
ಲವರ್ ಜೊತೆಗೂಡಿ ಅಮಾಯಕ ಭಾವಿ ಪತಿ, ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಕೊಲೆ ಮಾಡಿರುವ ಪಾತಕಿ ಸಿಯಾ ಗೋಯಲ್ (Siya Goyel) ಪ್ರಕರಣ ಅಗೆದಷ್ಟೂ ಬಗೆದಷ್ಟೂ ಕ್ರೂರತನದಿಂದಲೇ ಕೂಡಿದೆ. ಸದ್ಯ ಆಕೆ ಕಾನೂನಿನ ದೃಷ್ಟಿಯಲ್ಲಿ ಆರೋಪಿಯಷ್ಟೇ. ಯಾವುದೇ ಪ್ರಕರಣಗಳಲ್ಲಿ ಪೊಲೀಸರು ನಡೆಸುವ ತನಿಖೆ, ಆ ತನಿಖೆಯಲ್ಲಿನ ವೃತ್ತಿಪರತೆ, ನ್ಯೂನ್ಯತೆ ಎಲ್ಲವೂ ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿಬಿಡಬಹುದು. ಅದೇ ಇನ್ನೊಂದೆಡೆ, ಹನಿಮೂನ್ ಹಂತಕಿ ಎಂದೇ ಫೇಮಸ್ ಆಗಿರುವ ಸೋನಂ ರಘುವಂಶಿ, ಪೋರ್ಷೆ ಕಾರಿನಲ್ಲಿ ಹಲವರ ಜೀವ ಪಡೆದ ಅಪ್ರಾಪ್ತನ ತಂದೆಗೆ ಸುಲಭದಲ್ಲಿ ಸಿಕ್ಕ ಜಾಮೀನಂಥ ಪ್ರಕರಣಗಳು ಸಂತ್ರಸ್ತ ಕುಟುಂಬದ ನೋವನ್ನು ನೂರು ಪಟ್ಟು ಹೆಚ್ಚು ಮಾಡುತ್ತಿವೆ. ಇವೆಲ್ಲವುಗಳನ್ನೂ ಕಂಡು ಕೇತನ್ ಕುಟುಂಬ ಜರ್ಜರಿತವಾದಂತೆ ಕಾಣಿಸುತ್ತಿದೆ. ತಮ್ಮ ಮಗ ಕೇತನ್ (Ketan Murder Case)ನಲ್ಲಿಯೂ ಹೀಗೆಯೇ ಏನೋ ಆಗಬಹುದು, ತಮಗೆ ನ್ಯಾಯ ಸಿಗುವುದೇ ಇಲ್ಲವೇನೋ ಎನ್ನುವ ಆತಂಕದಲ್ಲಿರುವ ಕುಟುಂಬ ಇದೀಗ ಕೊನೆಯ ಅಸ್ತ್ರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದೆ.
ಪ್ರೀತಿಯ ಮಗನನ್ನು ಕಳೆದುಕೊಂಡು ಬದುಕು ಛಿದ್ರವಾಗಿರುವ ಕೇತನ್ ಅಮ್ಮ ಕಣ್ಣೀರಿಡುತ್ತಾ, ತಮಗೆ ನ್ಯಾಯ ಕೊಡಿಸುವಂತೆ ಪತ್ರದಲ್ಲಿ ಕೋರಿಕೊಂಡಿದ್ದಾರೆ. ಕೇತನ್ ಅಗರ್ವಾಲ್ ಅವರ ತಾಯಿ ರಾಖಿ ಅಗರ್ವಾಲ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಹತ್ಯೆಗೆ ಸಂಬಂಧಿಸಿದಂತೆ ಭಾವನಾತ್ಮಕ ಇ-ಮೇಲ್ ಕಳುಹಿಸಿದ್ದಾರೆ. ತಮ್ಮ ಮಗನಿಗೆ ನ್ಯಾಯ ಒದಗಿಸುವಂತೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದಾರೆ.
ಕೇತನ್ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ನನ್ನ ಮಗನಿಗೆ ನ್ಯಾಯ ಕೋರಿ ಹೀಗೊಂದು ಪತ್ರವನ್ನು ಪ್ರಧಾನಿಗೆ ಬರೆಯಬೇಕಾಗಿ ಬರುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ ಬೇರೆ ವಿಧಿಯಿಲ್ಲದೇ ಈ ಪತ್ರ ಬರೆಯುತ್ತಿರುವುದಾಗಿ ರಾಖಿ ತಿಳಿಸಿದ್ದಾರೆ. "ಪ್ರತಿಯೊಬ್ಬ ತಾಯಿಯಂತೆ, ಕೇತನ್ ಸುಂದರವಾದ ಜೀವನವನ್ನು ನಡೆಸುವುದು, ಮದುವೆಯಾಗುವುದು ಮತ್ತು ನಮ್ಮೊಂದಿಗೆ ವಯಸ್ಸಾಗುವುದನ್ನು ನೋಡಬೇಕೆಂದು ನಾವು ಕನಸು ಕಂಡಿದ್ದೆವು. ಆದರೆ, ಬದಲಾಗಿ, ನಾನು ನನ್ನ ಮಗುವಿನ ಅಂತ್ಯಕ್ರಿಯೆಯನ್ನು ಮಾಡಬೇಕಾಯಿತು" ಎಂದು ನೋವಿನಿಂದ ಬರೆದಿದ್ದಾರೆ ಅಮ್ಮ. ಕೇತನ್ ಹತ್ಯೆ ಅತ್ಯಂತ ಕ್ರೂರ ಎಂದು ಕರೆದಿರುವ ಅವರು, ಈ ಸಾವು ಕುಟುಂಬದಲ್ಲಿ ಭರಿಸಲಾಗದ ಶೂನ್ಯವನ್ನು ಸೃಷ್ಟಿಸಿದೆ ಎಂದಿದ್ದಾರೆ.
"ಕೇತನ್ ನಿಧನನಾದ ದಿನ, ನಮ್ಮ ಪ್ರಪಂಚ ಕೊನೆಗೊಂಡಿತು. ಆತನ ಕೋಣೆ, ಬಟ್ಟೆ ಮತ್ತು ಫೋಟೋ ಸೇರಿದಂತೆ ಆತನ ಕೋಣೆಯ ಪ್ರತಿಯೊಂದು ಮೂಲೆಯೂ ಆ ನಷ್ಟವನ್ನು ನೆನಪಿಸುತ್ತದೆ ಎಂದಿರುವ ಅಮ್ಮ ರಾಖಿ, ಕೊಲೆಯಾದ ಒಂದು ತಿಂಗಳೊಳಗೆ ನಿಧನರಾದ ಕೇತನ್‌ನ ಅಜ್ಜನ ಸಾವಿನ ಬಗ್ಗೆಯೂ ದುಃಖಿತ ತಾಯಿ ಉಲ್ಲೇಖಿಸಿದ್ದಾರೆ. ಕೇತನ್ ಅಜ್ಜ, ಕೇತನ್‌ನನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ತಮ್ಮ ಮೊಮ್ಮಗನ ಸಾವಿನಿಂದ ಜರ್ಜರಿತರಾಗಿ ಹೋಗಿದ್ದರು. ಕೆಲವು ವಾರಗಳಲ್ಲಿ ಎರಡು ತಲೆಮಾರುಗಳ ನಷ್ಟದಿಂದ ಕುಟುಂಬವು ದುಃಖಿತರಾಗುವಂತೆ ಮಾಡಿದೆ" ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.
"ನಾನು ಸಹಾನುಭೂತಿ ಅಥವಾ ಯಾವುದೇ ವಿಶೇಷ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿಲ್ಲ. ನಾನು ನ್ಯಾಯವನ್ನು ಮಾತ್ರ ಕೇಳುತ್ತಿದ್ದೇನೆ. ಪ್ರಧಾನಿ ಈ ಪ್ರಕರಣಕ್ಕೆ ಸರಿಯಾದ ಗಮನ ನೀಡಬೇಕು ಮತ್ತು ವಿಳಂಬವಿಲ್ಲದೆ ನ್ಯಾಯ ದೊರಕುವಂತೆ ನೋಡಿಕೊಳ್ಳಬೇಕು" ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. "ದಯವಿಟ್ಟು ಕೇತನ್‌ನನ್ನು ಮತ್ತೊಂದು ಪ್ರಕರಣವಾಗಲು ಬಿಡಬೇಡಿ. ಅವನು ಯಾರೊಬ್ಬರ ಮಗ, ಯಾರೊಬ್ಬರ ಮೊಮ್ಮಗ, ಯಾರೊಬ್ಬರ ಸಹೋದರ, ಆದರೆ ನನಗೆ, ಅವನು ನನ್ನ ಇಡೀ ಪ್ರಪಂಚವಾಗಿದ್ದನು" ಎಂದು ಪತ್ರದಲ್ಲಿ ಬರೆಯಲಾಗಿದೆ. "ನಾನು ಪ್ರತಿದಿನ ಚಿತ್ರವನ್ನು ನೋಡುತ್ತೇನೆ ಮತ್ತು ನನ್ನ ಮಗನಿಗೆ, 'ನಿಮ್ಮ ತಾಯಿ ನಿಮಗಾಗಿ ಹೋರಾಡುತ್ತಿದ್ದಾರೆ' ಎಂದು ಹೇಳುತ್ತೇನೆ." "ಮಗನೇ, ನಿನಗೆ ನ್ಯಾಯ ಸಿಕ್ಕಿದೆ" ಎಂದು ನಾನು ಹೇಳುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ."
ಕೇತನ್ ತಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಮತ್ತು ಕುಟುಂಬದ ನಷ್ಟದ ಬಗ್ಗೆ ದುಃಖ ವ್ಯಕ್ತಪಡಿಸಿದ ಕೆಲವೇ ದಿನಗಳ ನಂತರ ಈ ಮನವಿ ಬಂದಿದೆ. ಕೊಲೆ ಮತ್ತು ಅದರ ಸುತ್ತಲಿನ ಸಂದರ್ಭಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ