ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಅರೆಸ್ಟ್ ಮಾಡಲಾಗಿದೆ.ಒಂದುವರೆ ತಿಂಗಳಿನಿಂದ ಸಿಐಡಿ ಅಧಿಕಾರಿಗಳನ್ನೇ ಆಟ ಆಡಿಸುತ್ತ ತಲೆಮರಿಸಿಕೊಂಡಿದ್ದ ಫಸ್ಟ್ ರ‍್ಯಾಂಕ್ ಅಭ್ಯರ್ಥಿ ಇದೀಗ ಲಾಕ್ ಅಗಿದ್ದಾರೆ.
ಕಲಬುರಗಿ, (ಆಗಸ್ಟ್.27): 545 ಪಿಎಸ್‌ಐ ನೇಮಕಾತಿಯ ಪರೀಕ್ಷೆ ಹಗರಣ ತನಿಖೆ ಸಿಐಡಿ ತೀವ್ರಗೊಳಿಸಿದ್ದು, ಮಹಿಳಾ ಕೋಟಾದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದ ರಚನಾ ಎಂಬ ಅಭ್ಯರ್ಥಿಯನ್ನು ಬಂಧಿಸಿದ್ದಾರೆ.
ಪಿಎಸ್‌ಐ ಮಹಿಳಾ ಕೋಟಾದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ರಚನಾ ಬಂಧಿತ ಆರೋಪಿಯಾಗಿದ್ದು, ವಿಶೇಷವೆನಂದರೆ ಪಿಎಸ್‌ಐ ಪರೀಕ್ಷಾ ಅಕ್ರಮ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ರಚನಾ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಮೂಲದವಳಾಗಿದ್ದು, ಪಿಎಸ್‌ಐ ಹಗರಣ ಹೊರ ಬಂದಾಗಿನಿಂದ ನಾಪತ್ತೆಯಾಗಿದ್ದರು. ಇದೀಗ ಮಹಾರಾಷ್ಟ್ರದ ಗಡಿಯಲ್ಲಿ ರಚನಾಳನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
PSI Recruitment Scam: ಪಿಎಸ್‌ಐ ಹಗರಣ ಲೋಕಾಯುಕ್ತಕ್ಕೆ?, ಭ್ರಷ್ಟರಿಗೆ ನಡುಕ
ಬೆಂಗಳೂರು ಸಿಐಡಿ ಅಧಿಕಾರಿಗಳು ಎಷ್ಟೇ ಹುಡುಕಾಟ ನಡೆಸಿದ್ದರೂ ಹಾಗೂ ವ್ಯಾಪಕ ಕಾರ್ಯಾಚರಣೆ ಕೈಗೊಂಡಿದ್ದರೂ ರಚನಾ ಕೈಗೆ ಸಿಕ್ಕಿರಲಿಲ್ಲ. ಮಹಾರಾಷ್ಟ್ರ ಗಡಿಯಲ್ಲಿ ತಲೆ ಮರೆಸಿಕೊಂಡು ಓಡಾಟ ಮಾಡುತ್ತಿರುವುದನ್ನು ಅವಲೋಕಿಸಿ ಕೊನೆಗೂ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ಹಿರೋಳ್ಳಿ ಚೆಕ್‌ಪೋಸ್ಟ್ ಬಳಿ ಜಾಲ ಬೀಸಿ ರಚನಾಳನ್ನು ಖೆಡ್ಡಾಗೆ ಬೀಳಿಸಲಾಗಿದೆ. ಕಳೆದ ಒಂದುವರೆ ತಿಂಗಳಿಂದ ಕಲಬುರಗಿ ಸಿಐಡಿ ಅಧಿಕಾರಿಗಳಿಂದ ಫಾಲೋ ಮಾಡುತ್ತಿದ್ದರು. ಕೊನೆಗೆ ಕಲಬುರಗಿ ಸಿಐಡಿ ಅಧಿಕಾರಿಗಳು ಕೊನೆಗೆ ಖತರ್ನಾಕ ಲೇಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಐಡಿ ತಂಡ ರಚನಾಳನ್ನು ಬಂಧಿಸಿ ಕಲಬುರಗಿಗೆ ಕರೆ ತಂದಿದ್ದು, ಶನಿವಾರ ಕಲಬುರಗಿ 5ನೇ JMFC ಕೋರ್ಟ್ ನ್ಯಾಯಾಧೀಶರ ಮುಂದೆ ರಚನಾಳನ್ನು ಹಾಜರುಪಡಿಸಲಾಗಿದೆ.
ಇನ್ನು ಹೆಚ್ಚಿನ ವಿಚಾರಣೆಗಾಗಿ ರಚನಾ ಕರೆದ್ಯೊಯಲು ಸಿಐಡಿ ತಂಡ ಬೆಂಗಳೂರಿನಿಂದ ಕಲಬುರಗಿಗೆ ಬಂದಿದ್ದು, ಎಲ್ಲಾ ಕಾನೂನ ಪ್ರಕ್ರಿಯೆಗಳು ಮುಗಿದ ಬಳಿಕ ರಚಾಳನ್ನ ಬೆಂಗಳೂರಿಗೆ ಕರೆದುಕೊಂಡು ಹೋಗಲಿದ್ದಾರೆ.