
ರಾಯಚೂರು (ಜೂ.01): ಪಕ್ಕದ ಆಂಧ್ರಪ್ರದೇಶದ ರಾಜ್ಯದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ವಡ್ಲ ಸತೀಶ್ (35) ಇವರ ಪುತ್ರ ಯುವನ್ ಚಂದ್ರ(5) ಮಂತ್ರಾಲಯ ನಿವಾಸಿ ರಾಘವೇಂದ್ರ (28), ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ನಿವಾಸಿ ವಡ್ಲ ಧನು (23) ಹಾಗೂ ಅನಂತಪುರದ ನಿವಾಸಿ ಸಂಧ್ಯಾ (22) ನೀರುಪಾಲಾದವರು ಎಂದು ಗುರುತಿಸಲಾಗಿದೆ.
ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಆಗಮಿಸಿದ್ದ ಇವರುಗಳು, ಶನಿವಾರ ಸಂಜೆ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಬಾಲಕ ಯುವನ್ ಚಂದ್ರ ನೀರಲ್ಲಿ ಮುಳುಗಲು ಪ್ರಾರಂಭಿಸಿದ್ದಾನೆ. ಈತನ ರಕ್ಷಣೆಗಾಗಿ ಉಳಿದ ಐವರು ನದಿಯ ಆಳಕ್ಕಿಳಿದಿದ್ದು ನಾಲ್ವರೂ ಕೊಚ್ಚಿಕೊಂಡು ಹೋಗಿದ್ದಾರೆ. ಇವರಲ್ಲಿ ಯುವತಿ ಅಪರ್ಣಾ ಅದೋನಿ ಎಂಬವರು ಪಾರಾಗಿ ತಡ ಸೇರಿ ಸ್ಥಳೀಯರು ಹಾಗೂ ಕುಟುಂಬದವರಿಗೆ ಘಟನೆ ಮಾಹಿತಿ ನೀಡಿದ್ದಾರೆ.
ದುರಂತದ ವಿಷಯ ತಿಳಿದ ಮಂತ್ರಾಲಯ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪರಿಣತ ಈಜುಗಾರರು ಕಂಟ್ರಿ ಬೋಟ್‌ಗಳನ್ನು ಬಳಸಿ ಶನಿವಾರ ರಾತ್ರಿ 8:30ರವರೆಗೆ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಧನು ಎಂಬ ಯುವಕನ ಮೃತದೇಹ ಸಿಕ್ಕಿದ್ದು, ಭಾನುವಾರ ಬೆಳಗ್ಗೆ ಯುವನ್ ಚಂದ್ರ ಹಾಗೂ ಆತನ ತಂದೆ ವಡ್ಲ ಸತೀಶ್ ಮೃತದೇಹಗಳು ಪತ್ತೆಯಾಗಿವೆ.
ಮೃತದೇಹಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು, ಸ್ಥಳೀಯ ಮೀನುಗಾರರೊಂದಿಗೆ ಉಳಿದ ಇಬ್ಬರಿಗೆ ಶೋಧಾಕಾರ್ಯವನ್ನು ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಆಂಧ್ರಪ್ರದೇಶ ಸಚವರಾದ ನಿಮ್ಮಲಾ ರಾಮನಾಯ್ಡು ಮತ್ತು ಟಿ.ಜಿ.ಭರತ್ ಹಾಗೂ ಎಮ್ಮಿಗನೂರು ಡಿವೈಎಸ್ಪಿ ಭಾರ್ಗವಿ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸತ್ಯನಾರಾಯಣ ಪೂಜೆ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣವಿದ್ದ ಮನೆ ಮಾಡಿದ್ದ ಮನೆಯಲ್ಲಿ ದುರ್ಘಟನೆಯಿಂದ ಸೂತಕದ ಛಾಯೆ ಆವರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ