*ನಡುರಾತ್ರಿ ಬೈಕ್‌ಗಳ ನಡುವೆ ಭೀಕರ ಡಿಕ್ಕಿ
*ಇಬ್ಬರು ಬಲಿ: ಮತ್ತಿಬ್ಬರಿಗೆ ಗಂಭೀರ ಗಾಯ
*ಎಲೆಕ್ಟ್ರಾನಿಕ್ ಸಿಟಿ ಹೊಸೂರು ರಸ್ತೆಯಲ್ಲಿ ಅಪಘಾತ
ಬೆಂಗಳೂರು (ಡಿ. 21): ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪ ಹೊಸೂರು ರಸ್ತೆಯಲ್ಲಿ (Electronic City) ಭಾನುವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಮುಖಾಮುಖಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ (Bike Accident) ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಸ್ಕೂರು ಗೇಟ್ ನಿವಾಸಿಗಳಾದ ಜಿತಿನ್ ಜೋಶ್(25) ಹಾಗೂ ಸೋನು(30) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಎಸ್.ಜಿ.ಪಾಳ್ಯದ ನಿವಾಸಿಗಳಾದ ಶರತ್ ಆದಿತ್ಯ(24) ಹಾಗೂ ಸಂತೋಷ್(23) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸೂರು ಕಡೆಯಿಂದ ಜಿತಿನ್ ಹಾಗೂ ಹುಸ್ಕೂರು ಗೇಟ್‌ನಿಂದ ಶರತ್ ಬೈಕ್‌ನಲ್ಲಿ ಭಾನುವಾರ ರಾತ್ರಿ ಬಂದಾಗ ಈ ಘಟನೆ ನಡೆದಿದೆ ಎಂದು ಪೂರ್ವ ವಿಭಾಗ (ಸಂಚಾರ)ದ ಡಿಸಿಪಿ ಶಾಂತರಾಜ್ ತಿಳಿಸಿದ್ದಾರೆ. ತನ್ನ ಕೆಟಿಎಂ ಡ್ಯೂಕ್ ಬೈಕ್‌ನಲ್ಲಿ ಭಾನುವಾರ ರಾತ್ರಿ 1 ಗಂಟೆ ಸುಮಾರಿಗೆ ಗೆಳೆಯ ಸಂತೋಷ್ ಜತೆ ಕೊನೇನ ಅಗ್ರಹಾರ ಕಡೆಗೆ ಶರತ್ ತೆರಳುತ್ತಿದ್ದ. ಅದೇ ವೇಳೆ ಎದುರಿನಿಂದ ಮತ್ತೊಂದು ಬೈಕ್‌ನಲ್ಲಿ ಸೋನು ಜತೆ ಜಿತಿನ್ ಬಂದಿದ್ದಾನೆ.
ಎರಡು ಬೈಕ್‌ಗಳು ಭಾಗಶಃ ನುಜ್ಜು!
ಎರಡು ಬೈಕ್ ಸವಾರರು ಅತಿವೇಗವಾಗಿ ಚಾಲನೆ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ ಔಡಿ ಕಾರ್ ಸರ್ವೀಸ್ ಸೆಂಟರ್ ಹತ್ತಿರ ಜಿತಿನ್, ಬಲಭಾಗಕ್ಕೆ ಸ್ವಲ್ಪ ಬಂದಾಗ ಎದುರಿನಿಂದ ಬಂದ ಶರತ್ ಬೈಕ್ ಅಪ್ಪಳಿಸಿದೆ. ಈ ಡಿಕ್ಕಿ ರಭಸ ಯಾವ ಮಟ್ಟಿಗೆ ತೀವ್ರವಾಗಿತ್ತು ಅಂದರೆ ಎರಡು ಬೈಕ್‌ಗಳು ಭಾಗಶಃ ನುಜ್ಜುಗುಜ್ಜಾಗಿವೆ.
Hassan: ಕುಡಿದ ಮತ್ತಿನಲ್ಲಿ ಮನಬಂದಂತೆ ಲಾರಿ ಚಾಲನೆ: ಇಬ್ಬರು ಮಕ್ಕಳು ಸೇರಿ ತಾಯಿ ಸಾವು
ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರಿಗೂ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ತಕ್ಷಣವೇ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಜೋಶ್ ಹಾಗೂ ಸೋನು ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರು ಗಾಯಾಳುಗಳು ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದು, ಈ ಪೈಕಿ ಸಂತೋಷ್ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಲ್ಮಟ್ ಧರಿಸದೇ ಪ್ರಾಣಕ್ಕೆ ಕುತ್ತು
ಈ ಎರಡು ಬೈಕ್‌ಗಳ ಅಪಘಾತದಲ್ಲಿ ಇಬ್ಬರ ಸಾವಿಗೆ ಹೆಲ್ಮಟ್ ಧರಿಸದೆ ಹೋಗಿದ್ದು ಪ್ರಮುಖ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬೈಕ್‌ನಲ್ಲಿ ತೆರಳುವಾಗ ಜಿತಿನ್, ಸೋನು, ಸಂತೋಷ್ ಹಾಗೂ ಶರತ್ ಹೆಲ್ಮಟ್ ಧರಿಸಿರಲಿಲ್ಲ. ಇದರಿಂದ ಮುಖಾಮುಖಿ ಡಿಕ್ಕಿಯಾದಾಗ ಈ ನಾಲ್ವರ ತಲೆಗೆ ಗಂಭೀರ ಪೆಟ್ಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Safety Alerts Navigation ಕೇಂದ್ರದಿಂದ ಚಾಲಕರಿಗೆ ಅಪಘಾತ, ಅಪಾಯ ಎಚ್ಚರಿಸುವ ಉಚಿತ ನ್ಯಾವಿಗೇಶನ್ ಆ್ಯಪ್ ಬಿಡುಗಡೆ!
ಕೇರಳ ಮೂಲದ ಜಿತಿನ್ ಹಾಗೂ ಸೋನು, ಎಲೆಕ್ಟ್ರಾನಿಕ್ ಸಿಟಿ ಸಮೀಪ ಸಿಸಿಟಿವಿ ಕ್ಯಾಮೆರಾ ಮಾರಾಟ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಗಾಯಾಳುಗಳ ಪೈಕಿ ಶರತ್ ಅವರ ತಂದೆ ಕೋಳಿ ಅಂಗಡಿ ಇಟ್ಟಿದ್ದು, ತಂದೆಗೆ ವ್ಯಾಪಾರದಲ್ಲಿ ಶರತ್ ಸಹಕರಿಸುತ್ತಿದ್ದ. ಸಂತೋಷ್ ಸಣ್ಣಪುಟ್ಟಕೆಲಸ ಮಾಡಿಕೊಂಡಿದ್ದ.