ರಾಜ್ಯದ ಕರಾವಳಿಯಲ್ಲಿ ಸಾಲು ಸಾಲು ಹತ್ಯೆ ಪ್ರಕರಣಗಳು ಮಾಸುವ ಮೊದಲೇ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯಾನಕ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ದೆಹಲಿ: ರಾಜ್ಯದ ಕರಾವಳಿಯಲ್ಲಿ ಸಾಲು ಸಾಲು ಹತ್ಯೆ ಪ್ರಕರಣಗಳು ಮಾಸುವ ಮೊದಲೇ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯಾನಕ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದಕ್ಷಿಣ ದೆಹಲಿಯ ಮಾಳವೀಯಾ ನಗರದಲ್ಲಿ ಈ ಅವಘಡ ಸಂಭವಿಸಿದೆ. ಈ ಅನಾಹುತ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ನಿನ್ನೆ(ಆಗಸ್ಟ್11) ಈ ಘಟನೆ ನಡೆದಿದ್ದು, ಮೃತ ಯುವಕನನ್ನು 25 ವರ್ಷದ ಮಯಾಂಕ್ ಪನ್ವಾರ್ ಎಂದು ಗುರುತಿಸಲಾಗಿದೆ. ಬೇಗಂಪುರದ ಡಿಡಿಎ ಮಾರ್ಕೆಟ್ ಸಮೀಪ ಗೇಟ್ ನಂಬರ್ ಮೂರರಲ್ಲಿ ಯುವಕನ ಮೇಲೆ ದಾಳಿ ನಡೆದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಅಲ್ಲಿ ತೀವ್ರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇದಾದ ಬಳಿಕ ಏಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ ಪೊಲೀಸರಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಯುವಕ ಮೃತಪಟ್ಟಿರುವುದಾಗಿ ಮಾಹಿತಿ ಸಿಕ್ಕಿದೆ. ಮೃತನನ್ನು ಮಯಾಂಕ್ ಪನ್ವಾರ್ ಎಂದು ಗುರುತಿಸಲಾಗಿದ್ದು, ಈತ ಶಹಾಪುರದ ಜಾಟ್ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ.
ಒಪ್ಪಿದರೆ ಪ್ರವೀಣ್ ಕುಟುಂಬಕ್ಕೂ 5-10 ಲಕ್ಷ ಪರಿಹಾರ: ಮುಸ್ಲಿಂ ಸೆಂಟ್ರಲ್ ಕಮಿಟಿ
ಪೊಲೀಸರ ತನಿಖೆ ವೇಳೆ ಮಯಾಂಕ್ ಸ್ನೇಹಿತ ನೀಡಿದ ಮಾಹಿತಿ ಪ್ರಕಾರ, ಆಗಸ್ಟ್ 11ರಂದು 7 ಗಂಟೆಗೆ ಈತ ಹಾಗೂ ಮಾಯಾಂಕ್ ಮಾಳವೀಯಾ ನಗರದ ಬೇಗಂಪುರದಲ್ಲಿರುವ ಖಿಲ್ಲಾವೊಂದರಲ್ಲಿ ಕುಳಿತಿದ್ದರು. ಈ ವೇಳೆ ನಾಲ್ವರಿಂದ ಐವರಿದ್ದ ದುಷ್ಕರ್ಮಿಗಳು ಸ್ಥಳಕ್ಕೆ ಬಂದು ಮಾಯಾಂಕ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೇ ಇವರಿಬ್ಬರ ಮೇಲೆ ಕಲ್ಲು ಎಸೆದಿದ್ದಾರೆ, ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಇವರನ್ನು ಬೆನ್ನಟ್ಟಿದ್ದ ದುಷ್ಕರ್ಮಿಗಳು ಚಾಕುವಿನಿಂದ ಹಲವು ಬಾರಿ ಮಯಾಂಕ್ ಮೇಲೆ ಇರಿದು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಮಯಾಂಕ್ ಸ್ನೇಹಿತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ. ಸಿಸಿಟಿವಿಯನ್ನು ಪರಿಶೀಲಿಸಿರುವ ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಅವರ ಸೆರೆಗೆ ಬಲೆ ಬೀಸಿದ್ದಾರೆ.
ಮಸೂದ್, ಫಾಝಿಲ್ ಕುಟುಂಬಕ್ಕೆ 30 ಲಕ್ಷ, ಪ್ರವೀಣ್ ಫ್ಯಾಮಿಲಿಗೂ ನೀಡಲು ಮುಸ್ಲಿಂ ಕಮಿಟಿ ತೀರ್ಮಾನ
ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಇದೇ ರೀತಿಯ ಸಾಲು ಸಾಲು ಯುವಕರ ಹತ್ಯೆಯಿಂದಾಗಿ ಬೂದಿ ಮುಚ್ಚಿದ ಕೆಂಡದಂತಿದೆ. ಮಸೂದ್ ಹತ್ಯೆಯ ಪ್ರತೀಕಾರವಾಗಿ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು. ಪ್ರವೀಣ್ ಚಿತೆಯ ಬೆಂಕಿ ಆರುವ ಮುನ್ನವೇ ಮಂಗಳೂರಿನಲ್ಲಿ ದುಷ್ಕರ್ಮಿಗಳು ಫೈಜಲ್ ಎಂಬ ಮುಸ್ಲಿಂ ಯುವಕನ ಹತ್ಯೆ ಮಾಡಿದ್ದರು.