* ವೈದ್ಯರ ನಿರ್ಲಕ್ಷ್ಯಕ್ಕೆ ಉಸಿರು ಚೆಲ್ಲಿದ ನವವಿವಾಹಿತೆ..!
* ಜ್ವರ ಎಂದು ಆಸ್ಪತ್ರೆಗೆ ದಾಖಲಾದವಳು ವಾಪಸ್ ಶವವಾಗಿ ಬಂದಳು
* ಯುವತಿ ಸಾವಿಗೆ ನ್ಯಾಯ ಒದಗಿಸುವಂತೆ ಕುಟುಂಬಸ್ಥರ ಒತ್ತಾಯ
ಕಾರವಾರ, (ಮೇ.29): ಆಕೆ ಕೆಲವೇ ದಿನಗಳ ಹಿಂದೆಯಷ್ಟೇ ಕೌಟುಂಬಿಕ ಜೀವನಕ್ಕೆ ಕಾಲಿರಿಸಿದ್ದ ಯುವತಿ. ಹಲವಾರು ಕನಸ್ಸುಗಳನ್ನು ಹೊತ್ತು ಹೊಸ ಜೀವನ ಆರಂಭಿಸಿದ್ದಾಕೆಗೆ ವಿಧಿ ಬೇರೆ ದಾರಿ ತೋರಿಸಿದೆ. ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ವೈದ್ಯರ ನಿರ್ಲಕ್ಷ್ಯಕ್ಕೆ ಪ್ರಾಣ ಕಳೆದುಕೊಳ್ಳುವಂತಾಗಿದ್ದು, ಮನೆಯವರಿಗೆ ಬರಸಿಡಿಲು ಬಡಿದಂತಾಗಿದೆ. ಯುವತಿ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ನ್ಯಾಯ ಒದಗಿಸಲೇಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ..
ಕೇವಲ 19 ದಿನಗಳ ಹಿಂದೆಯಷ್ಟೇ ಹಸೆಮಣೆ ಏರಿ ಹೊಸ ಜೀವನ ಆರಂಭಿಸಿದ್ದ ಆ ಯುವತಿ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದಳು. ಹೊಸ ಉತ್ಸಾಹದಿಂದ ಬದುಕು ಆರಂಭಿಸಿದ್ದಾಕೆ ಜ್ವರದಿಂದ ಅಸ್ಪತ್ರೆಗೆ ದಾಖಲಾಗಿದ್ದಳು. ಆದರೆ, ವೈದ್ಯರ ನಿರ್ಲಕ್ಷ್ಯದಿಂದಾಗಿ ಆ ಯುವತಿ ಉಸಿರನ್ನೇ ನಿಲ್ಲಿಸುವಂತಾಗಿದೆ. ಇಂತಹದ್ದೊಂದು ದುರಂತ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದ್ದು, ಯುವತಿಯ ಕುಟುಂಬಸ್ಥರು ನ್ಯಾಯಕ್ಕಾಗಿ ಇದೀಗ ಠಾಣೆಯ ಮೆಟ್ಟಿಲೇರಿದ್ದಾರೆ. 24 ವರ್ಷದ ನವ ವಿವಾಹಿತೆ ಸನಾ ಮಾಂಜ್ರೇಕರ್ ಮೃತ ದುರ್ದೈವಿ.
Dowry case 3 ಸಹೋದರಿಯರು, ಇಬ್ಬರು ಮಕ್ಕಳ ಶವ ಬಾವಿಯಲ್ಲಿ ಪತ್ತೆ, ಕೊಲೆ ಶಂಕೆ!
ಕಾರವಾರ ತಾಲ್ಲೂಕಿನ ಕಿನ್ನರ ಗ್ರಾಮದ ನಿವಾಸಿಯಾಗಿದ್ದ 24 ವರ್ಷದ ಯುವತಿ ಸನಾ ಯಾನೆ ಮನೀಷಾಗೆ ಕಡವಾಡ ಗ್ರಾಮದ ನಿವಾಸಿ ಸ್ವಪ್ನಿಲ್ ಮಾಂಜ್ರೇಕರ್ ಎಂಬಾತನೊಂದಿಗೆ ಮೇ.10 ರಂದು ವಿವಾಹವಾಗಿತ್ತು. ಕಳೆದ 8 ದಿನಗಳ ಹಿಂದೆ ಈ ಯುವತಿಗೆ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು. ಇದಾದ ಬಳಿಕ ನಿನ್ನೆ ಮಧ್ಯಾಹ್ನದ ಮತ್ತೆ ಜ್ವರ, ತಲೆನೋವು ಕಾಣಿಸಿಕೊಂಡ ಹಿನ್ನೆಲೆ ಕಾರವಾರ ನಗರದ ಕಾಜುಭಾಗ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸನಾಳನ್ನು ದಾಖಲಿಸಲಾಗಿತ್ತು.
ಅಲ್ಲಿ ಆಕೆಗೆ ಗ್ಲುಕೋಸ್ ಏರಿಸಿದ್ದು, ರಾತ್ರಿ ವೇಳೆಗೆ ಕೊಂಚ ಚೇತರಿಸಿಕೊಂಡಿದ್ದಳು. ಇದಾದ ಬಳಿಕ ಊಟ ಮಾಡಲು ಮುಂದಾಗಿದ್ದಾಗ ಆಸ್ಪತ್ರೆಯ ಶುಶ್ರೂಷಕಿ ಸನಾಳಿಗೆ 4 ಇಂಜೆಕ್ಷನ್ ನೀಡಿದ್ದರು. ಆದರೆ, ಇಂಜೆಕ್ಷನ್ ನೀಡಿದ ಕೆಲವೇ ಹೊತ್ತಿನಲ್ಲಿ ಆಕೆಗೆ ಹೊಟ್ಟೆ ಉರಿ ಕಾಣಿಸಿಕೊಂಡಿದ್ದು ಉಸಿರಾಟದಲ್ಲೂ ಏರುಪೇರಾಗಿತ್ತು. ಕೂಡಲೇ ಪರಿಶೀಲಿಸಿದ ಆಸ್ಪತ್ರೆ ಸಿಬ್ಬಂದಿ ಐಸಿಯು ವ್ಯವಸ್ಥೆ ಇಲ್ಲದ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ. ಅಂಬ್ಯುಲೆನ್ಸ್ ಮೂಲಕ ಸನಾಳನ್ನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲು ಪ್ರಯತ್ನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ 4.30ಕ್ಕೆ ಕೊನೆಯುಸಿರೆಳೆದಿದ್ದಾಳೆ.
ಇನ್ನು ಸನಾಳನ್ನು ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ತರುವಾಗಲೇ ಆಕೆಯ ಪರಿಸ್ಥಿತಿ ಗಂಭೀರವಾಗಿತ್ತು ಎನ್ನಲಾಗಿದೆ. ತಡರಾತ್ರಿ ವೇಳೆಗೆ ಆಸ್ಪತ್ರೆಗೆ ಕರೆತಂದಾಗ ಉಸಿರಾಟ ಸಮಸ್ಯೆ ಇದ್ದಿದ್ದರಿಂದಾಗಿ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಪರಿಸ್ಥಿತಿ ಕೈಮೀರಿ ಹೋಗಿದ್ದರಿಂದಾಗಿ ಆಕೆ ಚಿಕಿತ್ಸೆಗೆ ಸಮರ್ಪಕವಾಗಿ ಸ್ಪಂದಿಸಿಲ್ಲದ್ದರಿಂದ ಬೆಳಗಿನ ಜಾವ 4.30ರ ವೇಳೆಗೆ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆ ಕುಟುಂಬಸ್ಥರು ಖಾಸಗಿ ಆಸ್ಪತ್ರೆ ಎದುರು ಜಮಾವಣೆಯಾಗಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಾರವಾರ ನಗರ ಠಾಣೆಗೆ ಆಗಮಿಸಿದ ಕುಟುಂಬಸ್ಥರು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ನವವಿವಾಹಿತೆ ಸಾವನ್ನಪ್ಪಿದ್ದಾಗಿ ಆರೋಪಿಸಿ ದೂರು ನೀಡಿದ್ದಾರೆ. ಯುವತಿ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ಹತ್ತು ಹಲವು ಕನಸ್ಸುಗಳನ್ನು ಹೊತ್ತುಕೊಂಡು ಹೊಸಜೀವನ ಆರಂಭಿಸಿದ್ದ ಯುವತಿ ಮದುವೆಯಾದ 19 ದಿನದಲ್ಲೇ ಸಾವನ್ನಪ್ಪುವಂತಾಗಿರೋದು ನಿಜಕ್ಕೂ ದುರಂತವೇ. ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೋ ಅಥವಾ ಇತರ ಆರೋಗ್ಯ ಸಮಸ್ಯೆ ಕಾರಣವೇ ಅನ್ನೋದು ಮರಣೋತ್ತರ ಪರೀಕ್ಷೆ ಬಳಿಕವೇ ತಿಳಿದು ಬರಬೇಕಷ್ಟೇ.