
ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ, ಮಹಾರಾಷ್ಟ್ರ ರಾಜಧಾನಿ ಹಾಗೂ ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಗಣೇಶ ಮೂರ್ತಿಯನ್ನು ಸಾಗಿಸುತ್ತಿದ್ದ ಟ್ರಾಲಿಯ ಮೇಲೆ ಮೊಟ್ಟೆ ಎಸೆದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಕಾಮಾಟಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ’ ಹಾಗೂ ‘ಎರಡು ಸಮುದಾಯಗಳ ನಡುವೆ ಕಲಹ ಉಂಟು ಮಾಡಿದ’ ಕಾರಣಕ್ಕಾಗಿ ಸ್ಥಳೀಯ ನಿವಾಸಿ ಸಂತೋಷ್ ಅಮೃತೆ ಎಂಬವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದಾಗ 45 ವರ್ಷದ ಅಮೃತೆ ಮೆರವಣಿಗೆಯ ಭಾಗವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮುಂಬೈನ ಕಾಮಾಟಿಪುರ ಪ್ರದೇಶದಲ್ಲಿ ಗಣೇಶ ಮೂರ್ತಿಯನ್ನು ಸಾಗಿಸುತ್ತಿದ್ದ ಟ್ರಾಲಿಯ ಮೇಲೆ ಮೊಟ್ಟೆ ಎಸೆದ ಆರೋಪದ ಮೇಲೆ 25 ವರ್ಷದ ಯುವಕನನ್ನು ನಾಗ್ಪಾಡಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅಮೃತೆ ಹೇಳಿಕೆಯಂತೆ ಆರೋಪಿಗಳು ಗಣಪತಿ ಮೂರ್ತಿಯನ್ನು ಸಾಗಿಸುತ್ತಿದ್ದ ವಾಹನದತ್ತ ಗುರಿಯಿಟ್ಟು ಮೊಟ್ಟೆ ಎಸೆದಿದ್ದಾರೆ. ಆರೋಪಿ ಯುವಕ ಹಾಗೆ ಮಾಡಿದ ತಕ್ಷಣ, ಆ ಪ್ರದೇಶದಲ್ಲಿ ದೊಡ್ಡ ಗುಂಪು ಸೇರಲು ಪ್ರಾರಂಭಿಸಿತು ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ 10 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎಂದೂ ಹೇಳಲಾಗಿದೆ. ಹಾಗೂ, ಗಣೇಶ ಮೂರ್ತಿಯನ್ನು ಕೆಲವು ಕಿಲೋಮೀಟರ್ ದೂರದಲ್ಲಿರುವ ಚಿಂಚಪೋಕ್ಲಿಯಿಂದ ಉತ್ಸವ-ಆಯೋಜಕ ಮಂಡಳಿ (ಗುಂಪು) ತರುತ್ತಿತ್ತು ಎಂದೂ ಅವರು ಹೇಳಿದ್ದಾರೆ.
ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ: ಈಗ ನಾಗರಿಕರ ಒಕ್ಕೂಟ Vs ಗಣೇಶೋತ್ಸವ ಸಮಿತಿ ಫೈಟ್
ಆದರೆ, ಏನಾದರೂ ಗಂಭೀರವಾದ ಘಟನೆ ಸಂಭವಿಸುವ ಮೊದಲು, ಬಂದೋಬಸ್ತ್ ಕರ್ತವ್ಯದಲ್ಲಿ ಮತ್ತು ಗಸ್ತು ತಿರುಗುವುದರಲ್ಲಿ ನಿರತರಾಗಿದ್ದ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿದರು ಹಾಗೂ, ಪರಿಸ್ಥಿತಿಯನ್ನು ತಹಬದಿಗೆ ತಂದರು. ಹಾಗೂ, ಈಗಾಗಲೇ ಆರೋಪಿ ಅಬ್ದುಲ್ ಖರೀಮ್ ಅಲಿಯಾಸ್ ಶಹಬಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಾಗ್ಪಾಡಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿ ಯಾವುದೇ ಕೋಮು ಸಂಘರ್ಷ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ಎಫ್‌ಐಆರ್ ದಾಖಲಿಸಿ ವ್ಯಕ್ತಿಯನ್ನು ಬಂಧಿಸಿದ್ದರಿಂದ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಈ ಘಟನೆಯ ನಂತರ, ಮುಂಬೈ ಪೊಲೀಸರು ಸಂತೋಷ್ ಅಮೃತೆ ಅವರಿಂದ ದೂರನ್ನು ಸ್ವೀಕರಿಸಿದರು, ನಂತರ ಅಬ್ದುಲ್ ಖರೀಮ್ ಅಲಿಯಾಸ್ ಶಹಬಾಜ್ ಅನ್ನು ಸೆಕ್ಷನ್ 295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ, ಅದರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶ) ಮತ್ತು 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ಬಂಧಿಸಲಾಯಿತು) ಭಾರತೀಯ ದಂಡ ಸಂಹಿತೆಯ ಧರ್ಮದ ಆಧಾರಗಳು ಮತ್ತು ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪಡಿಸುವ ಕೃತ್ಯಗಳನ್ನು ನಡೆಸಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯ, ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದು, ಅಲ್ಲದೆ, ಆತನ ನಿಖರವಾದ ಉದ್ದೇಶ ಮತ್ತು ಇತರ ಮಾಹಿತಿಯನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಾರಿ ಆಗಸ್ಟ್ 31, 2022 ರಂದು ದೇಶದೆಲ್ಲೆಡೆ ಹಾಗೂ ವಿಶ್ವದ ಹಲವು ದೇಶಗಳಲ್ಲಿ ಸಹ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ.
ವಾರ್ಡ್‌ಗೊಂದೇ ಗಣೇಶ ನಿರ್ಬಂಧ ಬೆಂಗ್ಳೂರಲ್ಲಿ ರದ್ದು: ಅದ್ಧೂರಿ ಗಣೇಶೋತ್ಸವಕ್ಕೆ ಅಸ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ