
ಬೆಂಗಳೂರು(ಜು.27): ಇತ್ತೀಚಿಗೆ ಮದ್ಯದ ಅಮಲಿನಲ್ಲಿ ಆಂಬ್ಯುಲೆನ್ಸ್ ಚಾಲಕ ಮುತ್ತುರಾಜು ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ವರು ಕಿಡಿಗೇಡಿಗಳು ಅದೇ ಬಿಯರ್ ಬಾಟಲ್‌ನಿಂದಲೇ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸೇರಿದ ಕುತೂಹಲಕಾರಿ ಘಟನೆ ನಡೆದಿದೆ.
ಮಾರೇನಹಳ್ಳಿ ಸಮೀಪದ ಕನಕನಗರದ ಆದಿಲ್, ರಾಜು, ರಾಕೇಶ್ ಹಾಗೂ ಅಫ್ರೋಜ್ ಬಂಧಿತರಾಗಿದ್ದು, ಕೆಲ ದಿನಗಳ ಹಿಂದೆ ಮೂಡಲಪಾಳ್ಯ ಸಮೀಪ ಮುತ್ತುರಾಜು ಹಾಗೂ ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಚಂದ್ರಾಲೇಔಟ್ ಠಾಣೆ ಪೊಲೀಸರು, ಘಟನಾ ಸ್ಥಳದಲ್ಲಿ ಪತ್ತೆಯಾದ ಬಿಯರ್ ಬಾಟಲ್‌ನ ಮುಚ್ಚಳದ ಮೇಲಿನ ನಂಬರ್ ಆಧರಿಸಿ ತನಿಖೆ ನಡೆಸಿದಾಗ ಹಲ್ಲೆಕೋರರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು: ಹೆಂಡ್ತಿ ಬಗ್ಗೆ ಕೆಟ್ಟದಾಗಿ ಮಾತಾಡಿದ ಸಂಬಂಧಿಕಗೆ ಬಿಯರ್ ಬಾಟಲಲ್ಲಿ ಹಲ್ಲೆ
ಆಂಬ್ಯುಲೆನ್ಸ್ ಚಾಲಕ ಮುತ್ತುರಾಜು, ಜು.17 ರಂದು ನಾಗರಬಾವಿ ಮುಖ್ಯರಸ್ತೆಯ ಮೂಡಲಪಾಳ್ಯದಲ್ಲಿರುವ ಮಿಲೇನಿಯಂ ಬಾರ್‌ಗೆ ತಮ್ಮ ಸ್ನೇಹಿತರಾದ ಕೌಶಿಕ್, ರಾಜು ಹಾಗೂ ಅರುಣ್ ಜತೆ ಮದ್ಯ ಸೇವನೆಗೆ ಆತ ತೆರಳಿದ್ದನು. ಅದೇ ವೇಳೆ ಅಲ್ಲಿಗೆ ಮುತ್ತುರಾಜು ಸ್ನೇಹಿತ ಆಟೋ ಚಾಲಕ ಚೇತನ್ ಸಹ ಬಂದಿದ್ದಾನೆ. ಆಗ ಆಟೋದಲ್ಲಿ ಜೋರಾಗಿ ಚಲನಚಿತ್ರ ಗೀತೆಗಳನ್ನು ಹಾಕಿಕೊಂಡು ಗೆಳೆಯರು ಹರಟೆಯಲ್ಲಿ ತೊಡಗಿದ್ದರು. ಆಗ ಬೈಕ್‌ಗಳಲ್ಲಿ ಬಂದ ಆರೋಪಿಗಳು, ರಸ್ತೆ ಬದಿ ನಿಂತು ಮಾತನಾಡುತ್ತಿದ್ದವರನ್ನು ನೋಡಿದ್ದಾರೆ. ಆಗ ಆರೋಪಿಗಳ ಕಡೆಗೆ ಮುತ್ತುರಾಜು ಹಾಗೂ ಆತನ ಸ್ನೇಹಿತರು ದೃಷ್ಟಿಹರಿಸಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿ ಗಳು ಏಕಾಏಕಿ ಬಿಯರ್ ಬಾಟಲ್ ನಿಂದ ಮುತ್ತುರಾಜು ಸ್ನೇಹಿತ ಕೌಶಿಕ್ ಮೇಲೆ ಹಲ್ಲೆ ನಡೆಸಿದರು. ಗೆಳೆಯ ಮುತ್ತುರಾಜು ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಚಂದ್ರಾಲೇಔಟ್ ಠಾಣೆಗೆ ಗಾಯಾಳು ಮುತ್ತುರಾಜು ದೂರು ದಾಖಲಿಸಿದರು.
ಬಿಯರ್ ‘ಬ್ಯಾಚ್’ನೀಡಿದ ಸುಳಿವು
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಬ್ ಇನ್ಸ್‌ಪೆಕ್ಟರ್ ರವೀಶ್ ನೇತೃತ್ವದ ತಂಡವು, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಚೂರಾದ ಬಿಯರ್ ಬಾಟಲ್ ಪತ್ತೆಯಾಗಿದೆ. ಆಗ ಬಾಟಲ್‌ನ ಲೇಬಲ್ ಮೇಲಿದ್ದ ‘ಬ್ಯಾಚ್’ ನಂಬರ್ ಸುಳಿವು ಆಧರಿಸಿ ಹಲ್ಲೆಕೋರರ ಬೆನ್ನಹತ್ತಿದ್ದಾರೆ. (ಬಾರ್‌ಗಳಿಗೆ ಬಿಯರ್ ಪೂರೈಸುವಾಗ ಬ್ಯಾಚ್ ನಂಬರ್ ನೀಡಲಾಗುತ್ತದೆ) ಆಗ ಮೂಡಲಪಾಳ್ಯದ ಅಶ್ವ ಬಾರ್‌ನಲ್ಲಿ ಆರೋಪಿಗಳು ಬಿಯರ್ ಖರೀದಿಸಿದ್ದ ಸಂಗತಿ ಗೊತ್ತಾಯಿತು. ಆ ಬಾರ್‌ಗೆ ತೆರಳಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಹಲ್ಲೆಕೋರರ ಮುಖಚಹರೆ ಸಿಕ್ಕಿತು. ಅಂತೆಯೇ ಕಾರ್ಯಾಚರಣೆ ನಡೆಸಿದಾಗ ನಾಲ್ವರು ಹಲ್ಲೆಕೋರರು ಸೆರೆಯಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ