ಪತಿಯೊಂದಿಗೆ ಅಕ್ರಮ ಸಂಬಂಧ ಆರೋಪ: ಮಹಿಳೆ ವಿರುದ್ಧ ಪತ್ನಿ ದಾಖಲಿಸಿದ್ದ ಪ್ರಕರಣ ರದ್ದು

By Suvarna News  |  First Published Jun 24, 2022, 7:55 PM IST

Karnataka High Court: ಪತಿಯೊಂದಿಗೆ ಅಕ್ರಮ ಸಂಬಂಧ ಆರೋಪ ಹೊಂದಿದ್ದ ಮಹಿಳೆಯೊಬ್ಬರ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ


ಬೆಂಗಳೂರು (ಜೂ. 24): ಪತಿಯೊಂದಿಗೆ ಅಕ್ರಮ ಸಂಬಂಧ (Illicit Relationship) ಆರೋಪ ಹೊಂದಿದ್ದ ಮಹಿಳೆಯೊಬ್ಬರ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿ ಮಹಿಳೆ ಹೈಕೋರ್ಟ್‌ಗೆ (High Court) ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ (Justice Hemant Chandangoudar)ಅವರು, ದೂರುದಾರ ಮಹಿಳೆಯ ಪತಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಏಕೈಕ ಆರೋಪ ಅರ್ಜಿದಾರ ಮಹಿಳೆ ಮೇಲಿದೆ. ಆದರೆ, ಇದನ್ನು ಮುಂದಿಟ್ಟುಕೊಂಡು ಎಫ್‌ಐಆರ್‌ನಲ್ಲಿ (FIR) ಮಾಡಲಾಗಿರುವ ಕ್ರೌರ್ಯ ಮೆರೆದ, ಅವಮಾನ ಮಾಡಿದ, ಜೀವ ಬೆದರಿಕೆ ಹಾಕಿದ, ವರದಕ್ಷಿಣೆಗೆ ಬೇಡಿಕೆಯಿಟ್ಟ ಮತ್ತು ವರದಕ್ಷಿಣೆ ತೆಗೆದುಕೊಳ್ಳಲು ಪ್ರಚೋದಿಸಿದ ಆರೋಪ ಹೊರಿಸಲಾಗದು ಎಂದು ಅಭಿಪ್ರಾಯಪಟ್ಟರು. ನಂತರ ಈ ಆರೋಪಗಳ ಕುರಿತು ಅರ್ಜಿದಾರ ಮಹಿಳೆ ವಿರುದ್ಧದ ವಿಜಯನಗರ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.

Tap to resize

Latest Videos

ಪ್ರಕರಣವೇನು?: ದೂರುದಾರ ಮಹಿಳೆ ವಿಜಯನಗರ ಠಾಣಾ ಪೊಲೀಸರಿಗೆ ದೂರು ದಾಖಲಿಸಿ, ಪ್ರಕರಣದ ಮೊದಲನೆ ಆರೋಪಿ ನನ್ನ ಪತಿಯಾಗಿದ್ದಾರೆ. ನನ್ನ ಪತಿಯೊಂದಿಗೆ ಐದನೇ ಆರೋಪಿ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದು, ಇನ್ನಿತರ ಮೂವರು ಆರೋಪಿಗಳೊಂದಿಗೆ ಸೇರಿ ನನಗೆ ಕಿರಕುಳ ಕೊಡುತ್ತಿದ್ದಾರೆ. ಅಲ್ಲದೇ ಜೀವ ಬೆದರಿಕೆ ಹಾಕಿದ್ದು, ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ್ದಾರೆ. ವರದಕ್ಷಿಣೆಗೆ ಪಡೆಯುವಂತೆ ಪತಿಗೆ ಪ್ರಚೋದನೆ ನೀಡಿದ್ದಾರೆ. ಇದರಿಂದ ಪತಿ ನನ್ನ ಬಳಿ ವರದಕ್ಷಿಣೆಗೆ ಬೇಡಿಕೆಯಿಟ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಸಾಕ್ಷ್ಯಾಧಾರ ಕೊರತೆ: ತ್ರಿಪಲ್ ಮರ್ಡರ್ ಕೇಸ್ ಆರೋಪಿ ಖುಲಾಸೆ

ಇದರಿಂದ ಪೊಲೀಸರು ಐಪಿಸಿ ಸೆಕ್ಷನ್ 498-A (ಪತಿ ಮತ್ತವರ ಸಂಬಂಧಿಕರು ಮಹಿಳೆ ಮೇಲೆ ಕ್ರೌರ್ಯ ಮೆರೆದ), 504 (ಉದ್ದೇಶಪೂರ್ವಕ ಅವಮಾನ), 506 (ಜೀವ ಬೆದರಿಕೆ), ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 (ವರದಕ್ಷಿಣೆ ಸ್ವೀಕರಿಸಲು ಪ್ರಚೋದನೆ ನೀಡಿದ) ಮತ್ತು 4 (ವರದಕ್ಷಿಣೆಗೆ ಬೇಡಿಕೆಯಿಟ್ಟ) ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದು ಕೋರಿ ಅರ್ಜಿದಾರ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.

click me!