ಸಿಬಿಐ ದಾಳಿಯಲ್ಲಿ ಬಂಧನಕ್ಕೊಳಗಾಗಿದ್ದ ಮಂಗಳೂರಿನ ರೈಲ್ವೇ ಇಲಾಖೆ ಸಿಬ್ಬಂದಿಯ ಶವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಂಗಳೂರು ಹೊರವಲಯದ ತೊಕ್ಕೊಟ್ಟು ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ.
ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಜೂ.20): ಸಿಬಿಐ ದಾಳಿಯಲ್ಲಿ ಬಂಧನಕ್ಕೊಳಗಾಗಿದ್ದ ಮಂಗಳೂರಿನ ರೈಲ್ವೇ ಇಲಾಖೆ ಸಿಬ್ಬಂದಿಯ ಶವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಂಗಳೂರು ಹೊರವಲಯದ ತೊಕ್ಕೊಟ್ಟು ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಮಂಗಳೂರು ರೈಲ್ವೇ ನಿಲ್ದಾಣ ಬಳಿಯ ರೈಲ್ವೇ ಆಸ್ಪತ್ರೆ ಫಾರ್ಮಸಿಸ್ಟ್ ವಿಜಯನ್ ಶವ ಪತ್ತೆಯಾಗಿದ್ದು, ರೈಲ್ವೇ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಆದರೆ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಅನುಮಾನ ಮೂಡಿದೆ. ಕಳೆದ ವಾರ ಮಂಗಳೂರಿನ ರೈಲ್ವೇ ಆಸ್ಪತ್ರೆಗೆ ಬೆಂಗಳೂರಿನ ಸಿಬಿಐ ಟೀಂ ದಾಳಿ ನಡೆಸಿತ್ತು. ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡುತ್ತಿದ್ದ ಆರೋಪದಡಿ ದಾಳಿ ನಡೆಸಲಾಗಿದ್ದು, ದಾಳಿ ನಡೆಸಿ ಆಸ್ಪತ್ರೆ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಶಿವಶಂಕರ ಮೂರ್ತಿ, ಫಾರ್ಮಸಿಸ್ಟ್ ವಿಜಯನ್ ಹಾಗೂ ದಳ್ಳಾಲಿ ಇಬ್ರಾಹಿಂ ಬಂಧನ ಮಾಡಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವಿಜಯನ್ ಶವ ಇಂದು ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ.
ನನಗೂ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ: ಸುಪ್ರೀಂ ಮೊರೆ ಹೋದ ಎಂಜಿನಿಯರ್..!
ರೈಲ್ವೇ ಪೊಲೀಸ್ ಮತ್ತು ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ರೈಲ್ವೇ ನೌಕರರು ಪ್ರತೀ ವರ್ಷ ದೈಹಿಕ ಕ್ಷಮತೆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಆದರೆ ವಿಜಯನ್ ಮತ್ತು ತಂಡ ಈ ಪ್ರಮಾಣ ಪತ್ರವನ್ನ ಹಣ ಪಡೆದು ತಯಾರಿಸಿಕೊಡುತ್ತಿದ್ದ ಆರೋಪ ಮಾಡಲಾಗಿದೆ. ದಕ್ಷಿಣ, ನೈರುತ್ಯ ರೈಲ್ವೇ ಹಾಗೂ ಕೊಂಕಣ ರೈಲ್ವೇ ಸಿಬ್ಬಂದಿಗೆ ನಕಲಿ ಪ್ರಮಾಣ ಪತ್ರ ನೀಡಿದ್ದು, ಇದರಲ್ಲಿ ಕೇರಳದ ಪಾಲ್ಘಾಟ್ ಮತ್ತು ಕೊಂಕಣ ರೈಲ್ವೇ ವಿಭಾಗದ ಸಿಬ್ಬಂದಿಗೆ ಹೆಚ್ಚಾಗಿ ನೀಡಿದ್ದ ಆರೋಪವಿದೆ. ಇದೀಗ ಸಿಬಿಐನಿಂದ ಬಂಧಿತನಾಗಿದ್ದ ವಿಜಯನ್ ಶವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಂಗಳೂರು ಕೇಂದ್ರದಿಂದಲೇ ನಕಲಿ ಸರ್ಟಿಫಿಕೇಟ್: ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಂಬಂಧ ಕೇಂದ್ರ ರೈಲ್ವೇ ವಿಭಾಗದಿಂದ ಸಿಬಿಐ ತಂಡಕ್ಕೆ ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲಿಸಿದಾಗ ದೇಶದ ಹಲವು ರೈಲ್ವೇ ಆಸ್ಪತ್ರೆಗಳಲ್ಲಿ ನಕಲಿ ಸರ್ಟಿಫಿಕೇಟ್ ನೀಡಿರುವುದು ಬೆಳಕಿಗೆ ಬಂದಿದೆ. ಅದರಂತೆ ಮಂಗಳೂರು ಕೇಂದ್ರದಲ್ಲೂ 1500 ಮಂದಿಗೆ ನಕಲಿ ಸರ್ಟಿಫಿಕೇಟ್ ನೀಡಿರೋದು ಪತ್ತೆಯಾಗಿದ್ದು, ಅದರಂತೆ ಸಿಬಿಐ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿತ್ತು. ರೈಲುಗಳಲ್ಲಿ ಕೆಲಸ ಮಾಡುವ ಫ್ಲಾಟ್ ಫಾರಂ ಸಿಬ್ಬಂದಿ, ರೈಲು ಚಾಲಕ, ಅಡುಗೆಯವರು, ಕ್ಲೀನಿಂಗ್ ಸಿಬ್ಬಂದಿ ಸೇರಿ ಎಲ್ಲರಿಗೂ ಈ ಸರ್ಟಿಫಿಕೇಟ್ ಸಲ್ಲಿಕೆ ಕಡ್ಡಾಯ.
ಸೇಡಿನ ರಾಜಕಾರಣಕ್ಕೆ ಆಸ್ಪದ ನೀಡಲ್ಲ: ಆರ್.ವಿ. ದೇಶಪಾಂಡೆ
ಇದನ್ನ ರೈಲ್ವೇ ಆಸ್ಪತ್ರೆಗಳಲ್ಲೇ ಆರೋಗ್ಯ ತಪಾಸಣೆ ನಡೆಸಿ ಪಡೆಯುವುದು ಕಡ್ಡಾಯ. ಹೀಗಾಗಿ ದಳ್ಳಾಲಿ ಮೂಲಕ ವಾಟ್ಸಪ್‌ನಲ್ಲಿ ದಾಖಲೆ ಸಲ್ಲಿಸಿ ಹಣ ಪಾವತಿಸಿ ನಕಲಿ ಸರ್ಟಿಫಿಕೇಟ್ ಪಡೆಯುತ್ತಿದ್ದರು. ಇನ್ನು ರೈಲ್ವೇ ಅಂತರ್‌ರಾಜ್ಯ ಸಾರಿಗೆ ವ್ಯವಸ್ಥೆಯಾಗಿದ್ದು, ಕೇಂದ್ರ ಸರ್ಕಾರದ ಅಧೀನದಲ್ಲಿರೋ ಕಾರಣ ಸಿಬಿಐ ಪ್ರಕರಣದಲ್ಲಿ ತನಿಖೆ ನಡೆಸುತ್ತಿದೆ. ಕರ್ನಾಟಕದಲ್ಲಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಈ ಆರೋಗ್ಯ ಕೇಂದ್ರಗಳಿದ್ದು, ಕೇರಳದ ಕೊಚ್ಚಿ, ಮಹಾರಾಷ್ಟ್ರದ ಮುಂಬೈ ಸೇರಿ ದೇಶದ ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಈ ತಪಾಸಣಾ ಕೇಂದ್ರಗಳಿವೆ. ಹೀಗಾಗಿ ದೇಶದ ಎಲ್ಲಾ ರೈಲ್ವೇ ಆಸ್ಪತ್ರೆಗಳು ನೀಡಿರುವ ಫಿಟ್‌ನೆಸ್ ಸರ್ಟಿಫಿಕೇಟ್ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.