ಪಾದಚಾರಿ ಮಹಿಳೆಯನ್ನ ತನ್ನ ಚಾಣಾಕ್ಷತೆಯಿಂದ ರಕ್ಷಿಸಿ ಹೀರೋ ಆಗಿದ್ದ ಬಸ್ ಚಾಲಕನ ವಿರುದ್ಧ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಜೂ.22): ಮಹಿಳೆಯೊಬ್ಬರು ರಸ್ತೆಯಲ್ಲಿ ವಾಹನಗಳನ್ನು ಗಮನಿಸದೇ ರಸ್ತೆ ದಾಟುತ್ತಿದ್ದ ವೇಳೆ ಬಸ್ಸೊಂದು ಡಿಕ್ಕಿಯಾಗುವುದು ಕೂದಲೆಳೆ ಅಂತರದಲ್ಲಿ ತಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು, ಪಾದಚಾರಿ ಮಹಿಳೆ ಹಾಗೂ ಬಸ್ ಚಾಲಕನ ವಿರುದ್ದ ಇದೇ ಮೊದಲ ಬಾರಿಗೆ ಪ್ರಕರಣ ದಾಖಲಿಸಿದ ಅಪರೂಪದ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ತೌಡು ಗೋಳಿ ಸಮೀಪದ ನರಿಂಗಾನದಲ್ಲಿ ಜೂ.20ರಂದು ಘಟನೆ ನಡೆದಿತ್ತು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಅಪಘಾತದಿಂದ ಮಹಿಳೆ ಪಾರಾಗಿದ್ದರು. ಮಂಗಳೂರು-ಮುಡಿಪು ಚಲಿಸುವ ಖಾಸಗಿ ಬಸ್ ಚಾಲಕನ ಚಾಣಾಕ್ಷತನದಿಂದ ಪಾರಾಗಿದ್ದರು. ರಸ್ತೆಯಲ್ಲಿ ಬರುವ ವಾಹನಗಳನ್ನು ಗಮನಿಸದೇ ಮಹಿಳೆ ರಸ್ತೆ ದಾಟಿದ್ದು, ಈ ವೇಳೆ ಎದುರಿನಿಂದ ಬಂದ ಬಸ್ ಢಿಕ್ಕಿ ಹೊಡೆಯುವುದರಲ್ಲಿ ಕೂದಲೆಲೆ ಅಂತರದಲ್ಲಿ ಮಿಸ್ ಆಗಿತ್ತು. ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಬಸ್ ಡ್ರೈವರ್ ಬಸ್ ನ್ನು ಎಡಕ್ಕೆ ಚಲಾಯಿಸಿದ್ದ ಪರಿಣಾಮ ಪಾದಚಾರಿ ಮಹಿಳೆ ಬಸ್ ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.
ಜೂನ್, ಜುಲೈ ಆಯ್ತು, ಈಗ ಆಗಸ್ಟ್‌ಗೆ ಮುಂದೂಡಿಕೆಯಾದ ಅನ್ನಭಾಗ್ಯ ಯೋಜನೆ
ಬಸ್ ಚಾಲಕನ ಈ ಚಾಣಾಕ್ಷತನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಬಸ್ ಚಾಲಕನ ವಿರುದ್ಧವೇ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗೋಪಾಲಕೃಷ್ಣ ಎಂಬ ಖಾಸಗಿ ಬಸ್ಸಿನ ಚಾಲಕ ತ್ಯಾಗರಾಜ್ ವಿರುದ್ದ ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷ್ಯ ತನದಿಂದ ಚಲಾಯಿಸಿದ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಐಪಿಸಿ 279, 336 ಜೊತೆಗೆ ರೂಲ್ 211(2)r/w 177IMV ಕಾಯ್ದೆಯಂತೆ ಎಫ್ ಐಆರ್ ದಾಖಲಿಸಿದ್ದು, ಚಾಲಕನ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾದರೂ ನಿರ್ಲಕ್ಷ್ಯದ ಚಾಲನೆಗೆ ಕೇಸು ದಾಖಲಿಸಿದ ಬಗ್ಗೆ ಪರ-ವಿರೋಧ ವಾದ ಕೇಳಿ ಬಂದಿತ್ತು.
ಪಾದಚಾರಿ ಮಹಿಳೆ ವಿರುದ್ದವೂ ಕೇಸು!
ಈ ನಡುವೆ ಚಾಲಕನ ಮೇಲೆ ಕೇಸು ದಾಖಲಿಸಿದ ಪೊಲೀಸರ ನಡೆಯ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಸ್ವತಃ ಟ್ರಾಫಿಕ್ ಎಡಿಜಿಪಿ ಅಲೋಕ್ ಕುಮಾರ್ ಅವರೇ ಈ ಪ್ರಕರಣದ ಬಗ್ಗೆ ಗಮನ ಹರಿಸಿದ್ದಾರೆ. ಅದರಂತೆ ಮಹಿಳೆಯ ವಿರುದ್ದವೂ ಕೇಸು ದಾಖಲಿಸಿದ ಮಂಗಳೂರು ಪೊಲೀಸರು, ನಿರ್ಲಕ್ಷ್ಯತನದಿಂದ ರಸ್ತೆ ದಾಟಿದ್ದಕ್ಕೆ ಕೇಸು ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ. ಕರ್ನಾಟಕ ಸಂಚಾರ ನಿಯಂತ್ರಣ ನಿಯಮಗಳು 1979ರಡಿ ಕೇಸು ದಾಖಲಿಸಿದ್ದು, ಸೆಕ್ಷನ್ 13 ಸಂಚಾರ ನಿಯಂತ್ರಣ ನಿಯಮಗಳು ಹಾಗೂ ಸೆಕ್ಷನ್ 92G KP Act ನಡಿ ಕೇಸು ದಾಖಲಿಸಲಾಗಿದೆ. ಈ ಬಗ್ಗೆ ಟ್ವಿಟರ್ ನಲ್ಲಿ ಟ್ರಾಫಿಕ್ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದು, ಭಾರತೀಯ ಮೋಟಾರು ವಾಹನ ಕಾಯಿದೆಯಡಿ ಕೇಸು ದಾಖಲಿಸಲು ಅವಕಾಶವಿಲ್ಲ. ಹಾಗಾಗಿ ಕರ್ನಾಟಕ ಸಂಚಾರ ನಿಯಂತ್ರಣ ನಿಯಮಗಳು 1979ರಡಿ ಕೇಸು ದಾಖಲಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
Mangaluru: ಮಹಿಳೆ ಜೀವ ಉಳಿಸಿದ್ದ ಡ್ರೈವರ್ ವಿರುದ್ಧ ಕೇಸ್!
ಬಸ್ ನಿಲ್ದಾಣದ ಸಮೀಪ ವೇಗವಾಗಿ ಯಾಕೆ ಚಲಾಯಿಸಲಿ: ತ್ಯಾಗರಾಜ್
ಬಸ್ ನಿಲ್ದಾಣ ಇರುವಾಗ ಬಸ್ಸನ್ನೇಕೆ ವೇಗವಾಗಿ ಚಲಾಯಿಸಲಿ, ಹಾರ್ನ್ ಹಾಕದೇ ಇರುತ್ತಿದ್ದರೆ ಇಬ್ಬರು ಮಹಿಳೆಯರು ಬಸ್ಸಿನಡಿಗೆ ಬೀಳುವ ಸಾಧ್ಯತೆಗಳು ಹೆಚ್ಚಿತ್ತು. ಆದರೂ ಪೊಲೀಸ್ ಇಲಾಖೆ, ಕಾನೂನಿಗೆ ಗೌರವ ನೀಡಿ ಪ್ರಕರಣ ದಾಖಲಿಸಿದೆ. ಅದನ್ನು ಎದುರಿಸಬೇಕಾಗಿರುವುದು ನನ್ನ ಕರ್ತವ್ಯ ಎಂದು ಮಹಿಳೆಯನ್ನು ಅಪಘಾತದಿಂದ ಪವಾಡ ಸದೃಶವಾಗಿ ಪಾರು ಮಾಡಿದ ಚಾಲಕ ತ್ಯಾಗರಾಜ್ ಹೇಳಿದ್ದಾರೆ.
ತೌಡುಗೋಳಿ ಕ್ರಾಸ್ ನಲ್ಲಿ ಬಸ್ಸು ನಿಲ್ದಾಣವಿದೆ. ಅಲ್ಲಿ ಬಸ್ಸನ್ನು ನಿಲ್ಲಿಸಬೇಕಿತ್ತು. ಆದ ಕಾರಣ 30, 40ರ ವೇಗದಲ್ಲಿ ಬಸ್ಸು ಇತ್ತು. ಹಾಗೆಯೇ ಹಾರ್ನ್ ಹಾಕದೇ ಇರುತ್ತಿದ್ದರೆ ಇಬ್ಬರು ಮಹಿಳೆಯರು ಅಪಘಾತ ಎದುರಿಸುವ ಸಾಧ್ಯತೆ ಇತ್ತು ಅನ್ನುತ್ತಾರೆ ಗೋಪಾಲಕೃಷ್ಣ ಬಸ್ಸು ಚಾಲಕ ತ್ಯಾಗರಾಜ್. ಕಳೆದ 25 ವರ್ಷಗಳಿಂದ ಖಾಸಗಿ ಬಸ್ಸುಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ತ್ಯಾಗರಾಜ್ ಚಾಲನೆಯಲ್ಲಿ ಸಾಕಷ್ಟು ಅನುಭವ ಹೊಂದಿದವರು. ಕಳೆದ 19 ವರ್ಷಗಳಿಂದ ಒಂದೇ ರೂಟ್ ನಲ್ಲಿ ಬಸ್ ಚಲಾಯಿಸುತ್ತಾ ಬಂದಿದ್ದಾರೆ. ದೈವ ದಯೆಯಿಂದ ಮಹಿಳೆಯನ್ನು ರಕ್ಷಿಸಿದ ಸಂತೃಪ್ತಿ ಇದೆ. ವರದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಜನರಿಂದ ಪ್ರಶಂಸೆ ಸಿಕ್ಕರೂ ಕಮೀಷನರ್ ಆದೇಶದಂತೆ ಪೊಲೀಸ್ ಇಲಾಖೆ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿದೆ.