ಸೋನಾಲಿ ಪೋಗಟ್‌ ದೇಹದ ಮೇಲೆ ಸಾಕಷ್ಟು ಗಾಯದ ಗುರುತು, ಮರಣೋತ್ತರ ವರದಿಯಲ್ಲಿ ಬಹಿರಂಗ!

By Santosh NaikFirst Published Aug 25, 2022, 5:52 PM IST
Highlights

ಸೋನಾಲಿ ಪೋಗಟ್‌ ಅವರ ಕುಟುಂಬ ಆಕೆಯ ಸಾವಿನ ಕುರಿತಾಗಿ ದೂರು ದಾಖಲು ಮಾಡಿದ ಬೆನ್ನಲ್ಲಿಯೇ, ಗೋವಾ ಪೊಲೀಸ್‌ ಕೊಲೆ ಕೇಸ್‌ ಪ್ರಕರಣ ದಾಖಲು ಮಾಡಿದ್ದಾರೆ. ಇದರ ನಡುವೆ ಅಕೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ದೇಹದ ಮೇಲೆ ಸಾಕಷ್ಟು ಗಾಯದ ಗುರುತುಗಳು ಕಂಡುಬಂದಿವೆ ಎಂದು ವರದಿಯಾಗಿದೆ. ಅಂದಾಜು 4 ಗಂಟೆಗಳ ಕಾಲ ಶವರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
 

ಗೋವಾ (ಅ.25): ಹರಿಯಾಣ ಬಿಜೆಪಿ ನಾಯಕಿ, ಟಿಕ್‌ ಟಾಕ್‌ ಸ್ಟಾರ್‌ ಹಾಗೂ ಬಿಗ್‌ ಬಾಸ್‌ ಸ್ಪರ್ಧಿಯೂ ಆಗಿದ್ದ 42 ವರ್ಷದ ಸೋನಾಲಿ ಪೋಗಟ್‌ ಅವರ ದೇಹದ ಮರಣೋತ್ತರ ಪರೀಕ್ಷೆಯನ್ನು ಗುರುವಾರ ಗೋವಾದಲ್ಲಿ ನಡೆಸಲಾಗಿದೆ. ಆಗಸ್ಟ್‌ 23 ರಂದು ಖಾಸಗಿ ಹೋಟೆಲ್‌ನಲ್ಲಿ ಸೋನಾಲಿ ಪೋಗಟ್‌ ಶವವಾಗಿ ಪತ್ತೆಯಾಗಿದ್ದರು. ಆರಂಭಿಕ ವರದಿಯಲ್ಲಿ ಆಕೆ ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ವರದಿಯಾಗಿತ್ಉತ. ಆದರೆ, ಸೋನಾಲಿ ಪೋಗಟ್‌ ಅವರ ಕಿರಿಯ ಸಹೋದರ ರಿಂಕು ಢಾಕಾ, ಸೋನಾಲಿ ಅವರ ಪಿಎ ಸುಧೀರ್‌ ಸಂಗ್ವಾನ್‌ ಹಾಗೂ ಆತನ ಸಹಾಯಕ ಸುಖ್ವಿಂದರ್‌ ಆಕೆಯನ್ನು ಸಾಯಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಕುರಿತಾಗಿ ಗೋವಾ ಪೊಲೀಸ್‌ಗೆ ದೂರು ದಾಖಲಿಸಿದ್ದ ರಿಂಕು, ಸಾವಿಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಬಳಿಕ ಆಕೆಯನ್ನು ಕೊಲೆ ಮಾಡಲಾಗಿದೆ ಎಂದಿದ್ದರು. ಇನ್ನು ಸೋನಾಲಿಯ ಮೈದುನ ಅಮನ್‌ ಪೂನಿಯಾ, ಮರಣೋತ್ತರ ಪರೀಕ್ಷೆಯ ಬಳಿಕ ಸುಧೀರ್‌ ಸಂಗ್ವಾನ್‌ ಹಾಗೂ ಸುಖ್ವಿಂದರ್‌ ಸಿಂಗ್‌ ವಿರುದ್ಧ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಸೋನಾಲಿಯ ಕುಟುಂಬದವರು ಗುರುವಾರ ಬೆಳಗ್ಗೆ ಸೋನಾಲಿಯ ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದ್ದರು. 3 ವೈದ್ಯರ ಸಮಿತಿಯು 12:45 ಕ್ಕೆ ಮರಣೋತ್ತರ ಪರೀಕ್ಷೆಯನ್ನು ಪ್ರಾರಂಭ ಮಾಡಿತ್ತು.

 

ಸಂಜೆ 4ರವರೆಗೆ ಪರೀಕ್ಷೆ ನಡೆದಿದೆ. ಮರಣೋತ್ತರ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಈ ಸಂದರ್ಭದಲ್ಲಿ, ಸೋನಾಲಿ ಸಹೋದರ ರಿಂಕು ಢಾಕಾ ಮತ್ತು ಸೋದರ ಮಾವ ಅಮನ್ ಪೂನಿಯಾ ಆಸ್ಪತ್ರೆಯಲ್ಲಿಯೇ ಇದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಶವ ಹಸ್ತಾಂತರಕ್ಕೆ ದಾಖಲೆಗಳ ಕೆಲಸ ನಡೆಯುತ್ತಿದೆ. ಸೋನಾಲಿಯ ಮೃತದೇಹದೊಂದಿಗೆ ಹಿಸಾರ್ ತಲುಪುವುದಾಗಿ ಸೋನಾಲಿಯ ಮೈದುನ ಅಮನ್ ಪೂನಿಯಾ ತಿಳಿಸಿದ್ದಾರೆ.ಏತನ್ಮಧ್ಯೆ, ಹಿಸಾರ್‌ನಲ್ಲಿರುವ ಸೋನಾಲಿಯ ಎರಡನೇ ಸಹೋದರ ವತನ್ ಢಾಕಾ ಪ್ರಕಾರ, ಗೋವಾ ಆಡಳಿತವು ನ್ಯಾಯಯುತ ತನಿಖೆಯ ಕುಟುಂಬಕ್ಕೆ ಭರವಸೆ ನೀಡಿದೆ. ಸೋನಾಲಿ ಸಹೋದರ ಮತ್ತು ಮೈದುನ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗೋವಾ ಡಿಜಿಪಿ ಜಸ್ಪಾಲ್ ಸಿಂಗ್ ತಿಳಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. 'ಕರ್ಲೀಸ್' ರೆಸ್ಟೋರೆಂಟ್‌ನಲ್ಲಿ ಸೋನಾಲಿಗೆ ಡ್ರಗ್ಸ್ ನೀಡಲಾಗಿತ್ತೇ ಅಥವಾ ಇಲ್ಲವೇ? ಆಕೆಯ ಆರೋಗ್ಯ ಹದಗೆಟ್ಟಾಗ ಆಕೆಯನ್ನು 'ಕರ್ಲೀಸ್' ರೆಸ್ಟೋರೆಂಟ್‌ನ ಮಹಿಳಾ ವಾಶ್‌ರೂಮ್‌ಗೆ ಕರೆದೊಯ್ಯಲಾಗಿದೆಯೇ? ಇದೆಲ್ಲವೂ ತನಿಖೆಗೆ ಒಳಪಟ್ಟಿರುತ್ತದೆ ಎಂದು ಹೇಳಲಾಗಿದೆ.

ನೀಲಿ ಬಣ್ಣಕ್ಕೆ ತಿರುಗಿತ್ತೇ ದೇಹ: ಕುಟುಂಬದ ದೂರಿನ ನಡುವೆಯೂ ಎಫ್‌ಐಆರ್‌ ದಾಖಲು ಮಾಡಿಕೊಳ್ಳದ ಬಗ್ಗೆ ಪ್ರತಿಕ್ರಿಯಿಸಿದ ಡಿಜಿಪಿ, ಮೊದಲಿಗೆ ದೂರನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಲಾಗಿದೆ. ಆ ಬಳಿಕವೇ ಎಫ್‌ಐಆರ್‌ ದಾಖಲಿಸಲಾಗಿದೆ. ಆಕೆಯ ದೇಹದ ಮೇಲೆ ಗಾಯದ ಗುರುತುಗಳಿದ್ದವು ಹಾಗೂ ಅವರ ದೇಹ ನೀಲಿ ಬಣ್ಣಕ್ಕೆ ತಿರುಗಿದ್ದವು ಎನ್ನುವ ಆರೋಪದ ಬಗ್ಗೆ ಪ್ರತಿಕಕ್ರಿಯಿಸಿದ ಡಿಜಿಪಿ, ಈ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ತಿಳಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ವಾಶ್‌ರೂಮ್‌ನಲ್ಲಿ 3 ಗಂಟೆ ಸೋನಾಲಿ ಜೊತೆ ಇದ್ದ ಸುಧೀರ್‌: ಸೋನಾಲಿ ಸಾವಿನ ಬಳಿಕವೂ ಅಂದಾಜು 12 ಗಂಟೆಗಳ ಕಾಲ ಸುಧೀರ್‌, ಆಕೆಯ ಮೊಬೈಲ್‌ ಬಳಸಿದ್ದ. ಸುಧೀರ್‌ನಿಂದ ಸೋನಾಲಿಯ ಮೊಬೈಲ್ ಫೋನ್ ಏಕೆ ತೆಗೆದುಕೊಂಡಿಲ್ಲ ಎಂದು ಗೋವಾ ಪೊಲೀಸರನ್ನು ಕೇಳಿದಾಗ, ಪೊಲೀಸ್ ಅಧಿಕಾರಿಗಳು ತೃಪ್ತಿಕರ ಉತ್ತರವನ್ನು ನೀಡಲಿಲ್ಲ. ಅಮನ್ ಪೂನಿಯಾ ಪ್ರಕಾರ, ಸೋಮವಾರ ರಾತ್ರಿ ಸುಧೀರ್ ಸಾಂಗ್ವಾನ್ ಅವರು ಸೋನಾಲಿಯನ್ನು 'ಕರ್ಲೀಸ್' ರೆಸ್ಟೋರೆಂಟ್‌ಗೆ ಕರೆದೊಯ್ದರು. ಅಲ್ಲಿ ಸೋನಾಲಿಯ ಆರೋಗ್ಯ ಹದಗೆಟ್ಟಾಗ, ಸುಧೀರ್ ಅವಳೊಂದಿಗೆ ಲೇಡೀಸ್ ವಾಶ್ ರೂಂನಲ್ಲಿ 3 ಗಂಟೆಗಳ ಕಾಲ ಕುಳಿತರು. ಯಾಕೆ ಸೋನಾಲಿಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ? ಅದನ್ನು ತನಿಖೆ ಮಾಡಬೇಕು. ಬೆಳಗ್ಗೆ 8 ಗಂಟೆಗೆ ಸೋನಾಲಿ ಸಾವಿನ ಬಗ್ಗೆ ಸುಧೀರ್ ಮನೆಯವರಿಗೆ ತಿಳಿಸಿದ್ದಾರೆ.

ಕೊಲೆಗೂ ಮುನ್ನ ಸೋನಾಲಿ ರೇಪ್‌: ಸಹೋದರ ರಿಂಕು ಆರೋಪ!

ಸುಧೀರ್‌ ಪುಟ್ಟ ಹುಳು ಮಾತ್ರ: ಅಮನ್ ಪ್ರಕಾರ, ಸೋನಾಲಿಯನ್ನು ರಾಜಕೀಯ ಪಿತೂರಿಯ ಭಾಗವಾಗಿ ಕೊಲೆ ಮಾಡಲಾಗಿದೆ ಮತ್ತು ಸುಧೀರ್ ಅದರಲ್ಲಿ ಪುಟ್ಟ ಹುಳು ಮಾತ್ರ. ಸೋನಾಲಿ ಸಾವಿನ ಸುದ್ದಿ ತಿಳಿದು ತಾನು ಮತ್ತು ರಿಂಕು ಗೋವಾ ತಲುಪಿದಾಗ, ಸುಧೀರ್, ಸೋನಾಲಿ ರಾತ್ರಿಯಲ್ಲಿ ಡ್ರಗ್ ಓವರ್ ಡೋಸ್ ಸೇವಿಸಿದ್ದಾಳೆ, ಇದರಿಂದ ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ಹೇಳಿದರು. ಸೋನಾಲಿ ಸೆಲೆಬ್ರಿಟಿ ಆಗಿದ್ದರಿಂದ ಗಲಾಟೆ ಮಾಡಬಹುದೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿರಲಿಲ್ಲ. ರೆಸ್ಟೋರೆಂಟ್‌ನಲ್ಲಿ ಉದ್ದೇಶಪೂರ್ವಕವಾಗಿ ಸೋನಾಲಿ ಫೋಗಟ್ ಅವರಿಗೆ ಡ್ರಗ್ ಓವರ್ ಡೋಸ್ ನೀಡಲಾಗಿದೆ ಎಂದು ಅಮನ್ ಆರೋಪಿಸಿದ್ದಾರೆ.

ಬಿಜೆಪಿ ನಾಯಕಿ, ಟಿಕ್‌ ಟಾಕ್‌ ಸ್ಟಾರ್‌ ಸೋನಾಲಿ ಪೋಗಟ್‌ ನಿಧನ!

ಇದು ಪೂರ್ಣ ಪ್ರಕರಣ: ಸೋನಾಲಿ ಫೋಗಟ್ ಆಗಸ್ಟ್ 23 ರಂದು ಗೋವಾದಲ್ಲಿ ಹೃದಯಾಘಾತದಿಂದ ನಿಧನರಾದರು. ಆಗ ಗೋವಾದಲ್ಲಿ ಪಿಎ ಸುಧೀರ್ ಮತ್ತು ಸುಖ್ವಿಂದರ್ ಜೊತೆಗಿದ್ದರು. ಮಂಗಳವಾರ ಬೆಳಗ್ಗೆ 8 ಗಂಟೆಗೆ ಸುಧೀರ್, ಸೋನಾಲಿ ಸಹೋದರನಿಗೆ ಕರೆ ಮಾಡಿ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ನಂತರ ಅವರು ಫೋನ್ ಎತ್ತಲಿಲ್ಲ. ಸೋನಾಲಿಯನ್ನು ಸುಧೀರ್ ಮತ್ತು ಸುಖ್ವಿಂದರ್ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸುಧೀರ್ ಸೋನಾಲಿಯ ಆಸ್ತಿಯನ್ನು ದೋಚಲು ಬಯಸುತ್ತಾನೆ. ಅದಕ್ಕಾಗಿಯೇ ಸೋನಾಲಿಯನ್ನು ಕೊಂದಿದ್ದಾನೆ ಎನ್ನಲಾಗಿದೆ.

click me!