7 ಭ್ರೂಣಗಳ ಪತ್ತೆ ಕೇಸ್‌ಗೆ ಟ್ವಿಸ್ಟ್: ಹೆರಿಗೆ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್ ಸೀಜ್

By Suvarna NewsFirst Published Jun 25, 2022, 6:26 PM IST
Highlights

• ಮೂಡಲಗಿ ಬಳಿ ಹಳ್ಳದಲ್ಲಿ 7 ಭ್ರೂಣಗಳು ಪತ್ತೆ ಪ್ರಕರಣಕ್ಕೆ ಟ್ಚಿಸ್ಟ್
• ಮೂಡಲಗಿ ವೆಂಕಟೇಶ ಹೆರಿಗೆ ಆಸ್ಪತ್ರೆ & ಸ್ಕ್ಯಾನಿಂಗ್ ಸೆಂಟರ್ ಸೀಜ್
• ಬೆಳಗಾವಿ ಜಿಲ್ಲೆಯ ವಿವಿಧೆಡೆ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಾಳಿ

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ, (ಜೂನ್.25):
ಮೂಡಲಗಿ ಪಟ್ಟಣದಲ್ಲಿ ಏಳು ಭ್ರೂಣಗಳು ಪತ್ತೆಯಾದ ಸುದ್ದಿ‌ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಹಳ್ಳದಲ್ಲಿ ಸಿಕ್ಕ ಭ್ರೂಣಗಳು ತಮ್ಮ ಆಸ್ಪತ್ರೆಗೆ ಸೇರಿದ್ದೆಂದು ಮೂಡಲಗಿಯ ವೆಂಕಟೇಶ ಮೆಟಿರ್ನಿಟಿ & ಸ್ಕ್ಯಾನಿಂಗ್ ಸೆಂಟರ್ ವೈದ್ಯೆ ಡಾ.ವೀಣಾ ಕನಕರೆಡ್ಡಿ ತಪ್ಪೊಪ್ಪಿಕೊಂಡಿದ್ದು, ಸದ್ಯ ಆ ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ. 

ಮೂಡಲಗಿ ಪಟ್ಟಣದಲ್ಲಿ ಏಳು ಭ್ರೂಣಲಿಂಗಗಳು ಪತ್ತೆಯಾದ ಬಳಿಕ ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.‌ ಭ್ರೂಣಗಳನ್ನು ಹಳ್ಳಕ್ಕೆ ಎಸೆದು ರಾಕ್ಷಸಿ ಕೃತ್ಯ ಎಸೆಗಿದವರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದೆ‌. ಮೂಡಲಗಿ ಪಟ್ಟಣದ ವೆಂಕಟೇಶ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ವೈದ್ಯೆ ಡಾ‌.ವೀಣಾ ಕನಕರೆಡ್ಡಿ ಆ ಎಲ್ಲಾ ಭ್ರೂಣಗಳು ತಮ್ಮ ಆಸ್ಪತ್ರೆಯದ್ದೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಭ್ರೂಣಲಿಂಗ ಪತ್ತೆ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸದ್ಯ ಮೂಡಲಗಿಯ ವೆಂಕಟೇಶ ಹೆರಿಗೆ ಆಸ್ಪತ್ರೆ & ಸ್ಕ್ಯಾನಿಂಗ್ ಸೆಂಟರ್‌ ಸೀಜ್ ಮಾಡಲಾಗಿದೆ. ಇನ್ನು ಈ ಕುರಿತು ಸೀಜ್ ಆಗಿರುವ ಆಸ್ಪತ್ರೆ ವೈದ್ಯೆ ಡಾ.ವೀಣಾ ಕನಕರೆಡ್ಡಿ ಮಾತನಾಡಿ, 'ಹಳ್ಳದಲ್ಲಿ ಪತ್ತೆಯಾದ ಭ್ರೂಣಗಳು ನಮ್ಮ ಆಸ್ಪತ್ರೆಗೆ ಸೇರಿದ್ದಾಗಿದ್ದು, ಸರಿಯಾಗಿ ಬೆಳವಣಿಗೆ ಆಗದ ಭ್ರೂಣಗಳನ್ನು ತಗೆದಿಟ್ಟಿದ್ವಿ. ಬರುವ ರೋಗಿಗಳಿಗೆ ತೋರಿಸಲು ಅವುಗಳನ್ನು ಇರಿಸಲಾಗಿತ್ತು‌. ಆದ್ರೆ ಆಸ್ಪತ್ರೆ ಸ್ಥಳಾಂತರ ಮಾಡುವ ವೇಳೆ ಏನಾಗಿದೆ ಗೊತ್ತಿಲ್ಲ ಎಂದಿದ್ದಾರೆ. 

ಬೆಳಗಾವಿ: ಮೂಡಲಗಿ ಹಳ್ಳದಲ್ಲಿ 7 ಭ್ರೂಣಲಿಂಗ ಪತ್ತೆ: ತಪ್ಪೊಪ್ಪಿಕೊಂಡ ವೈದ್ಯೆ

 ಫೋನ್ ಮಾಡಿ ಮಾಹಿತಿ ಪಡೆ ಸುಧಾಕರ್
 ಪ್ರಕರಣ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಡಿಹೆಚ್‌ಒ ಡಾ.ಮಹೇಶ್ ಕೋಣಿ, 'ವೆಂಕಟೇಶ ಹೆರಿಗೆ ಆಸ್ಪತ್ರೆ & ಸ್ಕ್ಯಾನಿಂಗ್ ಸೆಂಟರ್ ವೈದ್ಯರು ತಪ್ಪೊಪ್ಪಿಕೊಂಡಿದ್ದಾರೆ. ಮಹಾಲಿಂಗಪುರದ ಆಸ್ಪತ್ರೆಯಲ್ಲಿ 2013 ರಿಂದ 2016ರಲ್ಲಿ ಸಂಗ್ರಹಿಸಿದ ಸ್ಪೆಸಿಮೆನ್ ಅಂತಿದ್ದಾರೆ. ಮಹಾಲಿಂಗಪುರದಿಂದ ಮೂಡಲಗಿಗೆ ಆಸ್ಪತ್ರೆಗೆ 2019ರಲ್ಲಿ ಸ್ಥಳಾಂತರವಾಗಿತ್ತು. ಆಗಲೇ ಆ ಸ್ಪೆಸಿಮೆನ್ ಸಂಗ್ರಹ ಮಾಡಿದ್ದರಂತೆ.‌ ನಾಲ್ಕು ದಿನಗಳ ಹಿಂದೆ ಡಿಸ್ಪೋಸ್ ಮಾಡಲು ಸಿಬ್ಬಂದಿಗೆ ಹೇಳಿದ್ರಂತೆ.‌ ಅವರ ಬಳಿ ಸ್ಕ್ಯಾನಿಂಗ್ ಸೆಂಟರ್ ಲೈಸೆನ್ಸ್ ಇದೆ, ಆದ್ರೆ ರೆಕಾರ್ಡ್ ಸರಿಯಾಗಿ ಮೆಂಟೇನ್ ಮಾಡಿಲ್ಲ.‌ಈಗಾಗಲೇ ಬಿಮ್ಸ್ ಆಸ್ಪತ್ರೆಯಲ್ಲಿ 7 ಭ್ರೂಣಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮೇಲ್ನೋಟಕ್ಕೆ ಅಸಹಜ ಬೆಳವಣಿಗೆ ಇದ್ದ ಭ್ರೂಣಗಳು ಇವೆ. ವೆಂಕಟೇಶ ಮೆಟರ್ನಿಟಿ ಹಾಗೂ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿದ್ದೇವೆ. ಬೆಳಗಾವಿ ಡಿಸಿ ಸೂಚನೆ ಮೇರೆಗೆ ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ. ರಿಕಾರ್ಡ್ ಮೆಂಟೇನ್ ಮಾಡದ ಸ್ಕ್ಯಾನಿಂಗ್ ಸೆಂಟರ್‌ಗಳ ಸೀಜ್ ಮಾಡಲು ಸೂಚನೆ ನೀಡಿದ್ದೆವೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ಸಹ ನೀಡಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಸ್ಯಾನಿಂಗ್ ಸೆಂಟರ್‌ಗೆ ತೆರಳಿ ಪರಿಶೀಲನೆಗೆ ಸೂಚನೆ ನೀಡಿದ್ದಾರೆ‌. ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಪರಿಶೀಲನೆ ಮಾಡ್ತಿದ್ದಾರೆ' ಎಂದು ತಿಳಿಸಿದ್ದಾರೆ.

 ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಾಳಿ
ಇನ್ನು ಪ್ರಕರಣ ಬೆಳಕಿಗೆ ಬರುತ್ರಿದ್ದಂತೆ ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಎಲ್ಲ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ನಡೆಸುವಂತೆ ಡಿಸಿ ನಿತೇಶ ಪಾಟೀಲ ಸೂಚನೆ ನೀಡಿದ ಬೆನ್ನಲ್ಲೇ ತಾಲೂಕು ಆರೋಗ್ಯಾಧಿಕಾರಿಗಳು ಫೀಲ್ಡ್‌ಗೆ ಇಳಿದಿದ್ದಾರೆ. ಬೆಳಗಾವಿ ತಾಲೂಕಿನ 120ಕ್ಕೂ ಹೆಚ್ಚು ಸ್ಕ್ಯಾನಿಂಗ್ ಸೆಂಟರ್‌‌ಗಳಿಗೆ ಟಿಹೆಚ್‌ಒ ಡಾ.ಶಿವಾನಂದ ಮಾಸ್ತಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಗರದ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಪರಿಶೀಲನೆ ಬಳಿಕ ಮಾತನಾಡಿದ ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ,  ಬೆಳಗಾವಿ ತಾಲೂಕಿನ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದೇವೆ. ದಾಖಲೆ ಸರಿ ಇದೆಯೋ ಇಲ್ವೋ ಎಂಬ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ರಿಜಿಸ್ಟರ್ ಬುಕ್,ಎಫ್ ಫಾರ್ಮೆಟ್, ಗರ್ಭಿಣಿ ತಪಾಸಣೆ ಮಾಡುವಾಗ ಮಷಿನ್ ರಿಜಿಸ್ಟರ್ ಇದ್ದ ಬಗ್ಗೆ, ಎಫ್ ಫಾರ್ಮೆಟ್ ಸರಿಯಾಗಿ ಸಲ್ಲಿಕೆ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಐದು ತಂಡದಲ್ಲಿ 120ಕ್ಕೂ ಅಧಿಕ ಸೆಂಟರ್ ಗಳಲ್ಲಿ ತಪಾಸಣೆ ಮಾಡುತ್ತೇವೆ' ಎಂದು ತಿಳಿಸಿದ್ದಾರೆ.

ಒಟ್ಟಾರೆ ಮೂಡಲಗಿಯಲ್ಲಿ ಏಳು ಭ್ರೂಣಲಿಂಗಗಳು ಪತ್ತೆ ಬಳಿಕ ಬೆಳಗಾವಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ವಿವಿಧೆಡೆ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭ್ರೂಣಲಿಂಗ ಪತ್ತೆ ಹಾಗೂ  ಹತ್ಯೆಗೈಯುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

click me!