*ಅಣ್ಣ ಬೈದನೆಂದು ಪಿಸ್ತೂಲ್‌ನಿಂದ ಗುಂಡಿಕ್ಕಿಕೊಳ್ಳಲು ಯತ್ನ
*ರಕ್ಷಣೆಗೆ ಧಾವಿಸಿದ ಗೆಳೆಯನಿಗೆ ಗಾಯ: ಆಸ್ಪತ್ರೆಗೆ ದಾಖಲು
*ಎಳೆದಾಟದ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು!
ಬೆಂಗಳೂರು(ಡಿ. 21): ರಾತ್ರಿ ಮನೆಗೆ ತಡವಾಗಿ ಬಂದ ಕಾರಣ ಅಣ್ಣ ಬೈದಿದ್ದಕ್ಕೆ ಬೇಸರಗೊಂಡ ತಮ್ಮ, ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಳ್ಳಲು ಹೋದಾಗ ಆತನ ರಕ್ಷಣೆಗೆ ಧಾವಿಸಿದ ಗೆಳೆಯ ಆಕಸ್ಮಿಕವಾಗಿ ಗಾಯಗೊಂಡ ಘಟನೆ ನಗರದ ಸದ್ದುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುರಪ್ಪನಪಾಳ್ಯದ ಫೈರೋಜ್ ಗಾಯಗೊಂಡವರು. ಫೈರೋಜ್ ತನ್ನ ಗೆಳೆಯನಾದ ಸಲ್ಮಾನ್ ಗುಂಡು ಹಾರಿಸಿಕೊಳ್ಳದಂತೆ ತಡೆಯಲು ಯತ್ನಿಸಿದಾಗ ಆಕಸ್ಮಿಕವಾಗಿ ಗಾಯಗೊಂಡಿದ್ದಾನೆ.
ರಿಯಲ್ ಎಸ್ಟೇಟ್ ಉದ್ಯಮಿ ಸನಾವುಲ್ಲಾ ಖಾನ್ ಅವರು, ತಮ್ಮ ಕುಟುಂಬದ ಜತೆ ಗುರುಪ್ಪನಪಾಳ್ಯದಲ್ಲಿ ನೆಲೆಸಿದ್ದಾರೆ. ಅವರ ಸೋದರ ಸಲ್ಮಾನ್ ಮನೆಯಲ್ಲಿ ಹೇಳದೆ ಸ್ನೇಹಿತರ ಜತೆ ಸುತ್ತಾಟಕ್ಕೆ ಹೋಗಿ ನಿತ್ಯ ಮನೆಗೆ ರಾತ್ರಿ ತಡವಾಗಿ ಬರುತ್ತಿದ್ದ. ಈ ವರ್ತನೆಗೆ ಆಕ್ಷೇಪಿಸಿದ್ದ ಸನಾವುಲ್ಲಾ, ಇದೇ ವಿಚಾರವಾಗಿ ಹಲವು ಬಾರಿ ಸೋದರನಿಗೆ ಬುದ್ಧಿ ಮಾತು ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ. ಎಂದಿನಂತೆ ಭಾನುವಾರ ರಾತ್ರಿ ಹೊರ ಹೋಗಿದ್ದ ಸಲ್ಮಾನ್ ರಾತ್ರಿ 9.30ರ ಸುಮಾರಿಗೆ ಸ್ನೇಹಿತ ಫೈರೋಜ್ ಜತೆ ಮನೆಗೆ ಬಂದಿದ್ದಾನೆ. ಆಗ ಸೋದರನಿಗೆ ಸನಾವುಲ್ಲ ಬೈದಿದ್ದಾರೆ.
ಎಳೆದಾಟದ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು!
ಇದರಿಂದ ಕೆರಳಿದ ಸಲ್ಮಾನ್, ‘ನನಗೆ ಯಾವಾಗಲೂ ನೀನು ಬೈಯುತ್ತಿಯಾ. ನಾನು ಬದುಕುವುದೇ ಇಲ್ಲ’ ಎಂದು ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಗ ಜತೆಗಿದ್ದ ಗೆಳೆಯ ಫೈರೋಜ್ ಆತನನ್ನು ರಕ್ಷಿಸಲು ಪಿಸ್ತೂಲ್ ಕಸಿದುಕೊಳ್ಳಲು ಮುಂದಾಗಿದ್ದು, ಆಗ ನಡೆದ ಎಳೆದಾಟದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಫೈರೋಜ್ ಬಲೈಗೆ ಬಿದ್ದಿದೆ. ಕೂಡಲೇ ಗಾಯಾಳುವನ್ನು ಸನಾವುಲ್ಲಾ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಗಾಯಾಳು ಸುರಕ್ಷಿತವಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Bengaluru Crime News : ಠಾಣೆಯಿಂದ ಎಸ್ಕೇಪ್ ಆಗಿ ಆರೋಪಿ ಆತ್ಮಹತ್ಯೆ
ರಿಯಲ್ ಎಸ್ಟೇಟ್ ಉದ್ಯಮ ಹೊಂದಿರುವ ಕಾರಣಕ್ಕೆ ಸನಾವುಲ್ಲಾ ಅವರು, ಪರವಾನಿಗೆ ಪಡೆದು ಪಿಸ್ತೂಲ್ ಬಳಸುತ್ತಿದ್ದರು. ಈ ಸಂಬಂಧ ಸದ್ದುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಆಟೋ ಚಾಲಕನ ಅಪಹರಿಸಿ ಕೊಂದವನ ಮೇಲೆ ಗುಂಡಿನ ದಾಳಿ
ನಾಲ್ಕು ತಿಂಗಳ ಹಿಂದೆ ಹಣಕ್ಕಾಗಿ ಆಟೋ ಚಾಲಕ(Auto Driver) ವಿಜಯಕುಮಾರ್ ಅಪಹರಿಸಿ(Kidnap) ಕೊಲೆಗೈದಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪಹರಣಕಾರನೊಬ್ಬನಿಗೆ ಇಂದಿರಾ ನಗರ ಠಾಣೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಪಾಕ್ ಮೀನುಗಾರಿಕಾ ಬೋಟ್ ವಶಕ್ಕೆ... 400 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಮೈಕೋ ಲೇಔಟ್ ನಿವಾಸಿ ಲೋಹಿತ್ ಅಲಿಯಾಸ್ ರೋಹಿತ್‌ಗೆ ಗುಂಡೇಟು ಬಿದ್ದಿದ್ದು, ಜೆ.ಬಿ.ನಗರ ಸಮೀಪದ ಚಲ್ಲಘಟ್ಟದಲ್ಲಿ ಶನಿವಾರ ಮುಂಜಾನೆ ಆತನ ಬಂಧನ(Arrest) ಕಾರ್ಯಾಚರಣೆ ವೇಳೆ ಈ ಗುಂಡಿನ ದಾಳಿ(Firing) ನಡೆದಿದೆ. ಈ ವೇಳೆ ಇಂದಿರಾನಗರ ಪೊಲೀಸ್ ಕಾನ್‌ಸ್ಟೇಬಲ್ ಸೈಯದ್ ಮೊಹಿನ್‌ನುಲ್ಲಾ ಅವರಿಗೂ ಪೆಟ್ಟಾಗಿದೆ. ಆಟೋ ಚಾಲಕ ವಿಜಯಕುಮಾರ್ ಕೊಲೆ(Murder) ಪ್ರಕರಣದಲ್ಲಿ ತನ್ನ ಸಹಚರರು ಸಿಕ್ಕಿಬಿದ್ದ ಬಳಿಕ ಬಂಧನ ಭೀತಿಯಿಂದ ಲೋಹಿತ್ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಟ್ರೈನಿ ಮಹಿಳಾ ಸಬ್ ಇನ್ಸ್‌ಪೆಕ್ಟರ್!
ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಸಂಚಲನ ಮೂಡಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಟ್ರೈನಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳಾ ಇನ್ಸ್‌ಪೆಕ್ಟರ್ ಅವರನ್ನು ದರ್ಭಾಂಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ. ಟ್ರೈನಿ ಮಹಿಳಾ ಇನ್ಸ್‌ಪೆಕ್ಟರ್ ಸುಪೌಲ್ ಜಿಲ್ಲೆಯ ನಿವಾಸಿಯಾಗಿದ್ದರು. ಕಂಪ್ಲೀಟ್ ಸ್ಟೋರಿ ಇಲ್ಲಿ ಓದಿ.