Kolar News: ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣ: ಎಸ್ಕೇಪ್ ಆಗ ಹೊರಟ ಆರೋಪಿ ಕಾಲಿಗೆ ಗುಂಡೇಟು!

By Suvarna News  |  First Published Jun 24, 2022, 9:03 PM IST

Kolar Jagan Mohan Reddy Murder Case: ಮುಳಬಾಗಿಲು ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣಕ್ಕೆ ಹದಿನೇಳು ದಿನಗಳ ನಂತರ ಹೊಸ ತಿರುವು ಸಿಕ್ಕಿದೆ.  


ವರದಿ : ದೀಪಕ್, ಕೋಲಾರ 

ಕೋಲಾರ (ಜೂ. 24): ಮುಳಬಾಗಿಲು ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣಕ್ಕೆ ಹದಿನೇಳು ದಿನಗಳ ನಂತರ ಹೊಸ ತಿರುವು ಸಿಕ್ಕಿದೆ.  ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬನಾದ ಸುಪಾರಿ ಕಿಲ್ಲರ್‌ನನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ಫೈರಿಂಗ್​ ಮಾಡಿದ್ದಾರೆ. ಕಾಲಿಗೆ ಗುಂಡೇಟು ತಗುಲಿ ಜಿಲ್ಲಾಸ್ಪತ್ರೆಯ ಜೈಲ್​ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಪಾರಿ ಕಿಲ್ಲರ್​ ಬಾಲಾಜಿ ಸಿಂಗ್​ ಆಲಿಯಾಸ್​ ಗಬ್ಬರನನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಆರೋಪಿ ಬಾಲಾಜಿ ಸಿಂಗ್​ಗೆ ಫೈಯರ್​ ಮಾಡಿದ ಸ್ಥಳದಲ್ಲಿ ಎಸ್ಪಿ ದೇವರಾಜ್​  ಪರಿಶೀಲನೆ ನಡೆಸುತ್ತಿದ್ದಾರೆ.

Tap to resize

Latest Videos

ಜೂನ್​ 7ರಂದು ಕೋಲಾರ ಜಿಲ್ಲೆ ಮುಳಬಾಗಿಲು ನಗರಸಭೆ ಸದಸ್ಯ ಜಗನ್​ ಮೋಹನ್​ರೆಡ್ಡಿ ಕೊಲೆಯಾಗಿತ್ತು, ಕೊಲೆಯಾಗಿ ಹದಿನೇಳು ದಿನವಾದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸುಪಾರಿ ಕಿಲ್ಲರ್​ ಬಾಲಾಜಿ ಸಿಂಗ್​ ತಲೆಮರೆಸಿಕೊಂಡು ಮೈಸೂರಿನಲ್ಲಿರುವ ಬಗ್ಗೆ ಪೊಲೀಸರ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆ ಮುಳಬಾಗಿಲು ಪೊಲೀಸ್​ ಇನ್ಪೆಕ್ಟರ್​ ಲಕ್ಷೀಕಾಂತ್​ ಹಾಗೂ ತಂಡ ಮೈಸೂರಿಗೆ ತೆರಳಿ ಆರೋಪಿ ಬಾಲಾಜಿ ಸಿಂಗ್​ನನ್ನು ನಿನ್ನೆ ರಾತ್ರಿ ಬಂಧಿಸಿದ್ದಾರೆ.

ಎಸ್ಕೇಪ್ ಆಗ ಹೊರಟ ಆರೋಪಿ ಕಾಲಿಗೆ ಗುಂಡೇಟು: ಆರೋಪಿಯನ್ನು ಇಂದು ಬೆಳಗಿನಜಾವ ಕರೆತರುವ ವೇಳೆ ಕೋಲಾರ ತಾಲ್ಲೂಕು ಮಡೇರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಆರೋಪಿ ಮೂತ್ರ ವಿಸರ್ಜನೆ ಮಾಡಲು ಕೇಳಿದಾಗ ಗಾಡಿ ನಿಲ್ಲಿಸಿ ಆತನ ಕೈಗೆ ಹಾಕಿದ್ದ ಹ್ಯಾಂಡ್​ ಕಪ್​ ತೆಗೆದು ಮೂತ್ರ ವಿಸರ್ಜನೆ ಮಾಡಲು ಹೇಳಿದ್ದಾರೆ. ಈ ವೇಳೆ ಆರೋಪಿ ಬಾಲಾಜಿ ಸಿಂಗ್​ ಪೊಲೀಸ್​ ಕಾನ್​ಸ್ಟಬಲ್​ ರಾಜೇಶ್​ ಮೇಲೆ ಹಲ್ಲೆ ಮಾಡಿದ್ದಾನೆ.  ಅಲ್ಲದೇ ಅಲ್ಲಿದ್ದ ವಿನಾಯಕ್​ ಎಂಬ ಮತ್ತೊಬ್ಬ ಕಾನ್​ಸ್ಟಬಲ್​ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. 

ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಕುಂದಾನಗರಿಯಲ್ಲಿ ಫೈರಿಂಗ್‌, ಕೊಲೆ ಆರೋಪಿ ಬಂಧನ

ಈ ಬೆನ್ನಲ್ಲೇ ಮುಳಬಾಗಿಲು ಇನ್​ಸ್ಪೆಕ್ಟರ್​ ಲಕ್ಷ್ಮೀನಾರಾಯಣ್​ ಆರೋಪಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಆದರೆ ಅವರ ಮಾತನ್ನು ಕೇಳಿಸಿಕೊಳ್ಳದ ಆರೋಪಿ ಲಕ್ಷ್ಮೀನಾರಾಯಣ್​ ಮೇಲೂ ದೊಣ್ಣೆಯಿಂದ ಹಲ್ಲೆ ಮಾಡಲು ಯತ್ನಿಸಿದಾಗ ಇನ್​ಸ್ಪೆಕ್ಟರ್​ ಲಕ್ಷ್ಮೀಕಾಂತ್ ತಮ್ಮ ಬಳಿ ಇದ್ದ ಸರ್ವಿಸ್​ ರಿವಲ್ವಾರ್​ನಿಂದ ಬಾಲಾಜಿ ಸಿಂಗ್​ ಬಲ ಕಾಲಿಗೆ ಫೈಯರ್​ ಮಾಡಿದ್ದಾರೆ.​ ನಂತರ ಗುಂಡೇಟು ತಿಂದ ಆರೋಪಿ ಬಾಲಾಜಿ ಸಿಂಗ್‌ನನ್ನು ಹಾಗೂ ಹಲ್ಲೆಗೊಳಗಾಗಿದ್ದ ಕಾನ್​ಸ್ಟೆಬಲ್​ ವಿನಾಯಕ್‌ರನ್ನು ಕೋಲಾರ ಜಿಲ್ಲಾಸ್ಪತ್ರೆಗೆ​ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಲವು ಪ್ರಕರಣಗಳು ದಾಖಲು: ಇನ್ನು ಮುಳಬಾಗಿಲು ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಕ್ಕಿ ಬಿದ್ದಿರುವ ಆರೋಪಿ ಬಾಲಾಜಿ ಸಿಂಗ್​ ಮುಳಬಾಗಿಲು ಮೂಲದವನು ಆದರೆ ಬಂಗಾರಪೇಟೆಯಲ್ಲಿ ವಾಸವಿದ್ದ. ಬಂಗಾರಪೇಟೆಯಲ್ಲಿ ಬಡ್ಡಿ ಫೈನಾನ್ಸ್​ ವ್ಯವಹಾರ ಮಾಡಿಕೊಂಡಿದ್ದವನು, ಈತ ಮೊದಲು 2017 ರಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿ ಬೈಕ್​ ಕಸಿದುಕೊಂಡು ಹೋಗಿದ್ದ, ನಂತರ ಮುಳಬಾಗಿಲು ಬಾಯಿಕೊಂಡ ಗಂಗಮ್ಮ ಕಬಾಬ್​ ಸೆಂಟರ್​ ಮಾಲೀಕ ನಾರಾಯಣ್ ಎಂಬಾತನನ್ನು ಆತನ ಹೆಂಡತಿಯಿಂದಲೇ ಆರು ಲಕ್ಷ ಸುಪಾರಿ ಪಡೆದು ಕೊಲೆ ಮಾಡಿದ್ದ.

ಬಾಲಾಜಿ ಸಿಂಗ್​ ಆಲಿಯಾಸ್​ ಗಬ್ಬರ್​ ಸಿಂಗ್​ ಮೇಲೆ ಈ ಹಿಂದೆಯೇ ಕೊಲೆ, ದರೋಡೆ, ಡಕಾಯತಿ ಪ್ರಕರಣಗಳು ದಾಖಲಾಗಿದ್ದವು. ಈ ನಡುವೆಯೇ ಮುಳಬಾಗಿಲಿನ ಜಗನ್​, ಧನುಷ್​, ಮನೋಜ್​ ಎಂಬುವರ ಜೊತೆಗೆ ಸೇರಿ ಈ ಬಾಲಾಜಿ ಸಿಂಗ್​ ಇದೇ ಜೂನ್​-7 ರಂದು ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿಯನ್ನು ಕೊಲೆ ಮಾಡಿ ನಂತರ ತಲೆಮರೆಸಿಕೊಂಡು ಓಡಾಡುತ್ತಿದ್ದ. 

ಇದನ್ನೂ ಓದಿ:  ನಡುರಸ್ತೆಯಲ್ಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಕೊಲೆಗೆ ಯತ್ನ

ಸದ್ಯ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರ ತಂಡ ಈಗ ಪ್ರಮುಖ ಆರೋಪಿ ಬಾಲಾಜಿ ಸಿಂಗ್​ನನ್ನು ಮೈಸೂರಿನಲ್ಲಿ ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಉಳಿದ ಆರೋಪಿಗಳನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ಕೋಲಾರ ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿದ್ದ ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣ ಈ ಮೂಲಕ ಹೊಸ ತಿರುವು ಪಡೆದುಕೊಂಡಿದ್ದು ಕೊಲೆ ಮಾಡಿದವರು ಯಾರು, ಯಾಕೆ ಮಾಡಿದ್ದಾರೆ ಎಂಬ ಹಲವು ಗೊಂದಲಗಳಿಗೆ ಉಳಿದ ಆರೋಪಿಗಳ ಬಂಧನದ ನಂತರ ಉತ್ತರ ಸಿಗಲಿದೆ..

click me!