ಭಟ್ಕಳ: ಬೆಣಂದೂರಿನಲ್ಲಿ ಕಬ್ಬಿಣದ ಸಲಾಕೆಯಿಂದ ಹೊಡೆದು ವ್ಯಕ್ತಿ ಕೊಲೆ

By Kannadaprabha NewsFirst Published Aug 15, 2020, 9:55 AM IST
Highlights

ಜಮೀನು ವಿವಾದದ ಹಳೇ ದ್ವೇಷ ಹಿನ್ನೆಲೆಯಲ್ಲಿ ನಡೆದ ಕೊಲೆ| ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಬೆಣಂದೂರಿನಲ್ಲಿ ನಡೆದ ಕೊಲೆ| ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡುತ್ತಿರುವಾಗಲೇ ಕೊನೆಯುಸಿರೆಳಿದ ವ್ಯಕ್ತಿ| 

ಭಟ್ಕಳ(ಆ.15): ತಾಲ್ಲೂಕಿನ ಬೆಣಂದೂರಿನಲ್ಲಿ ಶುಕ್ರವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ಸ್ಕೂಟಿಯಲ್ಲಿ ಬರುತ್ತಿರುವಾಗ ಹಳೇ ದ್ವೇಷದಿಂದ ಗುಂಪೊಂದು ಅಡ್ಡಗಟ್ಟಿಕಾಲು, ತಲೆಗೆ ಕಬ್ಬಿಣದ ಸಲಾಕೆಯಿಂದ ಗಂಭೀರ ಗಾಯಗೊಳಿಸಿ ಕೊಲೆ ಮಾಡಿದ ದುರ್ಘಟನೆ ನಡೆದಿದೆ.

ಮೃತನನ್ನು ಬೆಣಂದೂರು ನಿವಾಸಿ ಪದ್ಮಯ್ಯ ಜಟ್ಟಾನಾಯ್ಕ (44) ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಮಧ್ಯಾಹ್ನ ಶಿರೂರಿನ ಡೈರಿಗೆ ಕೊಡಲು ವ್ಯಕ್ತಿಯೊಬ್ಬರ ಮನೆಗೆ ಹಾಲು ಕೊಟ್ಟು ಸ್ಕೂಟಿಯಲ್ಲಿ ವಾಪಾಸ್ಸು ಮನೆಗೆ ಬರುತ್ತಿರುವಾಗ ಜಮೀನು ವಿವಾದದ ಹಳೇ ದ್ವೇಷದಿಂದ ಅದೇ ಊರಿನ ಗುಂಪೊಂದು ಈತನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣ ಸಲಾಕೆಯಿಂದ ಎರಡೂ ಕಾಲು ಮತ್ತು ತಲೆ ಮೇಲೆ ಗಂಭೀರವಾಗಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಕೊಲೆಯಾದ ವ್ಯಕ್ತಿಯ ಸಹೋದರ ಪರಮೇಶ್ವರ ಜಟ್ಟನಾಯ್ಕ ಗ್ರಾಮೀಣ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದು ಮಹಿಳೆಯ ಬರ್ಬರ ಕೊಲೆ

ಗುಂಪಿನ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಪದ್ಮಯ್ಯ ನಾಯ್ಕನನ್ನು ತಕ್ಷಣ ಕುಟುಂಬದವರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡುತ್ತಿರುವಾಗಲೇ ಈತ ಕೊನೆಯುಸಿರೆಳಿದಿದ್ದಾನೆ. ಕಳೆದ ಜುಲೈ ತಿಂಗಳಲ್ಲಿ ಪದ್ಮಯ್ಯ ನಾಯ್ಕ ಮತ್ತು ಇನ್ನೊಂದು ಕುಟುಂಬದವರು ಜಾಗದ ಬೇಲಿ ವಿವಾದಕ್ಕೆ ಸಂಬಂಧಿಸಿದಂತೆ ಜಗಳ ಮಾಡಿಕೊಂಡು ಗ್ರಾಮೀಣ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಿಸಿದ್ದರು ಎನ್ನಲಾಗಿದೆ. 

ಇದೇ ಜಮೀನು ವಿವಾದವೇ ಮತ್ತಷ್ಟು ದ್ವೇಷಕ್ಕೆ ಕಾರಣವಾಗಿ ಇದೀಗ ಕೊಲೆಯೂ ನಡೆದಂತಾಗಿದೆ. ಸರ್ಕಾರಿ ಆಸ್ಪತ್ರೆಗೆ ಎಎಸ್ಪಿ ನಿಖಿಲ್‌ ಬಿ, ಸಿಪಿಐ ದಿವಾಕರ ಭೇಟಿ ನೀಡಿ ಮೃತನ ಸಹೋದರ ಪರಮೇಶ್ವರ ನಾಯ್ಕರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಕೊಲೆ ಸುದ್ದಿ ತಿಳಿದ ಪದ್ಮಯ್ಯ ನಾಯ್ಕನ ಸಂಬಂಧಿಕರು, ಸಾರ್ವಜನಿಕರು ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದರು.
 

click me!