿದೆ ಎಂದು ಎನ್‌ಐಎ ವಕ್ತಾರರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ