
ಮೈಸೂರು (ಜೂ.03): ಮೂರು ದಿನದ ಹಿಂದೆ ಕೊಡಗಿನ ಜೈಲಿನಲ್ಲಿ ಇರಿತಕ್ಕೆ ಒಳಗಾಗಿದ್ದ ವಿಚಾರಣಾಧೀನ ಖೈದಿ ಇಂದು ಮೈಸೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಖೈದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಜೈಲು ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಜೈಲುಸಿಬ್ಬಂದಿಗಳ ಕುಮ್ಮಕ್ಕು ಇದೆ ಎನ್ನಲಾಗಿದೆ.
ಇದು ಪಕ್ಕಾ ಆಸ್ತಿ ವಿಚಾರಕ್ಕೆ ನಡೆದಿರುವ ಕೊಲೆ. ಯಾವಾಗಲೂ ಹೊರಗೆ ಕೊಲೆ, ಕೊಲೆಯತ್ನ ಮಾಡಿದರು ಜೈಲಿಗೆ ಹೋಗೊದು ಸಾಮಾನ್ಯ. ಆದರೆ ಇಲ್ಲಿ ಜೈಲಿನಲ್ಲಿಕೆ ಕೊಲೆಯತ್ನ ಮಾಡಲಾಗಿದೆ. ತೀರ್ವವಾಗಿ ಗಾಯಗೊಂಡವನು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ವ್ಯಕ್ತಿಯ ಹೆಸರು ಹೇಮಂತ್. ಕೊಡಗಿನಿ ಶ್ರೀಮಂಗಲ ಗ್ರಾಮದವನು. ಆಸ್ತಿ ವಿಚಾರಕ್ಕೆ ಸಂಬಂಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದ ಈತ 307 ಕೇಸ್ ಬುಕ್ ಮಾಡಿಸಿಕೊಂಡು ಕೊಡಗು ಜಿಲ್ಲಾ ಕಾರಾಗೃಹ ಸೇರಿದ್ದ.
ಅದೇ ಜೈಲಿನಲ್ಲಿ ಬೇರೊಂದು ಪ್ರಕರಣದಲ್ಲಿ ಜೈಲು ಸೇರಿದ್ದ ಸಂಬಂಧಿ ರಾಜೇಶ್ ಎನ್ನುವವನು ಈತನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಜೂನ್ 1ನೇ ತಾರೀಕು ಬೆಳಿಗ್ಗೆ 7.30ರ ಸುಮಾರಿಗೆ ಘಟನೆ ಜರುಗಿದ್ದು, ಹೇಮಂತ್‌ನ ಎದೆ, ಹೊಟ್ಟೆ, ಕಿಬ್ಬೊಟ್ಟೆ ಸೇರಿ ಸುಮಾರು 8 ಕಡೆಗಳಲ್ಲಿ ಚಾಕುವಿನಿಂದ ಇರಿಯಲಾಗಿದೆ. ತೀರ್ವ ರಕ್ತಸ್ರಾವದಲ್ಲಿದ್ದ ಹೇಮಂತ್‌ನನ್ನು ಕೊಡಗು ಜಿಲ್ಲಾಸ್ಪತ್ರೆ ಸೇರಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಂದೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದ್ದು. ಅಂದು ರಾತ್ರಿ ಹೇಮಂತ್‌ಗೆ ಶಸ್ತ್ರಚಿಕಿತ್ಸೆ ನಡೆಸಿದರಾದರೂ ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾನೆ.
ತೋಟದ ಜಾಗದ ವಿಚಾರವಾಗಿ ದಾಯಾದಿ ಗಣೇಶ ಎಂಬಾತ ಜಗಳ ತೆಗೆದಿದ್ದಲ್ಲದೆ ತಾನೇ ಬಟ್ಟೆ ಹರಿದುಕೊಂಡು, ಬ್ಲೇಡ್‌ನಿಂದ ಗಾಯ ಮಾಡಿಕೊಂಡು ಪೊಲೀಸರಿಗೆ ಸುಳ್ಳು ದೂರು ನೀಡಿದ್ದನು ಎನ್ನಲಾಗಿದೆ. ಪೊಲೀಸರು ಯಾವುದೇ ವಿಚಾರಣೆ ನಡೆಸದೆ ಹೇಮಂತ್ ಸೇರಿದಂತೆ ಕುಟುಂಬದ ನಾಲ್ವರನ್ನು ಸೆಕ್ಷನ್ 307 ಅಡಿಯಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಈ ಬಗ್ಗೆ ಚಿಕ್ಕಮ್ಮ ಅಶ್ವಿನಿ ಹಾಗೂ ಮಾವ ವೇಣುಗೋಪಾಲ್ ಮಾತನಾಡಿ, ಈ ಹಿಂದೆ ಆಸ್ತಿಗಾಗಿ ಇವರ ಅತ್ತೆಯನ್ನು ಕೊಲೆ ಮಾಡಿದ್ದ ಆರೋಪಿ ರಾಜೇಶ್ ಈಗಾಗಲೇ ಅದೇ ಜೈಲಿನಲ್ಲಿದ್ದನು. ಹಳೆಯ ವೈಷಮ್ಯವಿದ್ದರೂ ಜೈಲು ಅಧಿಕಾರಿಗಳು ಹೇಮನ್‌ನನ್ನು ರಾಜೇಶ್ ಇದ್ದ ಸೆಲ್‌ನ ಪಕ್ಕದಲ್ಲೇ ಇರಿಸಿದ್ದರು.
ಘಟನೆ ನಂತರವೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಆರಂಭದಲ್ಲಿ ಕೇವಲ ಸ್ಪೂನ್ ನಿಂದ ಸಣ್ಣ ಗಾಯವಾಗಿದೆ ಎಂದು ಪೊಲೀಸರು ಸುಳ್ಳು ಹೇಳಿದ್ದರು. ಆದರೆ ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ತೀವ್ರ ರಕ್ತಸ್ರಾವವಾಗಿ ಹೇಮಂತ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ. ಒಟ್ಟಾರೆ ಪೊಲೀಸರ ಲಂಚಾವತಾರ ಹಾಗೂ ಜೈಲು ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಈ ಕೊಲೆಗೆ ಕಾರಣವಾಗಿದ್ದು, ಮೃತನಿಗೆ ನ್ಯಾಯ ಸಿಗಬೇಕಾದರೆ ಈ ಘಟನೆಗೆ ಕಾರಣರಾದ ಆರೋಪಿಗಳು ಹಾಗೂ ಅಧಿಕಾರಿಗಳ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಾಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ