
ಮುಂಬೈ: ಉದ್ದೇಶಪೂರ್ವಕವಾಗಿ ಕೊಲೆ ಮಾಡದೇ, ಆಕಸ್ಮಿಕವಾಗಿ ಕೊಲೆ ಮಾಡಿದಾಗ, ಆತನಿಗೆ ಪಾಪಪ್ರಜ್ಞೆ ಕಾಡುವುದು ಇದೆ. ಕುಡಿದ ಅಮಲಿನಲ್ಲಿ ಅಥವಾ ಚಿಕ್ಕಪುಟ್ಟ ವಿಷ್ಯಕ್ಕೆ ಗಲಾಟೆ ಆದ ಸಂದರ್ಭದಲ್ಲಿ ಕೊಲೆ ನಡೆದರೆ, ಕೊಲೆ ಮಾಡಿದವನ ಮನಸ್ಸಿನ ಮೇಲೆ ಅದು ತುಂಬಾ ಗಂಭೀರ ಪ್ರಭಾವ ಬೀರುವುದು ಇದೆ. ಇದೇ ಕಾರಣಕ್ಕೆ ಆತ ಮಾನಸಿಕವಾಗಿ ಕುಗ್ಗುತ್ತಾನೆ. ಕೊಲೆಯಾದವ ಅಲ್ಲಿಯೆ ಎಲ್ಲೋ ಬಂದ ಹಾಗೆಯೂ ಕಾಣಿಸುತ್ತದೆ. ಅಂಥದ್ದೇ ಒಂದು ಘಟನೆ ನಡೆದಿದ್ದು, ಕೊಲೆಯಾಗಿರುವ ಸ್ನೇಹಿತರನ ಕಾಟ ತಾಳದೇ ಯುವಕನೊಬ್ಬ ಪೊಲೀಸ್ ಠಾಣೆಗೆ ಬಂದು ತಾನೇ ಕೊಲೆ ಮಾಡಿದ್ದು ಎಂದು ಶರಣಾಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿಯಲ್ಲಿ ನಡೆದಿದೆ.
ಮೃತಪಟ್ಟ ಸ್ನೇಹಿತ ಪದೇಪದೇ ತನ್ನ ಕನಸಿನಲ್ಲಿ ಬಂದು ಹೆದರಿಸುತ್ತಿದ್ದ. ಇದರಿಂದ ತಾನು ತುಂಬಾ ಭಯಭೀತನಾಗಿದ್ದೆ ಎಂದು ಹೇಳಿಕೊಂಡಿರುವ ಯುವಕನೊಬ್ಬ, ಕುಡಿದ ಅಮಲಿನಲ್ಲಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಹೌಸ್‌ಕೀಪಿಂಗ್ ಕೆಲಸಗಾರನಾದ 24 ವರ್ಷದ ಪ್ರಭು ಕಾರ್ಕಡೆ ಎಂಬಾತ, ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದು, ಕೆಲವು ದಿನಗಳ ಹಿಂದೆ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಕೊಲೆಗಾರನ ಸುಳಿವು ಸಿಗದೇ ಆತನಿಗಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರ ಬಳಿ ಆರೋಪಿ ತಾನಾಗಿಯೇ ಶರಣಾಗಿದ್ದು, ಪೊಲೀಸರು ನಿರಾಳರಾಗಿದ್ದಾರೆ.
ಎರಡು ವಾರಗಳ ಹಿಂದೆ ಡೊಂಬಿವ್ಲಿ ಸಮೀಪದ ಮೋಥಾ ಗ್ರಾಮದಲ್ಲಿ ಪಲ್ಲವ್ ಅಲಿಯಾಸ್ ವಿಶಾಲ್ ಮಧುಕರ್ ಕದಮ್ (43) ಎಂಬುವವರ ಮೃತದೇಹ ಪತ್ತೆಯಾಗಿತ್ತು ಎಂದು ಅಧಿಕಾರಿ ಮಾಹಿತಿ ನೀಡಿದರು. ಪೊಲೀಸರು ವಶಕ್ಕೆ ಪಡೆದ ನಂತರ, ಕದಮ್ ಜೊತೆ ಮದ್ಯಪಾನ ಮಾಡುತ್ತಿದ್ದಾಗ ಅವರ ಮನೆಯಲ್ಲೇ ಆತನನ್ನು ಹೊಡೆದು ಕೊಂದಿರುವುದಾಗಿ ಪ್ರಭು ಒಪ್ಪಿಕೊಂಡಿದ್ದಾನೆ. ಆತ ಮೃತದೇಹವನ್ನು ಚೀಲವೊಂದರಲ್ಲಿ ತುಂಬಿ, ಕೋಪರ್ ಲಿಂಕ್ ರಸ್ತೆ ಬಳಿಯ ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಪರಾರಿಯಾಗಿದ್ದನು. ಆದರೆ, ನಂತರದ ದಿನಗಳಲ್ಲಿ ಮೃತ ವ್ಯಕ್ತಿಯು ಪದೇಪದೇ ತನ್ನ ಕನಸಿನಲ್ಲಿ ಬಂದು ಭಯ ಹುಟ್ಟಿಸುತ್ತಿದ್ದನು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೆ, ತಾನು ಮೃತದೇಹವನ್ನು ಎಸೆದ ಸ್ಥಳವನ್ನೂ ಆತ ತೋರಿಸಿದ್ದಾನೆ.
ಕೊಲೆ ಮಾಡಿ ತಾನು ಸುಲಭವಾಗಿ ಪಾರಾಗಿದ್ದೇನೆ ಎಂದು ಪ್ರಭು ಭಾವಿಸಿದ್ದ. ಆದರೆ ಘಟನೆ ನಡೆದ ಮರುದಿನದಿಂದಲೇ ಆತನಿಗೆ ಅಸಲಿ ನರಕ ಶುರುವಾಗಿತ್ತು. ಸತತ 15 ದಿನಗಳ ಕಾಲ ಮೃತಪಟ್ಟ ಸ್ನೇಹಿತ ವಿಶಾಲ್ ಕನಸಿನಲ್ಲಿ ಬಂದು ಆತನನ್ನು ಭಯಬೀಳಿಸಲು ಪ್ರಾರಂಭಿಸಿದ್ದನು. ಇದರಿಂದಾಗಿ ಪ್ರಭುಗೆ ಅರ್ಧ ಗಂಟೆಯೂ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕನಸಿನ ಕಾಟ ಮತ್ತು ಪಶ್ಚಾತ್ತಾಪದಿಂದ ತೀವ್ರವಾಗಿ ನೊಂದ ಪ್ರಭು, ಭಯ ತಾಳಲಾರದೆ ಕೊನೆಗೆ ಪೊಲೀಸರ ಬಳಿ ತೆರಳಿ ತನ್ನ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ರ ಅಡಿಯಲ್ಲಿ ವಿಷ್ಣು ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ