ದಾವಣಗೆರೆ ಬಿಜೆಪಿ ಸಂಸದ ಸಿದ್ದೇಶ್ವರ್‌ಗೆ ‘ಬೆತ್ತಲೆ ಗ್ಯಾಂಗ್‌’ ಸುಲಿಗೆ ಯತ್ನ..!

By Kannadaprabha NewsFirst Published Jul 27, 2023, 10:26 AM IST
Highlights

ಇತ್ತೀಚೆಗೆ ಅಪರಿಚಿತ ಯುವತಿ ಕರೆ ಮಾಡಿ ಕಿಡಿಗೇಡಿ ಕೃತ್ಯ ಎಸಗಿದ್ದು, ಈ ಸಂಬಂಧ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಸಿದ್ದೇಶ್ವರ್‌ ದೂರು ದಾಖಲಿಸಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡು ಆನ್‌ಲೈನ್‌ ‘ಬೆತ್ತಲೆ ಗ್ಯಾಂಗ್‌’ ಪತ್ತೆಗೆ ಬಲೆಗೆ ಬೀಸಿದ ಪೊಲೀಸರು 

ಬೆಂಗಳೂರು(ಜು.27):  ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಹಿರಿಯ ಸಂಸದ ಜಿ.ಎಂ.ಸಿದ್ದೇಶ್ವರ್‌ ಅವರ ಮೊಬೈಲ್‌ಗೆ ವಾಟ್ಸಾಪ್‌ ವಿಡಿಯೋ ಕರೆ ಮಾಡಿ ಅಶ್ಲೀಲ ಸಂಭಾಷಣೆ ನಡೆಸಿ ಅಸಭ್ಯ ಫೋಟೋಗಳನ್ನು ಕಳುಹಿಸಿ ಅಪರಿಚಿತೆಯೊಬ್ಬಳು ಹಣ ಸುಲಿಗೆಗೆ ಯತ್ನಿಸಿರುವ ಘಟನೆ ನಡೆದಿದೆ.

ಇತ್ತೀಚೆಗೆ ಅಪರಿಚಿತ ಯುವತಿ ಕರೆ ಮಾಡಿ ಕಿಡಿಗೇಡಿ ಕೃತ್ಯ ಎಸಗಿದ್ದು, ಈ ಸಂಬಂಧ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಸಿದ್ದೇಶ್ವರ್‌ ದೂರು ದಾಖಲಿಸಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡು ಆನ್‌ಲೈನ್‌ ‘ಬೆತ್ತಲೆ ಗ್ಯಾಂಗ್‌’ ಪತ್ತೆಗೆ ಪೊಲೀಸರು ಬಲೆಗೆ ಬೀಸಿದ್ದಾರೆ.

ಕಾಂಗ್ರೆಸ್‌ ‘ಗ್ಯಾರಂಟಿ’ಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲವೆನ್ನುವುದು ಸರಿಯಲ್ಲ: ಸಂಸದ ಸಿದ್ದೇಶ್ವರ

ಖಾಸಗಿ ಫೋಟೋ ಕಳುಹಿಸಿ ಧಮ್ಕಿ:

ಜು.20ರಂದು ರಾತ್ರಿ 10.16ರ ಸುಮಾರಿಗೆ ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್‌ ಅವರಿಗೆ ‘ಹೌ ಆರ್‌ ಯೂ’ ಎಂದು ಅನಾಮೇಧಯ (ಮೊ.9093133690) ವಾಟ್ಸಾಪ್‌ ಮೆಸೇಜ್‌ ಬಂದಿದೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿಲ್ಲ. ನಂತರ ರಾತ್ರಿ 10.22ಕ್ಕೆ ಅದೇ ಸಂಖ್ಯೆಯಿಂದ ಮತ್ತೆ ಸಿದ್ದೇಶ್ವರ್‌ ಅವರಿಗೆ ವಾಟ್ಸಾಪ್‌ನಲ್ಲಿ ವಿಡಿಯೋ ಕರೆ ಮಾಡಿ ಹಿಂದಿಯಲ್ಲಿ ಅಪರಿಚಿತ ಮಹಿಳೆ ಮಾತನಾಡಿದ್ದಾಳೆ. ಆಗ ಹಿಂದಿಯಲ್ಲೇ ‘ಯಾಕೆ ಕರೆ ಮಾಡಿದ್ದು, ಯಾರು ನೀನು’ ಎಂದೆಲ್ಲ ವಿಚಾರಿಸಿದಾಗ ತಕ್ಷಣವೇ ಆಕೆ ಆಶ್ಲೀಲ ಮತ್ತು ಅಸಭ್ಯವಾಗಿ ಮಾತನಾಡಲು ಶುರು ಮಾಡಿದ್ದಾಳೆ. ಕೂಡಲೇ ಸಿದ್ದೇಶ್ವರ್‌ ಕರೆ ಸ್ಥಗಿತಗೊಳಿಸಿದ್ದಾರೆ.

ಮತ್ತೆ ರಾತ್ರಿ 10.24ಕ್ಕೆ ವಾಟ್ಸಾಪ್‌ನಲ್ಲಿ ಆಡಿಯೋ ಕರೆ ಮಾಡಿ ಮಾತನಾಡಲು ಶುರು ಮಾಡಿದಾಗಲೂ ಕರೆ ಸ್ಥಗಿತಗೊಳಿಸಿದ್ದಾರೆ. ಇದಾದ ಬಳಿಕ 10.27ಕ್ಕೆ ವಾಟ್ಸಾಪ್‌ನಲ್ಲಿ ವಿಡಿಯೋ ಕಾಲ್‌ ಮಾಡಿ ಮಾಜಿ ಸಚಿವರ ಭಾವಚಿತ್ರದೊಂದಿಗೆ ಆಕೆಯ ಮುಖ ಮತ್ತು ಖಾಸಗಿ ಅಂಗಗಳ ಪ್ರದರ್ಶನ ಮಾಡಿ ಅಸಭ್ಯ ಹಾಗೂ ಅಶ್ಲೀಲವಾಗಿ ಮಾತನಾಡಲು ಪ್ರಾರಂಭಿಸಿದ್ದಾಳೆ. ಆಗ ಪಕ್ಕದಲ್ಲೇ ಇದ್ದ ತಮ್ಮ ಪತ್ನಿಗೆ ಮಾಜಿ ಸಚಿವರು ಮೊಬೈಲ್‌ ನೀಡಿದ್ದಾರೆ. ಕೂಡಲೇ ಕರೆ ಸ್ಥಗಿತಗೊಂಡಿದೆ. ರಾತ್ರಿ 10.47ಕ್ಕೆ ವಾಟ್ಸಾಪ್‌ ಮೆಸೇಜ್‌ ಕಳುಹಿಸಿದ ಅಪರಿಚಿತೆ ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುತ್ತೇನೆ ಎಂದು ಬೆದರಿಸಿದ್ದಾಳೆ. ಮರುದಿನ ಜು.21ರಂದು ಸಹ ಮಾಜಿ ಸಚಿವರಿಗೆ ಅಪರಿಚಿತಳಿಂದ ಬೆದರಿಕೆ ಕರೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ತಮಗೆ ಅಶ್ಲೀಲ ವಿಡಿಯೋ ಕಳುಹಿಸಿ ಬೆದರಿಕೆ ಹಾಕುತ್ತಿರುವ ಅಪರಿಚಿತ ಮಹಿಳೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಿದ್ದೇಶ್ವರ್‌ ದೂರು ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.

ಬೊಗಳೋ ನಾಯಿ ಕಚ್ಚೋಲ್ಲ, ಕಚ್ಚೋ ನಾಯಿ ಬೊಗಳಲ್ಲ, ಮಲ್ಲಿಕಾರ್ಜುನ್‌ಗೆ ಠಕ್ಕರ್ ಕೊಟ್ಟ ಜಿಎಂ ಸಿದ್ದೇಶ್ವರ್

ಮಾಜಿ ಸಚಿವರಿಗೆ ರಾಜಸ್ಥಾನದಿಂದ ಕರೆ:

ಮಾಜಿ ಸಚಿವರಿಗೆ ಬಂದಿದ್ದ ಅನಾಮಧೇಯ ಮಹಿಳೆಯ ಪತ್ತೆಗೆ ತನಿಖೆ ಆರಂಭಿಸಿದ ಪೊಲೀಸರು, ಆ ವಾಟ್ಸಾಪ್‌ ಕರೆಯನ್ನು ಶೋಧಿಸಿದಾಗ ರಾಜಸ್ಥಾನದಿಂದ ಬಂದಿರುವುದು ಗೊತ್ತಾಗಿದೆ. ಆರೋಪಿ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏನಿದು ಬೆತ್ತಲೆ ಗ್ಯಾಂಗ್‌?:

ಫೇಸ್‌ಬುಕ್‌, ವಾಟ್ಸಾಪ್‌ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರಿಗೆ ಸುಂದರ ಯುವತಿಯರ ಸೋಗಿನಲ್ಲಿ ಕಿಡಿಗೇಡಿಗಳು ಗಾಳ ಹಾಕುತ್ತಾರೆ. ನಂತರ ನಾಜೂಕಿನ ಮಾತುಗಳನ್ನಾಡುತ್ತಾ ಅಶ್ಲೀಲ ಸಂಭಾಷಣೆ ನಡೆಸಿ ಪುಸಲಾಯಿಸಿ ಬೆತ್ತಲೆಗೊಳಿಸಿ ಫೋಟೋ ಹಾಗೂ ವಿಡಿಯೋ ಮಾಡಿಕೊಳ್ಳುತ್ತಾರೆ. ನಂತರ ಈ ಬೆತ್ತಲೆ ವಿಡಿಯೋ ಹಾಗೂ ಫೋಟೋಗಳನ್ನು ಮುಂದಿಟ್ಟು ಗಾಳಕ್ಕೆ ಬಿದ್ದ ಸಂತ್ರಸ್ತರಿಂದ ದುಷ್ಕರ್ಮಿಗಳು ಹಣ ಸುಲಿಗೆ ಮಾಡುತ್ತಾರೆ. ಈಗಾಗಲೇ ಬೆತ್ತಲೆ ಗ್ಯಾಂಗ್‌ ಕಾಟಕ್ಕೆ ಕೆಲವರು ಜೀವ ಸಹ ಕಳೆದುಕೊಂಡಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಸ್ನೇಹ ಮಾಡುವಾಗ ಜಾಗೃತೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

click me!