Matrimony Fraud: ಒಂದಲ್ಲ ಎರಡಲ್ಲ, 14 ಮಹಿಳೆಯರ ವಿವಾಹವಾಗಿ ವಂಚನೆ

By Suvarna News  |  First Published Feb 14, 2022, 8:09 PM IST
  • ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ವಂಚನೆ
  • 14 ಮಹಿಳೆಯರನ್ನು ವಿವಾಹವಾಗಿ ವಂಚಿಸಿದ ಖದೀಮ
  • ಮಧ್ಯವಯಸ್ಕ ಒಂಟಿ ಮಹಿಳೆಯರೇ ಟಾರ್ಗೆಟ್

ಕೇಂದ್ರಪಾರ: ಇತ್ತೀಚಿನ ದಿನಗಳಲ್ಲಿ ವಂಚಕರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಯುವತಿಯರನ್ನು ವಂಚಿಸುವ ಹಲವಾರು ಪ್ರಕರಣಗಳು ನಡೆಯುತ್ತಿವೆ. ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲೂ ಅಂತಹ ಒಂದು ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ದೇಶಾದ್ಯಂತ ಹಲವಾರು ಮಹಿಳೆಯರನ್ನು ವಂಚಿಸಿದ ಆರೋಪದ ಮೇಲೆ 54 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ರಮೇಶ್ ಚಂದ್ರ ಸ್ವೈನ್ ಅಲಿಯಾಸ್‌ ಬಿಧು ಪ್ರಕಾಶ್ ಸ್ವೈನ್ ಅಲಿಯಾಸ್‌ ರಮಣಿ ರಂಜನ್ ಸ್ವೈನ್ ಎಂದು ಗುರುತಿಸಲಾಗಿದೆ.

ಕಳೆದ ವರ್ಷ ಜುಲೈನಲ್ಲಿ ನವದೆಹಲಿಯ ಮಹಿಳಾ ಶಾಲಾ ಶಿಕ್ಷಕಿಯೊಬ್ಬರು ದೂರು ನೀಡಿದ ನಂತರ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ 'ಡೆಪ್ಯುಟಿ ಡೈರೆಕ್ಟರ್ ಜನರಲ್' ದರ್ಜೆಯ ಅಧಿಕಾರಿ ಎಂದು ಪೋಸ್ ಕೊಟ್ಟು ಮಹಿಳೆಯನ್ನು ನಂಬಿಸಿದ್ದ ಆರೋಪಿ ಸ್ವೈನ್‌,  2018 ರಲ್ಲಿ ದೆಹಲಿ ಆರ್ಯ ಸಮಾಜದಲ್ಲಿ ಮಹಿಳೆಯನ್ನು ವಿವಾಹವಾಗಿದ್ದ. ನಂತರ ಆರೋಪಿ ತನಗೆ ವಂಚನೆ ಮಾಡಿರುವುದು ತಿಳಿದ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದರು. 'ಉಪ ಮಹಾನಿರ್ದೇಶಕ' ಎಂಬ ನಕಲಿ ಗುರುತಿನ ಚೀಟಿ ಇಟ್ಟುಕೊಂಡು ಕನಿಷ್ಠ 14 ಮಹಿಳೆಯರನ್ನು ಆರೋಪಿ ಸ್ವೇನ್ ವಿವಾಹವಾಗಿದ್ದಾನೆ ಎಂದು ಪೊಲೀಸರ ತನಿಖೆಯ ವೇಳೆ ತಿಳಿದು ಬಂದಿದೆ.

Latest Videos

undefined

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಈತ ಸಂತ್ರಸ್ತರ ಸಂಪರ್ಕ ಸಾಧಿಸುತ್ತಿದ್ದ. ಒಡನಾಟವನ್ನು ಬಯಸುತ್ತಿದ್ದ ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ತನ್ನ ಮೋಸದ ದಂಧೆಗೆ ಗುರಿಯಾಗಿರಿಸಿಕೊಂಡಿದ್ದ ಅವರ ಹಣವನ್ನು ಪುಸಲಾಯಿಸಿ ವಸೂಲಿ ಮಾಡಿಕೊಂಡ ಬಳಿಕ ಮಹಿಳೆಯರನ್ನು ತ್ಯಜಿಸುತ್ತಿದ್ದ. ವಕೀಲರು, ಶಿಕ್ಷಕರು, ವೈದ್ಯರು ಹೀಗೆ ಉನ್ನತ ಶಿಕ್ಷಣ ಪಡೆದ ಮಹಿಳೆಯರು ಕೂಡ ಈತನ ಮೋಸದ ಬಲೆಗೆ ಬಿದ್ದಿದ್ದಾರೆ. ಒಡಿಶಾದ ಹೊರಗಿದ್ದವರೇ ಹೆಚ್ಚಿನವರು ಈತನ ಬಲೆಗೆ ಬಿದ್ದವರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆತನ ಏಕೈಕ ಉದ್ದೇಶ ಹಣ ಸಂಪಾದಿಸುವುದಾಗಿತ್ತು. ಮಹಿಳೆಯರನ್ನು ಮದುವೆಯಾದ ನಂತರ ಅವರ ಆಸ್ತಿಗಳನ್ನು ಲಪಟಾಯಿಸುವುದು ಆತನ ಉದ್ದೇಶವಾಗಿತ್ತು. ಐದು ಮಕ್ಕಳ ತಂದೆಯಾಗಿರುವ ಆರೋಪಿ 1982 ರಲ್ಲಿ ಮೊದಲ ಬಾರಿ ವಿವಾಹವಾಗಿದ್ದ ನಂತರ 2002 ರಲ್ಲಿ ಈತ ಎರಡನೇ ಮದುವೆಯಾಗಿದ್ದ.

ಪಂಜಾಬ್‌ನಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPF) ಮಹಿಳಾ ಅಧಿಕಾರಿಯನ್ನು ಕೂಡ ಮದುವೆಯಾಗಿದ್ದು ಆಕೆಯಿಂದ  10 ಲಕ್ಷ ರೂ. ವಸೂಲಿ ಮಾಡಿದ್ದ ಎಂಬುದು ತನಿಖೆಯ ಸಮಯದಲ್ಲಿ ತಿಳಿದು ಬಂದಿದೆ. ಅಲ್ಲದೇ ಸಿಎಪಿಎಫ್ ಅಧಿಕಾರಿಯೊಂದಿಗೆ ಮದುವೆ ಸಮಾರಂಭ ನಡೆದ ಗುರುದ್ವಾರ (Gurdwara) ದಲ್ಲಿ ಆಸ್ಪತ್ರೆ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿ 11 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ಈ ಹಿಂದೆ 2006ರಲ್ಲಿ  13 ಬ್ಯಾಂಕ್‌ಗಳಿಗೆ ಸುಮಾರು 1 ಕೋಟಿ ರೂಪಾಯಿ ವಂಚನೆ ಮಾಡಿದ್ದಕ್ಕಾಗಿ ಆರೋಪಿ ಸ್ವೈನ್‌ನನ್ನು ಕೇರಳ ಪೊಲೀಸರು ( Kerala police) ಬಂಧಿಸಿದ್ದರು. ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ನೀಡುವುದಾಗಿ ಭರವಸೆ ನೀಡಿ ಹಲವು ವಿದ್ಯಾರ್ಥಿಗಳಿಗೆ ಈತ ವಂಚಿಸಿದ ನಂತರ ಹೈದರಾಬಾದ್ ಪೊಲೀಸರ (Hyderabad police) ಕಾರ್ಯಪಡೆ ಆತನನ್ನು ಬಂಧಿಸಿತ್ತು. ಈತ ಹೈದರಾಬಾದ್‌ನ ನರ್ಸಿಂಗ್ ಹೋಮ್ ಮಾಲೀಕ ಸೇರಿದಂತೆ ವಿದ್ಯಾರ್ಥಿಗಳಿಂದ ಸುಮಾರು 2 ಕೋಟಿ ರೂಪಾಯಿ ಸಂಗ್ರಹಿಸಿದ್ದ

ಪೊಲೀಸರು ಈಗಾಗಲೇ ಆರೋಪಿಯಿಂದ ವಂಚನೆಗೊಳಗಾದ 14 ಸಂತ್ರಸ್ತರಲ್ಲಿ ಒಂಬತ್ತು ಜನರನ್ನು ಸಂಪರ್ಕಿಸಿದ್ದಾರೆ ಮತ್ತು ಇನ್ನೂ ಅನೇಕ ಮಹಿಳೆಯರು ಆತ ಮೋಸದ ಜಾಲಕ್ಕೆ ಬಲಿಯಾಗಿರಬಹುದು ಆದರೆ ಸಾಮಾಜಿಕ ಪ್ರತಿಷ್ಠೆ ಮತ್ತು ಸ್ಥಾನಮಾನಕ್ಕೆ ಅಡ್ಡಿಯಾಗುವ ಭಯದಿಂದ ಕೆಲವರು ಹೊರಗೆ ಬರುತ್ತಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ.

ಈತನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 498 (ಎ), 419, 468, 471 ಮತ್ತು 494 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆತನನ್ನು ವಶಕ್ಕೆ ಪಡೆದು ವಂಚನೆ, ಹಣದ ವ್ಯವಹಾರದ ಬಗ್ಗೆಯೂ  ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಬಾಡಿಗೆ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ 11 ಎಟಿಎಂ ಕಾರ್ಡ್‌ಗಳು, 4 ವಿಭಿನ್ನ ಗುರುತುಗಳನ್ನು ಹೊಂದಿರುವ 4 ಆಧಾರ್ ಕಾರ್ಡ್‌ಗಳು ಮತ್ತು ವಿಭಿನ್ನ ಗುರುತಿನ ಒಂದು ಬಿಹಾರ (Bihar) ಶಾಲೆಯ ಪ್ರಮಾಣಪತ್ರವನ್ನು ವಶಪಡಿಸಿಕೊಂಡಿದ್ದಾರೆ.

click me!