ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಮಾದರಿಯಲ್ಲೇ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಅಪ್ಪ ಮಗ ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ.
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಮಾದರಿಯಲ್ಲೇ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಅಪ್ಪ ಮಗ ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ. ಸಿದ್ದಪ್ಪ ಮದಿಹಳ್ಳಿ, ಸುನಿಲ್ ಭಂಗಿ, ಅಮರೇಶ ರಾಜೂರ್, ಸಿದ್ದಪ್ಪ ಕೊತ್ತಲ, ರೇಣುಕಾ ಜವಾರಿ, ಪ್ರಶಾಂತ ಮಾನಗಾಂವಿ, ಮಾರುತಿ ಸೋನವಣೆ, ಸಮೀತಕುಮಾರ್ ಸೋನವಣೆ, ಬಸವಣ್ಣ ದೊಣವಾಡ ಬಂಧಿತ ಆರೋಪಿಗಳು. ಸ್ಮಾರ್ಟ್‌ವಾಚ್ ಹಾಗೂ ಬ್ಲೂ ಟೂತ್ ಡಿವೈಸ್ ಬಳಸಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್, ಹುಕ್ಕೇರಿ, ಅಥಣಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದೆ. ಗದಗ ಮುನ್ಸಿಪಲ್ ಪಿಯು ಕಾಲೇಜಿನ ಉಪಪ್ರಾಚಾರ್ಯ ಮಾರುತಿ ಸೋನವಣಿ, ಆತನ ಪುತ್ರ ಸುಮಿತ್‌ಕುಮಾರ್ ಸೋನವಣಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಅಪ್ಪ ಮಗ. ಉಪಪ್ರಾಚಾರ್ಯ ಹಾಗೂ ಪರೀಕ್ಷಾ ಮೇಲ್ವಿಚಾರಕರೂ ಆಗಿದ್ದ ಮಾರುತಿ ಸೋನವಣಿ ಅವರ ಪುತ್ರ ಸುಮಿತ್‌ಕುಮಾರ್, ಪತ್ರಕರ್ತನ ಸೋಗಿನಲ್ಲಿ ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದ. ನಂತರ ಅಲ್ಲಿ ಪ್ರಶ್ನೆ ಪತ್ರಿಕೆ ಫೋಟೋ ತಗೆದು ಮಾಲದಿನ್ನಿ ಗ್ರಾಮದ ಸುನಿಲ್ ಭಂಗಿಗೆ ರವಾನಿಸಿದ್ದ. ಇದು ಬಳಿಕ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ.ಕೆ.ಗ್ರಾಮದ ಬಸವಣ್ಣಿ ದೊನವಾಡ ಎಂಬಾತನಿಗೆ ರವಾನೆಯಾಗಿತ್ತು. ನಂತರ ಆರೋಪಿಗಳು ಶಿರಹಟ್ಟಿಯ ತೋಟದ ಮನೆಯಲ್ಲಿ ಕುಳಿತು ಫೋನ್ ಮೂಲಕ ಪರೀಕ್ಷಾರ್ಥಿಗಳಿಗೆ ಉತ್ತರ ಹೇಳುತ್ತಿದ್ದರು.
PSI Recruitment Scam: ನಡೆಯದ ಪಿಎಸ್‌ಐ ನೇಮಕ ಪರೀಕ್ಷೆಯಲ್ಲೂ ಅಕ್ರಮ!
ಸುಮೀತ್‌ಕುಮಾರ್ 4.5 ಲಕ್ಷ ರೂಪಾಯಿಗೆ ಪ್ರಶ್ನೆ ಪತ್ರಿಕೆ ಮಾರಾಟಕ್ಕೆ ಡೀಲ್ ಕುದರಿಸಿದ್ದ, ಈ ಪ್ರಶ್ನೆ ಪತ್ರಿಕೆ ಪಡೆದು 6 ಲಕ್ಷ ರೂ. ಕೊಟ್ಟರೆ ಉತ್ತರ ನೀಡುವ ಬಗ್ಗೆ ಇತರ ಆರೋಪಿಗಳಿಂದ ಡೀಲ್ ನಡೆದಿತ್ತು.
ಮುಂಗಡವಾಗಿ 3 ಲಕ್ಷ ಹಾಗೂ ಕೀ ಆ್ಯನ್ಸರ್ ನೀಡಿದ ಬಳಿಕ 3 ಲಕ್ಷ ನೀಡುವ ಬಗ್ಗೆ ಮಾತುಕತೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 7ರಂದು ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ಪರೀಕ್ಷೆ ನಡೆದಿತ್ತು. ಗೋಕಾಕ್‌ನ ಜಿಎಸ್‌ಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ. ಸ್ಮಾರ್ಟ್ ವಾಚ್‌ನಲ್ಲಿ ಪ್ರಶ್ನೆ ಪತ್ರಿಕೆ ಫೋಟೋ ತೆಗೆದು, ಟೆಲಿಗ್ರಾಂ ಆ್ಯಪ್ ಮೂಲಕ ಕಿಂಗ್‌ಪಿನ್ ಸಂಜು ಭಂಡಾರಿಗೆ ಆರೋಪಿಗಳು ಪ್ರಶ್ನೆಪತ್ರಿಕೆ ರವಾನೆ ಮಾಡಿದ್ದರು. ಈ ಪ್ರಕರಣದಲ್ಲಿ ಸುನೀಲ್ ಭಂಗಿ ಎನ್ನುವ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
PSI Recruitment Scam: ಪಿಎಸ್‌ಐ ಹಗರಣ ಲೋಕಾಯುಕ್ತಕ್ಕೆ?, ಭ್ರಷ್ಟರಿಗೆ ನಡುಕ
ಹುಕ್ಕೇರಿ ತಾಲೂಕಿನ ಬಿ ಕೆ ಶಿರಹಟ್ಟಿ ಗ್ರಾಮದ ತೋಟದ ಮನೆಯಲ್ಲಿ ಕುಳಿತು ಬ್ಲೂ ಟೂತ್‌ನಲ್ಲಿ ಹಲವು ಪರೀಕ್ಷಾರ್ಥಿಗಳಿಗೆ ಆರೋಪಿಗಳು ಉತ್ತರ ಹೇಳಿದ್ದರು. ಆರೋಪಿಗೆ ಗದಗ ನಗರಸಭೆ ಪಿ ಯು ಕಾಲೇಜಿನ ಕೇಂದ್ರದ ಪ್ರಶ್ನೆ ಪತ್ರಿಕೆ ಲಭ್ಯವಾಗಿತ್ತು. ಇಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ತಂದೆ, ಮಗನ ಕೂಡ ಬಂಧಿತರಲ್ಲಿ ಸೇರಿದ್ದಾರೆ. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಆರೋಪಿಗಳು ಉತ್ತರ ಒದಗಿಸಿದ್ದರು.
ಪೊಲೀಸ್ ಪೇದೆಯೋರ್ವರ ಪುತ್ರ ಆಗಿರುವ ಸಂಜು ಭಂಡಾರಿ, ಪರೀಕ್ಷಾರ್ಥಿಗೆ ಅತ್ಯಾಧುನಿಕ ಬ್ಲ್ಯೂಟೂತ್ ರವಾನಿಸಿದ್ದ. ಈ ಹಿಂದೆ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆಯಲ್ಲಿಯೂ ಅಕ್ರಮವೆಸಗಿ ಬಂಧಿತನಾಗಿದ್ದ, ಜಾಮೀನಿನ ಮೇಲೆ ಹೊರಬಂದು ಹಳೆ ಚಾಳಿ ಮುಂದುವರಿಸಿದ್ದ. ಅಲ್ಲದೇ ಈತ ಪರೀಕ್ಷೆ ವೇಳೆ ಅಳವಡಿಸಿದ್ದ ನೆಟ್ವರ್ಕ್ ಜಾಮರ್ ನಿಷ್ಕ್ರಿಯಗೊಳಿಸಿದ ಬಗ್ಗೆಯೂ ಮಾಹಿತಿ ಇದ್ದು, ಈ ಬಗ್ಗೆಯೂ ಕುಲಂಕೂಷವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಿಂಗ್‌ಪಿನ್ ಸಂಜು ಭಂಡಾರಿ ಸೇರಿ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬೆಳಗಾವಿ, ಗದಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾಲ ಸಕ್ರಿಯವಾಗಿದ್ದು, ಅಕ್ರಮವೆಸಗಿ ಒಟ್ಟು 13 ಜನ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವ ಮಾಹಿತಿ ಇದೆ. ಪರೀಕ್ಷಾ ಅಕ್ರಮದಲ್ಲಿ ಒಟ್ಟು 2 ತಂಡ ಸಕ್ರಿಯವಾಗಿರುವ ಬಗ್ಗೆ ತಿಳಿದು ಬಂದಿದೆ ಎಂದು ಬೆಳಗಾವಿಯಲ್ಲಿ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.