Vaishnavi Babar Murder ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಮಾಜಿ ಪ್ರೇಯಸಿಯನ್ನು ಕೊಲೆ ಮಾಡಿದ್ದ ವ್ಯಕ್ತಿ, ಪೊಲೀಸರಿಗೆ ಸುಳಿವು ಎನ್ನುವ ಅರ್ಥದಲ್ಲಿ L01-501 ಎನ್ನುವ ಕೋಡ್ ಅನ್ನು ಸೂಸೈಡ್ ನೋಟ್‌ನಲ್ಲಿ ಬರೆದಿಟ್ಟು ಹೋಗಿದ್ದ. ಕೊನೆಗೂ 38 ದಿನಗಳ ಬಳಿಕ ಈ ಕೋಡ್‌ಅನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಯಶಸ್ವಿಯಾಗಿದ್ದಾರೆ.
ಮುಂಬೈ (ಜ.18): ಕೊನೆಗೂ 38 ದಿನಗಳ ಹಿಂದೆ ಅಂದರೆ ಡಿಸೆಂಬರ್ 12 ರಂದು ನಾಪತ್ತೆಯಾಗಿದ್ದ 19 ವರ್ಷದ ಯುವತಿಯ ಶವವನ್ನು ಗುರುವಾರ ಮುಂಬೈ ಪೊಲೀಸ್ ಪತ್ತೆ ಮಾಡಿದ್ದಾರೆ. ತನ್ನ ಮಾಜಿ ಪ್ರಿಯತಮೆಯನ್ನು ಸಾಯಿಸಿದ್ದ ವ್ಯಕ್ತಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿದ್ದ ಸೂಸೈಡ್ ನೋಟ್‌ನಲ್ಲಿ ಈಕೆಯ ಶವವನ್ನು ಎಲ್ಲಿ ಹೂತಿದ್ದೇನೆ ಎನ್ನುವ ಮಾಹಿತಿಯನ್ನು ಕೋಡ್ ರೂಪದಲ್ಲಿ ಬರೆದಿಟ್ಟಿದ್ದ. 38 ದಿನಗಳ ಸತತ ಪರಿಶ್ರಮದ ಬಳಿಕ ಪೊಲೀಸರು ಈ ಕೋಡ್‌ಅನ್ನು ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಆಕೆಯ ಶವವನ್ನು ಪತ್ತೆ ಮಾಡಿದ್ದಾರೆ. ನವಿ ಮುಂಬೈನ ಖಾರ್ಘರ್ ಬೆಟ್ಟದ ಕಾಡಿನಲ್ಲಿ 19 ವರ್ಷದ ವೈಷ್ಣವಿ ಬಾಬರ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನೊಂದಿಗಿನ ಪ್ರೇಮ ಸಂಬಂಧವನ್ನು ಕಡಿದುಕೊಂಡಿದ್ದಕ್ಕಾಗಿ ಕೋಪಗೊಂಡಿದ್ದ 24 ವರ್ಷದ ವೈಭವ್ ಬುರುಂಗಲೆ, ಖಾರ್ಘರ್ ಬೆಟ್ಟಗಳಲ್ಲಿ ವೈಷ್ಣವಿ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಳಿಕ ವೈಭವ್ ಬುರುಂಗಲೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ. ಅದಕ್ಕೂ ಮುನ್ನ ಈತ ಬರೆದುಹೋಗಿದ್ದ ಸೂಸೈಡ್ ನೋಟ್‌ನಲ್ಲಿ ಕೋಡ್ ಪತ್ತೆಯಾಗಿತ್ತು. ಈ ಕೋಡ್ ಪತ್ತೆ ಮಾಡಿದ ಬಳಿಕ ವೈಷ್ಣವಿ ಅವರ ಶವವನ್ನು ಹುಡುಕಲು ಭಾರಿ ಪ್ರಮಾಣದ ಶೋಧ ಕಾರ್ಯಾಚರಣೆ ಮಾಡಲಾಗಿತ್ತು. ಕೊನೆಗೆ ಶವ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೂಸೈಡ್ ನೋಟ್‌ನ ಕೋಡ್ ಪತ್ತೆ ಮಾಡಿದ್ದು ಹೇಗೆ?: ವೈಷ್ಣವಿ ಬಾಬರ್ ಡಿಸೆಂಬರ್ 12 ರಂದು ಸಿಯೋನ್‌ನಲ್ಲಿರುವ ತನ್ನ ಕಾಲೇಜಿಗೆ ಹೋಗಿದ್ದರು. ಆದರೆ, ಆ ದಿನ ಅವರು ಮನೆಗೆ ಹಿಂತಿರುಗಲಿಲ್ಲ, ನಂತರ ಆಕೆಯ ತಾಯಿ ಅದೇ ದಿನ ಕಳಂಬೋಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತಾಗಿ ದೂರು ದಾಖಲು ಮಾಡಿದ್ದರು. ಅದೇ ದಿನ, ವೈಭವ್ ಬುರುಂಗಲೆ ಎನ್ನುವ ವ್ಯಕ್ತಿಯ ದೇಹವು ರೈಲ್ವೆ ಟ್ರ್ಯಾಕ್‌ನಲ್ಲಿ ಪತ್ತೆಯಾಗಿತ್ತು. ಜುಯಿನಗರ ನಿಲ್ದಾಣದ ರೈಲ್ವೆ ಹಳಿಯಲ್ಲಿ ಈತನ ದೇಹ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಈತನ ಸಾವಿನ ಕುರಿತು ಪ್ರಕರಣ ದಾಖಲಿಸಿ, ಈ ಬಗ್ಗೆ ತನಿಖೆ ನಡೆಸಲು ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿತ್ತು. ಈ ಹಂತದಲ್ಲಿ ವೈಭವ್‌ನ ಮೊಬೈಲ್‌ನಲ್ಲಿ ವೈಷ್ಣವಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿರುವುದಾಗಿ ಬರೆದಿರುವ ಸೂಸೈಡ್ ನೋಟ್‌ಅನ್ನು ಪೊಲೀಸರು ಪತ್ತೆ ಮಾಡಿದ್ದರು.
ಸೂಸೈಡ್ ನೋಟ್‌ನಲ್ಲಿ 'L01-501' ಎಂಬ ಪದಗಳಿದ್ದವು. ಇದರ ಅರ್ಥ ಏನು ಅನ್ನೋದೇ ಪೊಲೀಸರಿಗೆ ಗೊತ್ತಾಗಿರಲಿಲ್ಲ. ಕೊನೆಗೆ ಇದು ವೈಷ್ಣವಿಯ ಶವವನ್ನು ಎಸೆದಿರುವ ಪ್ರದೇಶ, ಅರಣ್ಯ ಇಲಾಖೆಯ ಮರದ ಮೇಲೆ ಗುರುತು ಹಾಕಿದ್ದ ಸಂಖ್ಯೆ ಎಂದು ಪೊಲೀಸರು ಡಿಕೋಡ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮಲೆನಾಡಿನ ಶಮಿತಾ ಆತ್ಮಹತ್ಯೆ!
ನಂತರ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ವೈಷ್ಣವಿ ನಾಪತ್ತೆಯಾದ ದಿನ ಇಬ್ಬರೂ ಖಾರ್ಘರ್ ಬೆಟ್ಟದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಎನ್ನುವುದು ಗೊತ್ತಾಗಿದೆ. ನಂತರ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು, ಅಗ್ನಿಶಾಮಕ ದಳ ಮತ್ತು ಸಿಡ್ಕೋ ತಂಡ ವೈಷ್ಣವಿ ಮೃತದೇಹಕ್ಕಾಗಿ ಶೋಧ ಕಾರ್ಯ ಆರಂಭಿಸಿತು. 10 ದಿನಗಳ ಕಾಲ ನಡೆದ ಶೋಧ ಕಾರ್ಯಾಚರಣೆಗೆ ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ನಂಬರ್‌ಅನ್ನು ಹುಡುಕಿಕೊಂಡು ಹೋದ ಪೊಲೀಸರಿಗೆ L01-501 ನಂಬರ್‌ನ ಮರದ ಬಳಿ ಕೊಳೆತ ಸ್ಥಿತಿಯಲ್ಲಿ ವೈಷ್ಣವಿಯ ಶವ ಪತ್ತೆಯಾಗಿದೆ.
'ನಿಮ್ಮ ಬ್ಯಾಗ್ ಯಾಕಿಷ್ಟು ಭಾರವಿದೆ..' ಸುಚನಾ ಸೇಠ್‌ಗೆ ಕೇಳಿದ್ದ ಡ್ರೈವರ್ ರೇಜಾನ್ ಡಿಸೋಜಾ
ಖಾರ್ಘರ್‌ನ ಓವ್ ಕ್ಯಾಂಪ್ ಪ್ರದೇಶದಲ್ಲಿನ ಡಂಪಿಂಗ್ ಗ್ರೌಂಡ್‌ನಲ್ಲಿ ಪೊದೆಗಳಲ್ಲಿ ಬಿದ್ದಿರುವ ವೈಷ್ಣವಿ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಕಾಲೇಜಿಗೆ ತೆರಳುವಾಗ ಧರಿಸಿದ್ದ ಉಡುಗೆ, ಕೈ ಗಡಿಯಾರ, ಗುರುತಿನ ಚೀಟಿ ಆಧರಿಸಿ ಆಕೆಯ ದೇಹವನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.