ಗ್ರಾಹಕರು ಹೋದಾಗ ಎಟಿಎಂ ಕೇಂದ್ರದಿಂದ ಹಣ ಬಂದಿಲ್ಲ| ಸಿಎಂಎಸ್ ಇನ್ಪೋ ಸಿಸ್ಟಮ್ ಸಂಸ್ಥೆ ರಾಷ್ಟ್ರೀಕೃತ ಬ್ಯಾಂಕ್‌ನ ಎಟಿಎಂ ಕೇಂದ್ರಗಳಿಗೆ ಹಣ ತುಂಬುವ ಗುತ್ತಿಗೆ|
ಬೆಂಗಳೂರು(ಆ.16): ಎಟಿಎಂಗೆ ತುಂಬಿದ್ದ ಸುಮಾರು 32 ಲಕ್ಷ ಹಣವನ್ನು ಅದೇ ಸಂಸ್ಥೆಯ ಸಿಬ್ಬಂದಿಯೇ ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಿಎಂಎಸ್ ಇನ್ಪೋ ಸಿಸ್ಟಮ್ ಸಂಸ್ಥೆಯ ಮೇಲ್ವಿಚಾರಕರು ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಕಿರಣ್ ಎಂಬಾತ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಲಸೂರು ಠಾಣೆ ಪೊಲೀಸರು ಹೇಳಿದ್ದಾರೆ.
ಸಿಎಂಎಸ್ ಇನ್ಪೋ ಸಿಸ್ಟಮ್ ಸಂಸ್ಥೆ ರಾಷ್ಟ್ರೀಕೃತ ಬ್ಯಾಂಕ್‌ನ ಎಟಿಎಂ ಕೇಂದ್ರಗಳಿಗೆ ಹಣ ತುಂಬುವ ಗುತ್ತಿಗೆ ಪಡೆದುಕೊಂಡಿದ್ದು, ಸಂಸ್ಥೆಯ ಕಸ್ಟೋಡಿಯನ್ ಸೂರ್ಯ ಆ.5ರಂದು ಸಿಬ್ಬಂದಿ ಜತೆ ತೆರಳಿ ಹಲಸೂರಿನ ಬಜಾರ್ ಸ್ಟ್ರೀಟ್‌ನಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಹಾಗೂ ಲಕ್ಷ್ಮೀಪುರದ ಸಿಎಂಎಚ್ ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ಒಟ್ಟು 32.28 ಲಕ್ಷ ಹಣ ತುಂಬಿಸಿದ್ದರು.
ಫಿನಾಯಿಲ್ ಮಾರೋ ನೆಪದಲ್ಲಿ ಮನೆಮಂದಿ ಮೂರ್ಛೆಗೊಳಿಸಿ ಲೂಟಿ!
ಗ್ರಾಹಕರು ಹೋದಾಗ ಎಟಿಎಂ ಕೇಂದ್ರದಿಂದ ಹಣ ಬಂದಿಲ್ಲ. ಅನುಮಾನಗೊಂಡ ಕೆನರಾ ಬ್ಯಾಂಕ್‌ನವರು ಪರಿಶೀಲಿಸಿ, ಹಣ ತುಂಬವ ಸಿಎಂಎಸ್ ಕಂಪನಿಗೆ ಮಾಹಿತಿ ನೀಡಿದ್ದರು. ಕಸ್ಟೋಡಿಯನ್ ಹೋಗಿ ಪರಿಶೀಲನೆ ನಡೆಸಿದಾಗ ಎಟಿಎಂನಲ್ಲಿ ಹಣ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಪಾಸ್‌ವರ್ಡ್ ಗೊತ್ತಿರುವವರೇ ಕಳವು ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಏಜೆನ್ಸಿಯ ಮೇಲ್ವಿಚಾರ ಕಸ್ಟೋಡಿಯನ್‌ಗಳಾದ ಸೂರ್ಯ, ಕಿರಣ್ ಸೇರಿದಂತೆ ಹಲವರ ವಿರುದ್ಧ ಹಲಸೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕಿರಣ್ ಹಾಗೂ ಆತನ ಸ್ನೇಹಿತ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಎಟಿಎಂ ಕೇಂದ್ರಗಳಿಗೆ ಹಣ ತುಂಬುವ ಸಿಎಂಎಸ್ ಇನ್ಪೋ-ಸಿಸ್ಟಮ್ ಕಂಪನಿಯಲ್ಲಿ ಆರೋಪಿ ಕಿರಣ್ ಕೂಡ ಕೆಲ ವರ್ಷಗಳಿಂದ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ. ಮೊದಲು ಹಲಸೂರು ವಿಭಾಗದಲ್ಲಿನ ಎಟಿಎಂ ಕೇಂದ್ರಗಳಿಗೆ ಹಣ ತುಂಬುತ್ತಿದ್ದ ಕಿರಣ್‌ನನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ವಿಭಾಗಕ್ಕೆ ಕಸ್ಟೋಡಿಯನ್ ಆಗಿ ಸೂರ್ಯ ಬಂದಿದ್ದರು. ಹಲಸೂರು ವಿಭಾಗಕ್ಕೆ ಬಂದ ಸೂರ್ಯ ಪಾಸ್‌ವರ್ಡ್ ಬದಲಾಯಿಸದೇ ಕಿರಣ್ ಈ ಹಿಂದೆ ಹೊಂದಿದ್ದ ಪಾಸ್‌ವರ್ಡ್ ಅನ್ನು ಮುಂದುವರೆಸಿದ್ದರು. ಈ ವಿಚಾರ ತಿಳಿದ ಕಿರಣ್ ಹಳೇ ಪಾಸವರ್ಡ್ ಬಳಸಿ ಎಟಿಎಂ ಕೇಂದ್ರದಲ್ಲಿ ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.