ಉಗ್ರ ಶಾಕೀರ್ ಎರಡು ನಕಲಿ ಆಧಾರ್ ಕಾರ್ಡ್ ಮತ್ತು ನಕಲಿ ಸಿಮ್ ಕಾರ್ಡ್‌ಗಳನ್ನು ಇಟ್ಟುಕೊಂಡು ವ್ಯವಹರಿಸುತ್ತಿದ್ದ. ಪ್ರೇಮ್‌ರಾಜ್ ಮತ್ತು ಅರುಣ್ ಎಂಬವರ ಹೆಸರಿನಲ್ಲಿ ಆಧಾರ್ ಕಾರ್ಡ್ ಹೊಂದಿದ್ದರೆ, ಸುರೇಂದ್ರನ್ ಮತ್ತು ಇನ್ನೊಬ್ಬರ ಹೆಸರಿನಲ್ಲಿ ಸಿಮ್ ಕಾರ್ಡ್ ಹೊಂದಿದ್ದ!
ಮಂಗಳೂರು (ನ.21) : ಉಗ್ರ ಶಾಕೀರ್ ಎರಡು ನಕಲಿ ಆಧಾರ್ ಕಾರ್ಡ್ ಮತ್ತು ನಕಲಿ ಸಿಮ್ ಕಾರ್ಡ್‌ಗಳನ್ನು ಇಟ್ಟುಕೊಂಡು ವ್ಯವಹರಿಸುತ್ತಿದ್ದ. ಪ್ರೇಮ್‌ರಾಜ್ ಮತ್ತು ಅರುಣ್ ಎಂಬವರ ಹೆಸರಿನಲ್ಲಿ ಆಧಾರ್ ಕಾರ್ಡ್ ಹೊಂದಿದ್ದರೆ, ಸುರೇಂದ್ರನ್ ಮತ್ತು ಇನ್ನೊಬ್ಬರ ಹೆಸರಿನಲ್ಲಿ ಸಿಮ್ ಕಾರ್ಡ್ ಹೊಂದಿದ್ದ. ಕೊಯಮತ್ತೂರಿನಲ್ಲಿ ಈತ ತಲೆಮರೆಸಿಕೊಂಡಿದ್ದಾಗ ನಕಲಿ ಸಿಮ್ ಮಾಡಿಕೊಟ್ಟಿರುವ ವ್ಯಕ್ತಿಯನ್ನು ಊಟಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ದೊರೆತಿದೆ. ಕೊಯಮತ್ತೂರಿನಲ್ಲಿದ್ದಾಗ ಅರುಣ್ ಎಂಬವರ ಆಧಾರ್ ಕಾರ್ಡ್ ಬಳಕೆ ಮಾಡುತ್ತಿದ್ದರೆ, ಮೈಸೂರಿನಲ್ಲಿ ಪ್ರೇಮ್ ರಾಜ್ ಎಂದು ಹೇಳಿ ತಿರುಗುತ್ತಿದ್ದ. ಈತನ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿರುವ ಬಗ್ಗೆಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊಯಮತ್ತೂರು ಲಿಂಕ್?: ಕೊಯಮತ್ತೂರಿನಲ್ಲಿ ಅ.23ರಂದು ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೂ ಶಾಕೀರ್‌ಗೂ ಸಂಪರ್ಕ ಇರುವುದು ಸದ್ಯದ ಮಟ್ಟಿಗೆ ಕಂಡುಬಂದಿಲ್ಲ. ಈ ನಿಟ್ಟಿನಲ್ಲೂ ತನಿಖೆ ನಡೆಯಲಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಪೊಲೀಸರಿಂದ ಶಂಕಿತ ಉಗ್ರ ಶಾರೀಕ್ ಮನೆ ಸೇರಿ 4 ಮನೆಗಳ ತಪಾಸಣೆ
ಆಧಾರ್ ಕಳೆದುಕೊಂಡರೆ ದೂರು ಕೊಡಿ: ಸಾರ್ವಜನಿಕರು ಆಧಾರ್ ಕಾರ್ಡ್ ಕಳೆದುಕೊಂಡರೆ ತಕ್ಷಣ ಪೊಲೀಸ್ ದೂರು ನೀಡಿ. ಇಲ್ಲದಿದ್ದರೆ ನಿಮ್ಮ ಆಧಾರ್ ಕಾರ್ಡ್ ಇತರರ ಕೈಸೇರಿ ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ ಎಂದು ಮನವಿ ಮಾಡಿದರು.
ಆಟಿಕೆ ಎಕೆ 47 ಇಟ್ಕೊಂಡಿದ್ದ ಉಗ್ರ!
ಮಂಗಳೂರು: ಮೈಸೂರಿನ ಬಾಡಿಗೆ ಮನೆಯಲ್ಲಿ 2 ತಿಂಗಳು ವಾಸವಾಗಿದ್ದ ಶಾರೀಕ್ ಸ್ಫೋಟಕ ಸಾಮಗ್ರಿಗಳ ಜತೆಗೆ ಆಟಿಕೆ ಎಕೆ-47ನ್ನೂ ಖರೀದಿಸಿದ್ದ! ಅಲ್ಲದೆ, 150 ಬೆಂಕಿ ಪೊಟ್ಟಣಗಳು ಕೂಡ ಪತ್ತೆಯಾಗಿವೆ. ಬೆಂಕಿಕಡ್ಡಿಯ ಮದ್ದನ್ನು ಸ್ಫೋಟಕಕ್ಕೆ ಕಚ್ಚಾವಸ್ತುವಾಗಿ ಬಳಸುವ ಪ್ಲ್ಯಾನ್ ಮಾಡಿಕೊಂಡಿದ್ದ. ಈ ಹಿಂದೆ ಈತನ ಸಹಚರರಾಗಿದ್ದ ಯಾಸಿನ್ ಮತ್ತು ಮಾಝ್ ಮನೆಯಲ್ಲಿ ತಪಾಸಣೆ ನಡೆಸಿಗಾಲೂ ಭಾರೀ ಬೆಂಕಿಪೊಟ್ಟಣ ಮತ್ತು ಇತರ ಪರಿಕರಗಳು ಪತ್ತೆಯಾಗಿದ್ದವು.
ಅರಾಫತ್, ಮತೀನ್ ಮಾಸ್ಟರ್‌ಮೈಂಡ್?
ಮಂಗಳೂರು: ಮಂಗಳೂರು ಉಗ್ರಪರ ಗೋಡೆ ಬರಹ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಆರಾಫತ್ ಆಲಿ ಆಗಿನಿಂದಲೂ ತಲೆಮರೆಸಿಕೊಂಡಿದ್ದು, ದುಬೈನಲ್ಲಿರುವುದಾಗಿ ತಿಳಿದುಬಂದಿದೆ. ಇನ್ನೊಬ್ಬ ಶಂಕಿತ ಉಗ್ರ ಮತೀನ್ ಅಹ್ಮದ್ ಎಂಬಾತ ಕೂಡ ತಲೆಮರೆಸಿಕೊಂಡಿದ್ದಾನೆ. ಎನ್‌ಐಎ ಲಿಸ್ಟ್‌ನಲ್ಲಿ ಮತೀನ್ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದು, ಈತನ ಪತ್ತೆಗೆ ಎನ್‌ಐಎ 2 ಲಕ್ಷ ರು. ಬಹುಮಾನ ಘೋಷಿಸಿದೆ. ಇವರಿಬ್ಬರೂ ಶಾರೀಕ್‌ಗೆ ಉಗ್ರ ಪ್ರಚೋದನೆ ನೀಡಿರುವ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಮೂವರೂ ತೀರ್ಥಹಳ್ಳಿಯವರೇ ಆಗಿದ್ದಾರೆ. ಅರಾಫತ್ ಮತ್ತು ಮತೀನ್ ಪರಿಚಯವಾದ ಬಳಿಕ ಶಾರೀಕ್ ತನ್ನ ಸ್ನೇಹಿತ ಮಾಜ್, ಯಾಸೀನ್ ಜತೆಗೂಡಿ ಶಿವಮೊಗ್ಗದಲ್ಲಿ ಟ್ರಯಲ್ ಬಾಂಬ್ ಸ್ಫೋಟ ನಡೆಸಿದ್ದಾರೆ. ಇದಕ್ಕೆ ಅರಾಫತ್ ಮತ್ತು ಮತೀನ್ ಅವರೇ ಕುಮ್ಮಕ್ಕು ನೀಡಿರುವ ಸಾಧ್ಯತೆ ದಟ್ಟವಾಗಿದೆ. ಈ ಮಾಝ್ ಎಂಬಾತ ಮಂಗಳೂರಿನ ಗೋಡೆ ಬರಹ ಪ್ರಕರಣದ ಆರೋಪಿಯೂ ಹೌದು. ಸದ್ಯಕ್ಕೆ ಮಾಝ್ ಮತ್ತು ಯಾಸೀನ್ ಶಿವಮೊಗ್ಗ ಕೇಸ್‌ನಲ್ಲಿ ಜೈಲಲ್ಲಿದ್ದಾರೆ.
ಶಾರೀಕ್ ಆರೋಗ್ಯದ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿಲ್ಲ
ಮಂಗಳೂರು: ಆರೋಪಿ ಶಾರೀಕ್ ಹಾಗೂ ರಿಕ್ಷಾಚಾಲಕ ಪುರುಷೋತ್ತಮ್ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ. ಪುರುಷೋತ್ತಮ್ ಆರೋಗ್ಯ ಸ್ಥಿರವಾಗಿದೆ ಮಾತನಾಡುವ ಸ್ಥಿತಿಯಲ್ಲಿದ್ದಾರೆ. ಅವರ ದೇಹದ ಅಂಗಾಗಗಳ ಸ್ಥಿತಿ ಚೆನ್ನಾಗಿದೆ, ಕುಟುಂಬ ಸದಸ್ಯರು ಅವರ ಜೊತೆಯಲ್ಲಿದ್ದಾರೆ. ಶಾರೀಕ್‌ಗೂ ಚಿಕಿತ್ಸೆ ಮುಂದುವರಿದಿದೆ. ಆತನ ಆರೋಗ್ಯ ಹೀಗೆಯೆ ಆಗುತ್ತೆ ಎಂಬ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿಲ್ಲ. ಆತನಿಗೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಶ್ನೆಗೆ ಉತ್ತರ ನೀಡಲು ಯಾವಾಗ ಅರ್ಹನಾಗುತ್ತಾನೆ ಎಂಬುದನ್ನು ಗಮನಿಸಿ ವಶಕ್ಕೆ ಪಡೆಯುತ್ತೇವೆ. ನಮ್ಮ ಒಬ್ಬರು ಅಧಿಕಾರಿಯನ್ನು ಆಸ್ಪತ್ರೆಯಲ್ಲಿ ನೇಮಕ ಮಾಡಲಾಗಿದೆ. ಈಗಾಗಲೇ ತಹಸೀಲ್ದಾರ್ ಬಂದು ಸಂತ್ರಸ್ತ ಚಾಲಕನಿಗೆ ಪರಿಹಾರ ನೀಡುವ ಬಗ್ಗೆ ಮಾಹಿತಿ ಪಡೆದು ತೆರಳಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.
ರಿಕ್ಷಾ ಚಾಲಕಗೆ ನೆರವಿನ ಭರವಸೆ
ಮಂಗಳೂರು: ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡು ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಗೋರಿಗುಡ್ಡೆ ನಿವಾಸಿ ಪುರುಷೋತ್ತಮ ಪೂಜಾರಿ ಅವರನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಬಿಲ್ಲವ ಬ್ರಿಗೇಡ್ ಸ್ಥಾಪಕ ಅಧ್ಯಕ್ಷ ಅವಿನಾಶ್ ಸುವರ್ಣ, ಕೃತಿನ್, ಗೆಜ್ಜೆಗಿರಿ ಕ್ಷೇತ್ರದ ವಕ್ತಾರ ರಾಜೇಂದ್ರ ಚಿಲಿಂಬಿ ಭೇಟಿಯಾಗಿ ಎಲ್ಲ ರೀತಿಯ ಸಹಾಯ ನೀಡುವುದದಾಗಿ ಭರವಸೆ ನೀಡಿದರು. ಬಳಿಕ ಪತ್ನಿ, ಮಕ್ಕಳ ಜತೆ ಸಮಾಲೋಚನೆ ನಡೆಸಿ ಅವರಿಗೂ ಧೈರ್ಯ ತುಂಬಿದರು.
ಮಂಗಳೂರು ಸ್ಫೋಟ ಪ್ರಕರಣ; ಸ್ಥಳದಲ್ಲಿ ರೈಲ್ವೇ ಇಲಾಖೆ ನೌಕರನ ಆಧಾರ್ ಕಾರ್ಡ್ ಪತ್ತೆ!
ಪುರುಷೋತ್ತಮ ಅವರು 25 ವರ್ಷಗಳಿಂದ ರಿಕ್ಷಾದಿಂದ ದುಡಿದು ಕುಟುಂಬವನ್ನು ಮುನ್ನಡೆಸುತ್ತಿದರು. ಇದೀಗ ರಿಕ್ಷಾವನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದು ಭಯೋತ್ಪಾದಕ ಕೃತ್ಯವಾದ ಕಾರಣ ಸದ್ಯ ಬಿಡುಗಡೆ ಭಾಗ್ಯವಿಲ್ಲ. ಅವರ ಮಗಳಿಗೆ ಮದುವೆ ಕೂಡ ಫಿಕ್ಸ್ ಆಗಿದೆ.