Bengaluru Crime News : ಠಾಣೆಯಿಂದ ಎಸ್ಕೇಪ್‌ ಆಗಿ ಆರೋಪಿ ಆತ್ಮಹತ್ಯೆ

By Kannadaprabha NewsFirst Published Dec 21, 2021, 7:32 AM IST
Highlights
  •  ಠಾಣೆಯಿಂದ ಎಸ್ಕೇಪ್‌ ಆಗಿ ಆರೋಪಿ ಆತ್ಮಹತ್ಯೆ
  •  ಪತ್ನಿ ಆತ್ಮಹತ್ಯೆ ಕೇಸಲ್ಲಿ ಬಂಧಿತನಾಗಿದ್ದ ಆರೋಪಿ
  • ಕೆ.ಆರ್‌.ಪುರ ಠಾಣಾ ವ್ಯಾಪ್ತಿಯಲ್ಲಿ ಸಿನಿಮೀಯ ಶೈಲಿ ಘಟನೆ

 ಬೆಂಗಳೂರು (ಡಿ.21):  ಪತ್ನಿ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿದ್ದ ಕಾರ್ಪೆಂಟರ್‌ವೊಬ್ಬ ಸೋಮವಾರ ಬೆಳಗ್ಗೆ ಪೊಲೀಸ್‌ ಠಾಣೆಯಿಂದ (Police Station) ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡು 30 ಅಡಿ ಎತ್ತರದ ಸ್ಕೈವಾಕ್‌ನಿಂದ (Sky walk) ಜಿಗಿದು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಕೆ.ಆರ್‌.ಪುರದಲ್ಲಿ ನಡೆದಿದೆ.  ಆನಂದಪುರದ ನಿವಾಸಿ ಶಕ್ತಿವೇಲು (32) ಮೃತ ದುರ್ದೈವಿ.

ಒಂದೂವರೆ ವರ್ಷದ ಹಿಂದೆ ತಮಿಳುನಾಡು (Tamilnadu) ಮೂಲದ ಶಕ್ತಿವೇಲು ಹಾಗೂ ಸಂಗೀತಾ ಪ್ರೇಮ ವಿವಾಹವಾಗಿದ್ದರು. ವಿವಾಹದ (Marriage) ಬಳಿಕ ಸಣ್ಣಪುಟ್ಟವಿಚಾರಗಳಿಗೆ ಶಕ್ತಿವೇಲು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಶನಿವಾರವೂ ಸತಿ-ಪತಿ ಜಗಳವಾಡಿದ್ದರು. ಆಗ ಬೇಸರಗೊಂಡ ಸಂಗೀತಾ(30), ತನ್ನ ತಂದೆಗೆ ವಾಟ್ಸಾಪ್‌ ನಲ್ಲಿ  ಮೆಸೇಜ್‌ ಕಳುಹಿಸಿ ನೇಣು ಬಿಗಿದುಕೊಂಡಿದ್ದಳು.

ಸಂಗೀತಾಳ ತಂದೆ ದೂರು ಆಧರಿಸಿ ಕೆ.ಆರ್‌.ಪುರ ಠಾಣೆಯಲ್ಲಿ ಐಪಿಸಿ 306(ಆತ್ಮಹತ್ಯೆಗೆ ಪ್ರಚೋದನೆ) ಹಾಗೂ ಐಪಿಸಿ 498 (ವರದಕ್ಷಿಣೆ ಕಿರುಕುಳ) ಆರೋಪಡಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಬಂಧನ ಭೀತಿಯಿಂದ ಪರಾರಿ ಆಗಿದ್ದ ಶಕ್ತಿವೇಲು ಭಾನುವಾರ ಪೊಲೀಸರಿಗೆ (Police) ಸಿಕ್ಕಿಬಿದ್ದಿದ್ದ.

ಲಾಕಪ್‌ನಲ್ಲಿದ್ದ ಶಕ್ತಿವೇಲು, ಸೋಮವಾರ ಬೆಳಗ್ಗೆ 6.30ಕ್ಕೆ ಶೌಚಕ್ಕೆ (Toulet) ಹೋಗಬೇಕೆಂದು ಮನವಿ ಮಾಡಿದ್ದ. ಆತನನ್ನು ಕಾನ್‌ಸ್ಟೇಬಲ್‌ವೊಬ್ಬರು, ಠಾಣೆ ಹಿಂಬದಿಯಲ್ಲಿದ್ದ ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. ಆಗ ಕಾನ್‌ಸ್ಟೇಬಲ್‌ನನ್ನು ದೂಡಿ ಕಾಂಪೌಂಡ್‌ ಜಿಗಿದು ಕಾಲ್ಕಿತ್ತಿದ್ದಾನೆ. ಕೂಡಲೇ ಪೊಲೀಸರು (Police) ಆರೋಪಿಯ ಬೆನ್ನಟ್ಟಿದ್ದಾರೆ. ಠಾಣೆಯಿಂದ ಸ್ಪಲ್ಪದೂರ ಹೋದ ಬಳಿಕ ಆಟೋ ಹತ್ತಿ ದೂರವಾಣಿ ನಗರದ ಸ್ಕೈವಾಕ್‌ ಸಮೀಪ ತೆರಳಿದ್ದಾನೆ. 30 ಅಡಿಯ ಸ್ಕೈವಾಕ್‌ ಹತ್ತಿ ಕೆಳಗೆ ಜಿಗಿದ್ದಾನೆ. ಅದೇ ವೇಳೆಗೆ ಹೊಸಕೋಟೆ ಕಡೆಯಿಂದ ಬರುತ್ತಿದ್ದ ನಾಯಕ್‌ ಎಂಬುವವರ ಕಾರು ಸ್ಕೈವಾಕ್‌ನಿಂದ ದಿಢೀರ್‌ ರಸ್ತೆಗೆ ಬಿದ್ದವನ ಮೇಲೆ ಹರಿದಿದೆ. ಆಗ ತೀವ್ರ ಗಾಯಗೊಂಡು ಶಕ್ತಿವೇಲು ಮೃತಪಟ್ಟಿದ್ದಾನೆ. ಆರೋಪಿಯನ್ನು ಹಿಂಬಾಲಿಸಿ ಬಂದ ಪೊಲೀಸರು, ಸ್ಥಳಕ್ಕೆ ತೆರಳುವ ಮುನ್ನವೇ ಆತ ಮೃತಪಟ್ಟಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿಸಿಪಿ ತರಾಟೆ

ಠಾಣೆಯಿಂದ ತಪ್ಪಿಸಿಕೊಂಡ ಆರೋಪಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಡಿ.ದೇವರಾಜ್‌, ಕೆ.ಆರ್‌.ಪುರ ಠಾಣೆಗೆ (KR Pur) ತೆರಳಿ ಘಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಆ ವೇಳೆ ಇನ್‌ಸ್ಪೆಕ್ಟರ್‌ ಅಂಬರೀಷ್‌, ಇತರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೊಲೀಸರ ತಲೆದಂಡ?

ಪ್ರಕರಣದಲ್ಲಿ ಕರ್ತವ್ಯಲೋಪದ ಆರೋಪದ ಮೇರೆಗೆ ಕೆ.ಆರ್‌.ಪುರ ಪೊಲೀಸರ (Police) ತಲೆದಂಡವಾಗಲಿದೆ ಎನ್ನಲಾಗಿದೆ. ಕೆ.ಆರ್‌.ಪುರ ಠಾಣೆಗೆ ಭೇಟಿ ನೀಡಿದ್ದ ಹೆಚ್ಚುವರಿ ಆಯುಕ್ತ (ಪೂರ್ವ) ಎಸ್‌.ಮುರುಗನ್‌, ಕರ್ತವ್ಯಲೋಪದ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಡಿಸಿಪಿಗೆ (DCP) ಸೂಚಿಸಿದ್ದಾರೆ.

ಪತ್ನಿ ಡೆತ್‌ನೋಟ್‌ ಪತ್ತೆ

ಆತ್ಮಹತ್ಯೆ ಮಾಡಿಕೊಂಡ ಸಂಗೀತಾ ಬರೆದಿದ್ದ ಮರಣ ಪತ್ರ ಪತ್ತೆಯಾಗಿದೆ. ಅಲ್ಲದೆ ಆತ್ಮಹತ್ಯೆಗೂ ಮುನ್ನ ತಂದೆಗೂ ಸಹ ಸಂಗೀತಾ ವಾಯ್ಸ್ ಮೆಸೇಜ್‌ ಕಳುಹಿಸಿದ್ದಳು. ಮದುವೆ ಬಳಿಕ ಕೌಟುಂಬಿಕ ಕಲಹದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆಕೆ ಅಲವತ್ತುಕೊಂಡಿದ್ದಳು ಎನ್ನಲಾಗಿದೆ.

ಪತ್ನಿ ಸಾವಿನಿಂದ ಖಿನ್ನತೆ

ಪೋಷಕರ ವಿರೋಧ ಕಟ್ಟಿಕೊಂಡು ಪ್ರೀತಿಸಿ ವಿವಾಹವಾಗಿದ್ದ (Marriage) ಪತ್ನಿಯ ಆತ್ಮಹತ್ಯೆಯಿಂದ ಶಕ್ತಿವೇಲು ಆಘಾತಗೊಂಡಿದ್ದ. ವಿಚಾರಣೆ ವೇಳೆ ಆತನನ್ನು ಸಂತೈಸಲಾಗಿತ್ತು. ಈ ನೋವಿನಲ್ಲೇ ಆತ, ಠಾಣೆಯಿಂದ ಗೋಡೆ ಜಿಗಿದ ಕೂಡಲೇ ಚಲಿಸುವ ಲಾರಿಗೆ ಸಿಲುಕಲು ಮುಂದಾಗಿದ್ದ. ಅದು ಸಾಧ್ಯವಾಗದಿದ್ದಾಗ ಸ್ಕೇವಾಕ್‌ ಹತ್ತಿ ಕಾರು ಬರುವುದನ್ನು ಗಮನಿಸಿಯೇ ಕೆಳಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ವಶದಲ್ಲಿದ್ದ ಆರೋಪಿ ಪರಾರಿಯಾದ ಘಟನೆ ಸಂಬಂಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಠಾಣೆಯಿಂದ ಆರೋಪಿ ತಪ್ಪಿಸಿಕೊಂಡು ಓಡಿ ಹೋಗುತ್ತಿರುವ ಬಗ್ಗೆ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳು ಪತ್ತೆಯಾಗಿವೆ.

-ಡಿ.ದೇವರಾಜ್‌, ಡಿಸಿಪಿ, ವೈಟ್‌ಫೀಲ್ಡ್‌ ವಿಭಾಗ

click me!