ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಲಿಟಲ್ ಕಿಂಡರ್ ಶಾಲೆ ಶಿಕ್ಷಕಿಯ ಮೃತದೇಹ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದೆ.
ಉಳ್ಳಾಲ, (ಆಗಸ್ಟ್.12): ಲಿಟಲ್ ಕಿಂಡರ್ ಹಾರ್ಟ್ ಶಾಲಾ ಶಿಕ್ಷಕಿಯ ಮೃತದೇಹ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಹರಿಣಾಕ್ಷಿ(50) ಎಂದು ಗುರುತಿಸಲಾಗಿದೆ. ಇಂದು(ಶುಕ್ರವಾರ) ಬೆಳಗ್ಗೆಯಿಂದ ಹರಿಣಾಕ್ಷಿ ಕಾಣೆಯಾಗಿದ್ದರು. ಇದರಿಂದ
ಗಾಬರಿಗೊಂಡ ಮಕ್ಕಳು ತಾಯಿಗಾಗಿ ಹುಡುಕಾಟ ನಡೆಸಿದ್ದು ಕೊನೆಗೆ ಉಳ್ಳಾಲ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ.
ಕಾಲೇಜು ಉಪನ್ಯಾಸಕಿ ಆತ್ಮಹತ್ಯೆ: ಹುಟ್ಟು ಹಬ್ಬದಂದೇ ದುರಂತ ಅಂತ್ಯ
ಮಧ್ಯಾಹ್ನದ ವೇಳೆ ಸಮುದಾಯ ಆರೋಗ್ಯ ಕೇಂದ್ರದ ಬಾವಿ ಬಳಿ ಹರಿಣಾಕ್ಷಿ ಅವರು ಧರಿಸುತ್ತಿದ್ದ ಚಪ್ಪಲಿ ದೊರಕಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಈಜು ರಕ್ಷಕರು ಸೇರಿ ಬಾವಿಯೊಳಗಿದ್ದ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಹರಿಣಾಕ್ಷಿ ಅವರ ಪತಿ ಬಸವರಾಜ್ ಅವರು ನ್ಯಾಯವಾದಿಯಾಗಿದ್ದು ಶಿವಮೊಗ್ಗದಲ್ಲಿದ್ದಾರೆ. ಹರಿಣಾಕ್ಷಿ ಅವರು ತನ್ನ ಇಬ್ಬರು ಪುತ್ರರೊಂದಿಗೆ ಅಬ್ಬಕ್ಕ ಸರ್ಕಲ್ ನಲ್ಲಿ ನೆಲೆಸಿದ್ದರು. ಮನೆಯ ಕಟ್ಟಡದಲ್ಲೇ ಸ್ವಂತ ನರ್ಸರಿಯಲ್ಲಿ ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಶಿಕ್ಷಣ, ಟ್ಯೂಷನ್ ನೀಡುತ್ತಿದ್ದರು. ಹರಿಣಾಕ್ಷಿ ಅವರ ಹಿರಿಯ ಪುತ್ರ ಇನ್ಫೋಸಿಸ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಕಿರಿಯ ಪುತ್ರ ಡಿಗ್ರಿ ವ್ಯಾಸಂಗ ನಡೆಸುತ್ತಿದ್ದಾನೆ.
ಅಪರಿಚಿತ ವಾಹನ ಡಿಕ್ಕಿಯಾಗಿ ಓರ್ವ ಸಾವು
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನಮೊಗರು ಬಳಿ ರಸ್ತೆ ಬದಿ ಹುಲ್ಲು ತೆಗೆಯುತ್ತಿದ್ದ ಕಾರ್ಮಿಕರ ಮೇಲೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ಬಿಹಾರ ಮೂಲದ ಕಾರ್ಮಿಕ ವಿಕ್ಕಿ(30) ಮೃತ ದುರ್ದೈವಿ. ಬ್ರಹ್ಮಾವರದ ಗೋಪಾಲ ಪೂಜಾರಿ ಎಂಬವರು ಗಾಯಗೊಂಡಿದ್ದಾರೆ.
ಬೆಳಗ್ಗೆ 8 ಗಂಟೆ ಸುಮಾರಿಗೆ ಕಾರ್ಮಿಕರು ಹೆದ್ದಾರಿ ಪಕ್ಕದ ಹುಲ್ಲು ಮತ್ತು ಗಿಡಗಳನ್ನು ಕತ್ತರಿಸುವ ಕಾರ್ಯದಲ್ಲಿ ತೊಡಗಿದ್ದಾಗ ಈ ಅವಘಡ ಸಂಭವಿಸಿದ್ದು, ವಿಕ್ಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಗೋಪಾಲ್ ಪೂಜಾರಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.