ಸಹೋದ್ಯೋಗಿ ಪತ್ನಿ ಮೇಲೆ ಅತ್ಯಾಚಾರ ಆರೋಪ: CISF ಕಾನ್ಸ್‌ಟೇಬಲ್ಸ್ ವಜಾ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

By Suvarna News  |  First Published Jun 22, 2022, 10:02 PM IST

ಆರೋಪಿಗಳ ವಿರುದ್ಧದ ಆರೋಪ ಸಾಬೀತುಪಡಿಸಲು ಸಾಕಷ್ಟು ದಾಖಲೆಗಳಿವೆ. ಶಿಸ್ತುಪಾಲನೆ ಸಮಿತಿಯು ತನ್ನ ಮುಂದಿರುವ ದಾಖಲೆ ಪರಿಗಣಿಸಿಯೇ ಆರೋಪಿಗಳನ್ನು ಸೇವೆಯಿಂದ ವಜಾ ಮಾಡಿದೆ


ಬೆಂಗಳೂರು (ಜೂ. 22): ಸಹೋದ್ಯೋಗಿ ಪೇದೆಯ ಪತ್ನಿಯನ್ನು ಬ್ಲ್ಯಾಕ್ಮೇಲ್ ಮಾಡಿ, ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಎಂಟು ಪೇದೆಗಳನ್ನು ಸೇವೆಯಿಂದ ವಜಾಗೊಳಿಸಿರುವ ಶಿಸ್ತುಪಾಲನಾ ಸಮಿತಿಯ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ. ವಿಕಾಸ್ ವರ್ಮಾ ಸೇರಿದಂತೆ ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಣ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂಟು ಮಂದಿ ಆರೋಪಿ ಪೇದೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠ, ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶ ಸೂಕ್ತವಾಗಿದೆ ಎಂದು ತೀರ್ಪು ನೀಡಿದೆ.

ಆರೋಪಿಗಳ ವಿರುದ್ಧದ ಆರೋಪ ಸಾಬೀತುಪಡಿಸಲು ಸಾಕಷ್ಟು ದಾಖಲೆಗಳಿವೆ. ಶಿಸ್ತುಪಾಲನೆ ಸಮಿತಿಯು ತನ್ನ ಮುಂದಿರುವ ದಾಖಲೆ ಪರಿಗಣಿಸಿಯೇ ಆರೋಪಿಗಳನ್ನು ಸೇವೆಯಿಂದ ವಜಾ ಮಾಡಿದೆ. ಈ ಘಟನೆ ಅಪರೂಪದಲ್ಲಿ ಅಪರೂಪದ್ದಾಗಿದೆ ಹಾಗೂ ಸಿಐಎಸ್‌ಎಫ್ ಪಡೆಯ ಶಿಸ್ತು ಮತ್ತು ಸದಾಚಾರಕ್ಕೆ ವಿರುದ್ಧವಾಗಿದೆ. ಆದ್ದರಿಂದ ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶ ಸಮಂಜಸವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಇಲ್ಲವಾಗಿದೆ ಎಂದು ವಿಭಾಗೀಯ ಪೀಠ ತನ್ನ ತೀರ್ಪಿನಲ್ಲಿ ನುಡಿದಿದೆ.

Tap to resize

Latest Videos

ಪ್ರಕರಣವೇನು?: ಪ್ರಕರಣದ ಎಂಟು ಆರೋಪಿಗಳು ಮತ್ತು ದೂರುದಾರೆಯ (ಸಂತ್ರಸ್ತ ಮಹಿಳೆ) ಪತಿ ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಣ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸಹೋದ್ಯೋಗಿಗಳಾಗಿದ್ದರು. ಅವರು ಸರ್ಕಾರಿ ಕ್ವಾಟರ್ಸ್‌ನಲ್ಲಿ ನೆಲೆಸಿದ್ದರು. 2015ರ ಮಾರ್ಚ್-ಜೂನ್ ಅವಧಿಯಲ್ಲಿ ಸಂತ್ರಸ್ತೆ ಮಹಿಳೆಯನ್ನು ಮೊದಲು ವಿಕಾಸ್ ವರ್ಮಾ ಪರಿಚಯಿಸಿಕೊಂಡಿದ್ದ.

ಸಂತ್ರಸ್ತೆ ಪತಿ 2015ರಲ್ಲಿ ದೂರದ ಸ್ಥಳಕ್ಕೆ ತೆರಳಿರುವುದನ್ನು ತಿಳಿದು ತಡರಾತ್ರಿ ಕರೆ ಮಾಡಿ ಮಾತನಾಡುತ್ತಿದ್ದ ವಿಕಾಸ್ ವರ್ಮಾ, ಆರಂಭದಲ್ಲಿ ಆರೋಗ್ಯ ಮತ್ತು ಕೌಟುಂಬಿಕ ವಿಚಾರಗಳನ್ನು ಚರ್ಚಿಸುತ್ತಿದ್ದ. ಬಳಿಕ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ದೈಹಿಕ ಸಂಬಂಧ ಹೊಂದುವ ಇರಾದೆ ವ್ಯಕ್ತಪಡಿಸಿದ್ದ. ಒಂದು ದಿನ ರಾತ್ರಿ ಸಂತ್ರಸ್ತೆ ಮನೆಗೆ ಹೋಗಿ ಕರೆ ಮಾಡಿದ್ದ ವಿಕಾಸ್ ವರ್ಮಾ, ತಾನು ನಿಮ್ಮ ಮನೆ ಹೊರಗಿದ್ದೇನೆ. ಲೈಂಗಿಕ ಸಂಪರ್ಕ ಬೆಳೆಸದಿದ್ದರೆ ತಮ್ಮಿಬ್ಬರ ನಡುವಿನ ಮೊಬೈಲ್ ಮಾತುಕತೆಯನ್ನು ಪತಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದ.

ಇದನ್ನೂ ಓದಿ: ಮಾವಿನ ಹಣ್ಣಿನ ಆಸೆ ತೋರಿಸಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ!

ನಂತರ ಬಲವಂತವಾಗಿ ಮನೆ ಬಾಗಿಲು ತೆರೆದಿದ್ದ ವಿಕಾಸ್ ವರ್ಮಾ, ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದ. ಆ ನಂತರವೂ  ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಆ ನಂತರ ವಿಕಾಸ್ ವರ್ಮಾ ಇತರೆ ಸಹೋದ್ಯೋಗಿಗಳಾದ ಅಂಕುಶ್ ಪಿನಿಯಾ, ಪಿಂಕು ಕುಮಾರ್, ವಿ.ಕೆ ತಿವಾರಿ, ಚಂದನ್ ಕುಮಾರ್, ರಾಹುಲ್ ದಿವಾಕರ್, ಜಿತೇಂದ್ರ ಸಿಂಗ್ ಸೇರಿದಂತೆ ಎಂಟು ಆರೋಪಿಗಳು ಸಂತ್ರಸ್ತೆಗೆ ಕರೆ ಮಾಡಿ ವಿಕಾಸ್ ವರ್ಮಾ ಜೊತೆಗಿನ ಅಕ್ರಮ ಸಂಬಂಧದ ವಿಚಾರ ನಮಗೆ ತಿಳಿದಿದೆ. ತಮ್ಮೊಂದಿಗೂ ಲೈಂಗಿಕ ಸಂಪರ್ಕ ಬೆಳೆಸದಿದ್ದರೆ ಎಲ್ಲಾ ವಿಚಾರವನ್ನು ಪತಿಗೆ ಹೇಳುವುದಾಗಿ ಬೆದರಿಕೆ ಹಾಕಿದ್ದರು.

ಇದನ್ನೂ ಓದಿ: ಎರಡೂವರೆ ಲಕ್ಷ ಸಾಲಕ್ಕಾಗಿ ಪತ್ನಿ ಕೊಂದ ಪತಿ: ಮಗಳ ಮೇಲೂ ಹಲ್ಲೆ!

ಬಳಿಕ ಒಬ್ಬರಾದ ಮೇಲೆ ಒಬ್ಬರು ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದರು. 2015ರ ಜೂನ್‌ 28ರಂದು ಸಂತ್ರಸ್ತೆಯ ಪತಿಗೆ ಈ ವಿಚಾರ ತಿಳಿಯಿತು. ಇಡೀ ಘಟನೆ ಕುರಿತು 2015ರ ಜುಲೈ 2 ರಂದು ಸಂತ್ರಸ್ತೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ಶಿಸ್ತುಪಾಲನಾ ಸಮಿತಿಯು  ಮತ್ತು ಮೇಲ್ಮನವಿ ಪ್ರಾಧಿಕಾರವು ಎಂಟು ಪೇದೆಗಳನ್ನು ಸೇವೆಯಿಂದ ವಜಾಗೊಳಿಸಿ 2015ರ ಆಗಸ್ಟ್ 2 ರಂದು ಆದೇಶಿಸಿತ್ತು. ಈ ಆದೇಶ  ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಜಾ ಆದೇಶವನ್ನು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ 2017ರ ಆಗಸ್ಟ್‌  8 ರಂದು ಎತ್ತಿಹಿಡಿದಿತ್ತು. ಹಾಗಾಗಿ, ಆರೋಪಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

click me!