ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ನಡೆದ ಘಟನೆ
ಕಲಬುರಗಿ(ಆ.12): ಬಾವಿಯೊಂದರಲ್ಲಿ ತಾಯಿ ಮತ್ತು ಮೂವರು ಮಕ್ಕಳ ಶವ ಪತ್ತೆಯಾದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಆದರೆ, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ಕಾಡುತ್ತಿದೆ. 32 ವರ್ಷದ ತಾಯಿ ಅಂಬಿಕಾ ಹಾಗೂ ಆಕೆಯ ಮೂವರು ಮಕ್ಕಳ ಶವ ಬಾವಿಯಲ್ಲಿ ಪತ್ತೆಯಾಗಿವೆ. ಒಂಬತ್ತು ವರ್ಷದ ಇಬ್ಬರು ಅವಳಿ ಮಕ್ಕಳು ಹಾಗೂ ಏಳು ವರ್ಷದ ಒಂದು ಹೆಣ್ಣು ಮಗುವಿನೊಂದಿಗೆ ತಾಯಿಯ ಶವ ಬಾವಿಯಲ್ಲಿ ಪತ್ತೆಯಾಗಿದೆ.
ಇದು ಆತ್ಮಹತ್ಯೆಯೋ ಕೊಲೆಯೋ ಎನ್ನುವ ಅನುಮಾನ ಕಾಡುತ್ತಿದ್ದು, ಸುಮಾರು ವರ್ಷಗಳಿಂದ ತವರಿನಲ್ಲಿದ್ದ ಅಂಬಿಕಾ ನಿನ್ನೆಯಷ್ಟೇ ಗಂಡನ ಮನೆಯಾದ ಮಾದನಹಿಪ್ಪರಗಾ ಗ್ರಾಮಕ್ಕೆ ಬಂದಿದ್ದಳು. ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ರಾವೂರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ತನ್ನ ಮಕ್ಕಳೊಂದಿಗೆ ಅಂಬಿಕಾ ವಾಸವಿದ್ದಳು. ನಿನ್ನೆ ಆಕೆಯ ಸೋದರ ಮಾವ ಈಕೆಯನ್ನು ಮಕ್ಕಳ ಸಹಿತ ಗಂಡನ ಮನೆಯಾದ ಮಾದನಹಿಪ್ಪರಗಿ ಗ್ರಾಮಕ್ಕೆ ಕರೆತಂದು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದ. ಈ ಮಹಿಳೆಯ ಗಂಡ ಸಹ ಮಹಾರಾಷ್ಟ್ರದ ಸೊಲ್ಲಾಪೂರದಲ್ಲಿ ವಾಸವಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಕೆಲಸ ಬಿಡುತ್ತೇನೆ ಎಂದ ಪತ್ನಿಯನ್ನು ಚಾಕುವಿನಿಂದ ಕೊಚ್ಚಿ ಕೊಂದ ಪತಿ
ಏಕಾಏಕಿ ಇಂದು ಅವರ ಹೊಲದಲ್ಲಿನ ಬಾವಿಯಲ್ಲಿ ಅಂಬಿಕಾ ಮತ್ತು ಮಕ್ಕಳ ಶವಗಳು ಪತ್ತೆಯಾಗಿವೆ. ತವರಿನಿಂದ ಬಂದ ಅಂಬಿಕಾ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಮತ್ತೆನಾದ್ರೂ ನಡೆದಿದೆಯೋ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಘಟನಾ ಸ್ಥಳಕ್ಕೆ ಮಾದನಹಿಪ್ಪರಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಬಿಕಾಳ ತವರಿನವರು ಬಂದ ನಂತರವೇ ದೂರು ದಾಖಲಾಗುವ ಸಾಧ್ಯತೆ ಇದೆ. ಪೊಲೀಸರ ತನಿಖೆಯಿಂದಷ್ಟೇ ತಾಯಿ, ಮಕ್ಕಳ ಸಾವಿಗೆ ನಿಖರವಾದ ಕಾರಣ ತಿಳಿದು ಬರಬೇಕಿದೆ.