ಬೆಂಕಿ ಹತ್ತಿದ ಕಬ್ಬಿನ ಗದ್ದೆಯಲ್ಲೇ ಕುರಿಗಾಹಿ ಸಜೀವ ದಹನ: 5 ಲಕ್ಷ ರೂ. ಪರಿಹಾರ ಭರವಸೆ ನೀಡಿದ ಸಿಎಂ

By Sathish Kumar KHFirst Published Feb 12, 2023, 5:45 PM IST
Highlights

ಕಬ್ಬಿನ ಗದ್ದೆ ಬೆಂಕಿಗೆ ಸುಟ್ಟು ಹೋಗುತ್ತಿರುವುದನ್ನು ಸಹಿಸದೇ ಹೇಗಾದರೂ ಮಾಡಿ ಬೆಂಕಿಯನ್ನು ಆರಿಸಬೇಕು ಎಂದು ಮುಂದಾದ ಕುರಿಗಾಹಿ 20 ಎಕರೆ ಕಬ್ಬಿನ ಬೆಳೆಯೊಂದಿಗೆ ತಾನೂ ಸುಟ್ಟುಕೊಂಡು ಸಜೀವ ದಹನವಾಗಿದ್ದಾನೆ.

ಮಂಡ್ಯ (ಫೆ.12): ಕಬ್ಬಿನ ಗದ್ದೆಗೆ ಮಟ ಮಟ ಮಧ್ಯಾಹ್ನದ ವೇಳೆ ಬೆಂಕಿ ಹೊತ್ತಿಕೊಂಡಿದ್ದು ಇದನ್ನು ಹೇಗಾದರೂ ಮಾಡಿ ನಂದಿಸಬೇಕು ಎಂದು ಮುಂದಾದ ಕುರಿಗಾಹಿ 20 ಎಕರೆ ಕಬ್ಬಿನ ಬೆಳೆಯೊಂದಿಗೆ ತಾನೂ ಸಜೀವ ದಹನವಾಗಿದ್ದಾನೆ.

ಭೂಮಿ ತಾಯಿಯನ್ನು ನಂಬಿದವರಿಗೆ ಎಂದೂ ಮೋಸ ಆಗುವುದಿಲ್ಲ ಎನ್ನುವ ಮಾತಿದೆ. ಈ ನಂಬಿಕೆಯಿಂದಲೇ ಪ್ರತೊಯೊಬ್ಬರೈತರೂ ಹೊಲದಲ್ಲಿ ಉಳಿಮೆ, ಬಿತ್ತನೆ, ಪೋಷಣೆ, ಕಟಾವು ಹೀಗೆ ಹಲವು ಕಾರ್ಯಗಳನ್ನು ಮಾಡುತ್ತಾರೆ. ಆದರೆ, ಹುಲುಸಾಗಿ ಬೆಳೆಯೂ ಬೆಳೆದು ಇನ್ನು ಕಟಾವು ಮಾಡಬೇಕು ಎನ್ನುವ ಸಂದರ್ಭದಲ್ಲಿ ಕಿಡಿಗೇಡಿಗಳ ಹಾವಳಿಯಿಂದ ಇಡೀ ಬೆಳೆಯೇ ನಾಶವಾದರೆ ಹೇಗೆ ತಾನೇ ಸಹಿಸಿಕೊಳ್ಳಲಾಗುತ್ತದೆ. ಮಂಡ್ಯ ಜಿಲ್ಲೆಯ ರೈತರು ಬೆಳೆದ 20 ಎಕರೆ ಕಬ್ಬಿನ ಬೆಳೆ ಹಾಳಾಗುವುದನ್ನು ನೋಡಿ ಜೀವವನ್ನು ಒತ್ತೆಯಿಟ್ಟು ಬೆಳೆ ರಕ್ಷಣೆ ಮಾಡಲು ಮುಂದಾದ ಕುರಿಗಾಹಿ ಜೀವವನ್ನು ಕಳೆದುಕೊಂಡಿದ್ದಾನೆ.

Latest Videos

ಕೊಪ್ಪಳ: ಆಕಸ್ಮಿಕ ಬೆಂಕಿ; 20 ಲಕ್ಷ ರೂ. ಮೌಲ್ಯದ 4 ಎಕರೆ ತೋಟಗಾರಿಕೆ ಬೆಳೆ ನಾಶ

ಮಣ್ಣು, ನೀರು ಹಾಕಿ ಬೆಂಕಿ ಕೆಡಿಸಲು ಯತ್ನ: ಹೌದು, ಮಂಡ್ಯ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ರೈತನೊಬ್ಬ ಬೆಳೆದಿದ್ದ 20 ಎಕರೆ ಎಕರೆ ಕಬ್ಬು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಇನ್ನು ಬೆಳೆ ರಕ್ಷಣೆಂದು ಮುಂದಾದ ರೈತ ಬೆಂಕಿ ನಂದಿಸುತ್ತಿದ್ದ ರೈತ ಸಜೀವ ದಹನವಾಗಿದ್ದಾನೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಬ್ಬಿನ ಗದ್ದೆಯ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಅಕ್ಕಪಕ್ಕದ ಗದ್ದೆಗಳಿಗೂ ಬೆಂಕಿ ವ್ಯಾಪಿಸಿದೆ. ದಟ್ಟ ಹೊಗೆ ನೋಡಿ ಜಮೀನು ಬಳಿಗೆ ಗ್ರಾಮಸ್ಥರು ದೌಡಾಯಿಸಿದ್ದರು. ಈ ವೇಳೆ ತಕ್ಷಣ ಅಕ್ಕಪಕ್ಕದಲ್ಲಿ ಸಿಕ್ಕ ಮಣ್ಣು, ನೀರು ಹಾಕಿ ಬೆಂಕಿ ಕೆಡಿಸಲು ಯತ್ನ ಮಾಡಿದ್ದಾರೆ. ಅಷ್ಟೊತ್ತಿಗೆ 20 ಎಕರೆಗೂ ಹೆಚ್ಚು ಕಬ್ಬಿಗೆ ವ್ಯಾಪಿಸಿದ್ದ ಬೆಂಕಿ ಎಲ್ಲವನ್ನು ಸುಟ್ಟು ಬೂದಿಯನ್ನಾಗಿ ಮಾಡಿತ್ತು.

ಅರೆ-ಬರೆ ಬೆಂದು ಹೋಗಿದ್ದ ರೈತ ಮಹಾಲಿಂಗಯ್ಯ ದೇಹ: ಇನ್ನು ಹೊಲದಲ್ಲಿ ಬೆಳೆದ ಕಬ್ಬು ಸುಟ್ಟು ಹೋಗುವುದನ್ನು ನಂದಿಸಲು ಮುಂದಾಗಿದ್ದ ಮಹಾಲಿಂಗಯ್ಯ (60)  ಸಜೀವ ದಹನವಾಗಿದ್ದಾರೆ. ದೇಹವೆಲ್ಲಾ ಸಂಪೂರ್ಣ ಸುಟ್ಟು ಕರಕಲಾಗಿದೆ. ಅರೆ-ಬರೆ ಬೆಂದು ಹೋಗಿದ್ದ ಮಹಾಲಿಂಗಯ್ಯ ಮೃತದೇಹ ಕಬ್ಬಿನ ಹೊಲದಲ್ಲಿ ಬಿದ್ದಿತ್ತು. ಈ ದೃಶ್ಯಗಳನ್ನು ನೋಡಿದ ಗ್ರಾಮಸ್ಥರು ಕುರಿಗಾಹಿ ಸಾವಿಗಾಗಿ ಮಮ್ಮಲ ಮರುಗಿದ್ದಾರೆ. ಇನ್ನು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಕಬ್ಬು ಬೆಳೆಹೋದರೆ ಮತ್ತೊಂದು ಬೆಳೆ ಬೆಳೆಯಬಹುದು. ಆದರೆ ಈಗ ಜೀವವೇ ಹೋಗಿದೆ ಎಂದು ಕಣ್ಣೀರು ಹಾಕಿದ್ದಾರೆ.

Bengaluru: ಮೈದುನನ ತಿಂಗಳ ಕಾರ್ಯಕ್ಕೆ ಅಡುಗೆ ತಯಾರಿ: ಗ್ಯಾಸ್‌ ಬೆಂಕಿ ತಗುಲಿ ಸಾವನ್ನಪ್ಪಿದ ಅತ್ತಿಗೆ

ಹಲವು ರೈತರ ಕಬ್ಬಿನ ಬೆಳೆಯೂ ನಷ್ಟ: ಇನ್ನು ರೈತರು ಅಕ್ಕ-ಪಕ್ಕದ ಹೊಲಗಳಲ್ಲಿ ಕಬ್ಬಿನ ಬೆಳೆಯನ್ನು ಹಾಕಿದ್ದು, ಹೆಚ್ಚಿನ ಅಂತರವೇನೂ ಇರಲಿಲ್ಲ. ಹೀಗಾಗಿ, ಒಂದು ಕಬ್ಬಿನ ಗದ್ದೆಯಿಂದ ಮತ್ತೊಂದಕ್ಕೆ ಹರಡುತ್ತಾ ಒಟ್ಟು ಐವರು ರೈತರ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ. ಈ ಪೈಕಿ ಮಹೇಶ್ 8 ಎಕರೆ, ಜವರೇಗೌಡ 1.5 ಎಕರೆ, ಪಾಪಣ್ಣ 2 ಎಕರೆ, ಶಂಕರ್ ಎಂಬುವವರ 1 ಎಕರೆ ಕಬ್ಬು ಸುಟ್ಟು ಬೂದಿಯಾಗಿದೆ. ಜೊತೆಗೆ, ಮಹೇಶ್ ಎಂಬವರ ಒಂದೂವರೆ ಎಕರೆ ಬಾಳೆ ತೋಟವೂ ಬೆಂಕಿಗಾಹುತಿಯಾಗಿದೆ. ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸಿಎಂ 5 ಲಕ್ಷ ಪರಿಹಾರದ ಭರವಸೆ: ಕುರಿಗಾಹಿ ಬೆಂಕಿಗಾಹುತಿ ಪ್ರಕರಣ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಭೇಟಿ ನೀಡಿದ್ದಾರೆ. ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ನಂತರ, ಘಟನೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೆ ತರಲಾಗಿದೆ. ಮೃತ ಮಹಾಲಿಂಗಯ್ಯ ಕುಟುಂಬಕ್ಕೆ ಸಿಎಂ 5 ಲಕ್ಷ ಪರಿಹಾರದ ಭರವಸೆ ನೀಡಿದ್ದಾರೆ. ಬೆಂಕಿಗೆ ಹಾನಿಗೆ ಒಳಗಾದ ಬೆಳೆಗು ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ಮೇಲುಕೋಟೆ ಶಾಸಕ ಸಿ.ಎಸ್‌.ಪುಟ್ಟರಾಜು ಮಾಹಿತಿ ನೀಡಿದರು.

click me!