Lokayukta Raid: ಲೋಕಾಯುಕ್ತ ಅಬ್ಬರ ಶುರು, BBMP ಜಂಟಿ ಆಯುಕ್ತರ ಮೇಲೆ ದಾಳಿ - ಬಂಧನ

By Sharath Sharma KalagaruFirst Published Sep 12, 2022, 4:48 PM IST
Highlights

Lokayukta back in action: ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಪೊಲೀಸರಿಗೆ ಅಧಿಕಾರ ನೀಡಿದ ಬೆನ್ನಲ್ಲೇ ಮೊದಲ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಪೊಲೀಸರು ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್‌ ಕಚೇರಿಯ ಮೇಲೆ ದಾಳಿ ಮಾಡಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್‌ ಹ್ಯಾಂಡಾಗಿ ಹಿಡಿದಿದ್ದಾರೆ.

ಬೆಂಗಳೂರು: ಲೋಕಾಯುಕ್ತ ಪೊಲೀಸರಿಗೆ ಠಾಣಾ ಅಧಿಕಾರ ಕಿತ್ತುಕೊಂಡ ನಂತರ ಹಲ್ಲು ಕಿತ್ತ ಹಾವಿನಂತಾಗಿತ್ತು. ಇದೀಗ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ನೀಡಿದ ಬೆನ್ನಲ್ಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಶ್ರೀನಿವಾಸ್‌ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ನೆಪ ಮಾತ್ರಕ್ಕೆ ಇದ್ದ ಲೋಕಾಯುಕ್ತ ಮತ್ತೆ ಅಬ್ಬರಿಸಲು ಸಜ್ಜಾಗಿದೆ ಎಂಬ ಸಂದೇಶ ಈ ದಾಳಿಯಿಂದ ರವಾನಿಸಲಾಗಿದೆ. ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್‌ ಮತ್ತು ಅವರ ಆಪ್ತ ಸಹಾಯಕ ಉಮೇಶ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರವನ್ನು ಕಿತ್ತುಕೊಂಡು ಭ್ರಷ್ಟಾಚಾರ ನಿಗ್ರಹ ದಳ ಆರಂಭಿಸಲಾಗಿತ್ತು. ಆದರೆ ಲೋಕಾಯುಕ್ತ ಕಾಯ್ದೆಯಷ್ಟು ಬಲವಿಲ್ಲ ಎಸಿಬಿಯಿಂದ ಭ್ರಷ್ಟಾಚಾರದ ನಿಗ್ರಹ ಸಾಧ್ಯವಾಗಲಿಲ್ಲ ಎಂಬ ಆರೋಪ ಬಿಜೆಪಿ ಮತ್ತು ಜೆಡಿಎಸ್‌ನಿಂದ ಕೇಳಿ ಬಂದಿತ್ತು. ಇದೀಗ ಮತ್ತೆ ಅಧಿಕಾರ ಸಿಗುತ್ತಲೇ ದಾಳಿ ಮಾಡುವ ಮೂಲಕ ಭ್ರಷ್ಟರ ಬೇಟೆಗೆ ಲೋಕಾಯುಕ್ತ ಪೊಲೀಸರು ಸಿದ್ಧರಾಗಿದ್ದಾರೆ.

ಲೋಕಾಯುಕ್ತ ಬಲವರ್ಧನೆಯ ಬೆನ್ನಲ್ಲೇ ಇದು ಮೊದಲ ದಾಳಿತಾಗಿದ್ದು ಜಂಟಿ ಆಯುಕ್ತ ಶ್ರೀನಿವಾಸ್‌ ನಾಲ್ಕು ಲಕ್ಷ ರೂ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ. ಪಶ್ಚಿಮ ವಿಭಾಗದ ಬಿಬಿಎಂಪಿ ಕಛೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಮಾಹಿತಿ ಮೇರೆಗೆ ಲೋಕಾಯುಕ್ತ ದಾಳಿ ನಡೆದಿದೆ. ಮಲ್ಲೇಶ್ವರಂ ಬಳಿ ಇರುವ ಬಿಬಿಎಂಪಿ ಕಛೇರಿ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಹಣದ ಸಮೇತ ನಿಂತಿದ್ದ ಶ್ರೀನಿವಾಸ್ ಪಿಎ ಉಮೇಶ್. ಖಾತೆ ಬದಲಾವಣೆ ವಿಚಾರಕ್ಕೆ ಲಂಚದ ಬೇಡಿಕೆ ಇಟ್ಟಿದ್ದ ಶ್ರೀನಿವಾಸ್‌, ಈ ಬಗ್ಗೆ ದೂರುದಾರರು ನೀಡಿದ ಮಾಹಿತಿ ಅನ್ವಯ ದಾಳಿ ನಡೆಸಲಾಗಿದೆ.  

DySP ಮಂಜಯ್ಯ ,ಶಂಕರ್ ನಾರಾಯಣ್ ನೇತೃತ್ವದ ಲೋಕಾಯುಕ್ತ ಟೀಂನಲ್ಲಿ ಒಟ್ಟು 8 ಜನ ಅಧಿಕಾರಿಗಳಿದ್ದರು ಎಂದು ಮೂಲಗಳು ತಿಳಿಸಿವೆ. ಇಷ್ಟು ದಿನಗಳ ಕಾಲ ದೂರುಗಳು ಬಂದರೂ ಏನು ಮಾಡದ ಪರಿಸ್ಥಿತಿಯಲ್ಲಿ ಲೋಕಾಯುಕ್ತ ಪೊಲೀಸರಿದ್ದರು. ಆದ ಹೈಕೋರ್ಟ್‌ ಮತ್ತು ಕರ್ನಾಟಕ ಸರ್ಕಾರದ ಆದೇಶದಿಂದ ಲೋಕಾಯುಕ್ತ ಪೊಲೀಸರಿಗೆ ಬಲ ಬಂದಿದೆ. 

ಇದನ್ನೂ ಓದಿ: ಭ್ರಷ್ಟರ ಬೇಟೆಗೆ ಲೋಕಾ ಸಜ್ಜು, ಜನರ ದೂರು ಸ್ವೀಕರಿಸಿ, ತನಿಖೆ ನಡೆಸಿ: ಠಾಕೂರ್‌

ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿಯನ್ನು ರದ್ದುಗೊಳಿಸಿ ಹಿಂದಿನಂತೆ ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಈ ಕುರಿತು ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಇದೀಗ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸಿಬಿಯನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ ಎಸಿಬಿಯಲ್ಲಿ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿದೆ.  ಈ ಹಿಂದಿನಂತೆ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇನ್ಮುಂದೆ ಕರ್ನಾಟಕದಲ್ಲಿ ಮತ್ತೆ ಲೋಕಾಯುಕ್ತ ಅಬ್ಬರಿಸಲಿದೆ.  

ಭ್ರಷ್ಟರ ಬೇಟೆಗೆ ಲೋಕಾ ಸಜ್ಜು:
ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚನೆಯಿಂದ ಮಂಕಾಗಿದ್ದ ಲೋಕಾಯುಕ್ತ ಸಂಸ್ಥೆ, ಈಗ ಎಸಿಬಿ ರದ್ದು ಮಾಡುವ ಹೈಕೋರ್ಚ್‌ ಆದೇಶ ಹಾಗೂ ಅದಕ್ಕೆ ಸರ್ಕಾರದ ಪೂರಕ ಸ್ಪಂದನೆ ದೊರಕಿದ ಕಾರಣ ಚುರುಕುಗೊಂಡಿದೆ. ತಮ್ಮ ಹಿಂದಿನ ಶೈಲಿಯಂತೆ ಲಂಚಗುಳಿತನದ ವಿರುದ್ಧ ಸಮರಕ್ಕೆ ಲೋಕಾಯುಕ್ತ ಪೊಲೀಸರು ಸಜ್ಜಾಗಿದ್ದು, ‘ಭ್ರಷ್ಟರ ವಿರುದ್ಧ ಜನರ ದೂರು ಸ್ವೀಕರಿಸಿ ತನಿಖೆ ನಡೆಸಿ’ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌ ಅವರು ಆಯಾ ಜಿಲ್ಲಾ ವ್ಯಾಪ್ತಿಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ‘ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ವಯ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿ ಹೈಕೋರ್ಚ್‌ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ಸಂಬಂಧ ಜನರು ಸಲ್ಲಿಸುವ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸಬೇಕು’ ಎಂದು ಅವರು ಲೋಕಾಯುಕ್ತ ವಿಭಾಗದ ವಿವಿಧ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ಎಡಿಜಿಪಿ ಅವರು ಸುತ್ತೋಲೆಯಲ್ಲಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗೋ ಪ್ರಶ್ನೆನೇ ಇಲ್ಲ: ಸಿಎಂ ಬೊಮ್ಮಾಯಿ

ಹೈಕೋರ್ಟ್ ಆದೇಶ ಸುಪ್ರೀಂನಲ್ಲಿ ಪ್ರಶ್ನೆ:
ಭ್ರಷ್ಟಾಚಾರ ನಿಗ್ರಹ ಪಡೆ(ಎಸಿಬಿ) ರದ್ದುಪಡಿಸಿರುವ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ಸುಪ್ರೀಂ ಕೋರ್ಚ್‌ ನೋಟಿಸ್‌ ನೀಡಿದೆ. ಜೊತೆಗೆ ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿದೆ. ಎಸಿಬಿ ರದ್ದುಪಡಿಸಿರುವ ರಾಜ್ಯ ಹೈಕೋರ್ಚ್‌ ಆದೇಶ ಪ್ರಶ್ನಿಸಿ ಬೆಂಗಳೂರಿನ ಕನಕರಾಜು ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡಿರುವ ನ್ಯಾ.ಡಿ.ವೈ.ಚಂದ್ರಚೂಡ್‌ ಪೀಠ ಈ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ನೋಟಿಸ್‌ ನೀಡಿತ್ತು. 

click me!