Bengaluru: ಲಾರಿಗಳಲ್ಲಿ ಡೀಸೆಲ್‌ ಕದಿಯುತ್ತಿದ್ದ ಕಿಡಿಗೇಡಿಗೆ ಪೊಲೀಸರ ಗುಂಡೇಟು!

By Kannadaprabha NewsFirst Published Mar 14, 2022, 7:49 AM IST
Highlights

ಟಾಟಾ ಸುಮೋದಲ್ಲಿ ಗ್ಯಾಂಗ್‌ ಸಮೇತ ಆಗಮಿಸುತ್ತಿದ್ದ ಆರೋಪಿಗಳ ತಂಡವು ಲಾರಿಗಳಲ್ಲಿ ಡೀಸೆಲ್‌ ಕದ್ದು ಪರಾರಿಯಾಗುತ್ತಿದ್ದರು. 

ಆನೇಕಲ್‌ (ಮಾ. 14):  ರಸ್ತೆ ಬದಿ ನಿಲ್ಲಿಸಿದ್ದ ಲಾರಿಗಳಲ್ಲಿ ತಡರಾತ್ರಿ ಡೀಸೆಲ್‌ ಕಳವು ಮಾಡುತ್ತಿದ್ದ ಖತರ್ನಾಕ್‌ ತಂಡವನ್ನು ಪತ್ತೆ ಹಚ್ಚಿದ ಪೊಲೀಸರ ತಂಡವು, ಸಿನಿಮೀಯ ರೀತಿಯಲ್ಲಿ ತಂಡವನ್ನು ಬೆನ್ನತ್ತಿ ಗುಂಡು ಹಾರಿಸಿ ಆರೋಪಿಗಳ ಬಂಧಿಸಿದ ಘಟನೆ ಆನೇಕಲ್‌ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.ಶ್ರೀನಿವಾಸ್‌ ಅಲಿಯಾಸ್‌ ರಾಜು ಗುಂಡೇಟು ತಿಂದ ಆರೋಪಿ. ಮಲ್ಲನಗೌಡ ಮತ್ತೊಬ್ಬ ಬಂಧಿತ ಆರೋಪಿ. ಘಟನೆ ವೇಳೆ ಕಾನ್ಸ್‌ಸ್ಟೇಬಲ್‌ವೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುವ ಲಾರಿ ಚಾಲಕರು ಜಿಗಣಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿದ್ದೆಗೆ ಜಾರುತ್ತಿದ್ದರು. ಈ ವೇಳೆ ಗಾಢನಿದ್ರೆಗೆ ಜಾರಿರುವ ಲಾರಿ ಚಾಲಕರೇ ಆರೋಪಿಗಳ ಟಾರ್ಗೆಟ್‌ ಆಗಿದ್ದರು. ಟಾಟಾ ಸುಮೋದಲ್ಲಿ ಗ್ಯಾಂಗ್‌ ಸಮೇತ ಆಗಮಿಸುತ್ತಿದ್ದ ಆರೋಪಿಗಳ ತಂಡವು ಲಾರಿಗಳಲ್ಲಿ ಡೀಸೆಲ್‌ ಕದ್ದು ಪರಾರಿಯಾಗುತ್ತಿದ್ದರು. 

ಇದೇ ರೀತಿ ಆರೋಪಿಗಳು ಶನಿವಾರ ರಾತ್ರಿ ಕಳವು ಮಾಡುವಾಗ ಗಸ್ತಿನಲ್ಲಿದ್ದ ಇನ್ಸ್‌ಪೆಕ್ಟರ್‌ ಸುದರ್ಶನ್‌ ಮತ್ತು ಅವರ ತಂಡದ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಟಾಟಾ ಸುಮೋ ಏರಿದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಬೆನ್ನಟ್ಟಿದ್ದ ಪೊಲೀಸರ ತಂಡವು, ಆರೋಪಿಗಳ ಕಾರಿನ ಚಕ್ರಕ್ಕೆ ಗುಂಡಿಕ್ಕಿದ್ದು, ಪಂಚರ್‌ ಆಗಿದೆ. 

ಇದನ್ನೂ ಓದಿ: ಚಲಿಸುತ್ತಿದ್ದ ಕಾರಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ: ವ್ಯಕ್ತಿ ಸಜೀವ ದಹನ!

ಕೊನೆಗೆ ಶರಣಾಗುವಂತೆ ಸೂಚಿಸಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಇನ್ಸ್‌ಪೆಕ್ಟರ್‌ ಸುದರ್ಶನ್‌ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿ ಶ್ರೀನಿವಾಸ್‌ ಕಾಲಿಗೆ ಗುಂಡಿಕ್ಕಿದ್ದಾರೆ. ಲಾರಿ ಚಾಲಕ ಮಲ್ಲನಗೌಡ ಸಹ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಉಳಿದವರು ಪರಾರಿ ಆಗಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆ ಯತ್ನ: ರೌಡಿ ಮುನಿರಾಜಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ:  ಕೊಲೆಗೆ ಯತ್ನ ಪ್ರಕರಣದ ಅಪರಾಧಿಗೆ 60ನೇ ಸಿಸಿಎಚ್‌ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ ಆದೇಶಿಸಿದೆ.ಕುಖ್ಯಾತ ರೌಡಿ ಕುಳ್ಳ ರಿಜ್ವಾನ್‌ ಸಹಚರನಾಗಿರುವ ಬನಶಂಕರಿ ಪೊಲೀಸ್‌ ಠಾಣೆ ರೌಡಿ ಶೀಟರ್‌ ಮುನಿರಾಜ ಅಲಿಯಾಸ್‌ ಹೂವಾ ಜೈಲು ಶಿಕ್ಷೆಗೆ ಗುರಿಯಾದವನು. ಆರೋಪಿಯು ದಂಡ ಮೊತ್ತ ಪಾವತಿಸಲು ವಿಫಲನಾದರೆ, ಆರು ತಿಂಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಏನಿದು ಪ್ರಕರಣ?:  ಹಳೇ ದ್ವೇಷದ ಹಿನ್ನೆಲೆಯಲ್ಲಿ ಯಡಿಯೂರು ನಿವಾಸಿ ವೆಂಕಟೇಶ್‌ ಅಲಿಯಾಸ್‌ ಅಪ್ಪಿ ಎಂಬಾತನ ಮೇಲೆ 2015ರ ಏ.7ರಂದು ಆರೋಪಿ ಮುನಿರಾಜ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಕೊಂಡಿದ್ದ ಬನಶಂಕರಿ ಠಾಣೆ ಪೊಲೀಸರು, 2015ರ ಏ.9ರಂದು ಆರೋಪಿಗಳಾದ ಮುನಿರಾಜ, ಪ್ರಶಾಂತ ಅಲಿಯಾಸ್‌ ಮುಳ್ಳ, ನವೀನ ಕುಮಾರ್‌ ಅಲಿಯಾಸ್‌ ಮಾಮನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.  ಬಳಿಕ ಈ ಪ್ರಕರಣದ ತನಿಖೆ ನಡೆಸಿದ್ದ ಬನಶಂಕರಿ ಠಾಣೆ ಪಿಎಸ್‌ಐ ಬಿ.ಪಿ.ಮಂಜು ಘಟನೆ ಸಂಬಂಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿಸಲ್ಲಿಸಿದ್ದರು.

ಇದನ್ನೂ ಓದಿಕಾರು ಚಾಲಕನ ಕೈ-ಕಾಲು ಕಟ್ಟಿ ನೇಣಿಗೆ, ಮಾಜಿ DCM ಸವದಿ ಸಹೋದರನ ಡ್ರೈವರ್ ಭೀಕರ ಹತ್ಯೆ

ಈ ಪ್ರಕರಣದ ವಿಚಾರಣೆ ನಡೆಸಿದ 60ನೇ ಸಿಸಿಎಚ್‌ ನ್ಯಾಯಾಲಯವು 2022ರ ಮಾ.11ರಂದು ಪ್ರಕರಣದ ಆರೋಪಿ ಮುನಿರಾಜನನ್ನು ದೋಷಿ ಎಂದು ಪರಿಗಣಿಸಿ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಉಳಿದ ಆರೋಪಿಗಳಾದ ಪ್ರಶಾಂತ ಮತ್ತು ನವೀನ ಅವರ ವಿರುದ್ಧ ಬಲವಾದ ಸಾಕ್ಷ್ಯಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಇಬ್ಬರನ್ನೂ ಪ್ರಕರಣದಿಂದ ಖುಲಾಸೆಗೊಳಿಸಿದೆ.

ಕೊರಿಯರಲ್ಲಿ ನ್ಯೂಜಿಲೆಂಡ್‌ಗೆ ಡ್ರಗ್ಸ್‌ ಸಾಗಾಟಕ್ಕೆ ಯತ್ನ: ಆಫ್ರಿಕನ್‌ ಸೇರಿ ಇಬ್ಬರ ಸೆರೆ: ಕೊರಿಯರ್‌ ಮೂಲಕ ನ್ಯೂಜಿಲೆಂಡ್‌ಗೆ ಅಕ್ರಮವಾಗಿ ಸಿಂಥೆಟಿಕ್‌ ಡ್ರಗ್ಸ್‌ ಸಾಗಿಸಲು ಯತ್ನಿಸಿದ್ದ ಇಬ್ಬರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಆಫ್ರಿಕಾ ಪ್ರಜೆ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 1.40 ಕೋಟಿ ರು. ಮೌಲ್ಯದ 1 ಕೆ.ಜಿ. 970 ಗ್ರಾಂ ಸ್ಯೂಡೋಫೆಡ್ರಿನ್‌ ಸಿಂಥೆಟಿಕ್‌ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. 

ಆರೋಪಿಗಳು ಕೊರಿಯರ್‌ ಮೂಲಕ ವಿದೇಶಕ್ಕೆ ಡ್ರಗ್ಸ್‌ ಸಾಗಿಸಲು ಬರುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ನಗರದ ಕೊರಿಯರ್‌ ಕಚೇರಿಯೊಂದರ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಮೆಟಾಲಿಕ್‌ ವೈರ್‌ಗಳನ್ನು ಸುತ್ತಿಡುವ 50 ಮೆಟಲ್ ರೋಲ್‌ನ ಹಿಂದೆ ಸಿಂಥೆಟಿಕ್‌ ಡ್ರಗ್ಸ್‌ ಬಚ್ಚಿಟ್ಟು ಕೊರಿಯರ್‌ ಮೂಲಕ ನ್ಯೂಜಿಲೆಂಡ್‌ಗೆ ಸಾಗಿಸಲು ಬಂದಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಎನ್‌ಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

click me!