70ನೇ ವಯಸ್ಸಲ್ಲಿ ಮತ್ತೆ ಮದುವೆಯಾಗಲು ಮುಂದಾದ ವೈದ್ಯ: ಹನಿಟ್ರ್ಯಾಪ್‌ನಲ್ಲಿ 1 ಕೋಟಿ 80 ಲಕ್ಷ ಧೋಖಾ

By Suvarna NewsFirst Published Jun 22, 2022, 8:33 PM IST
Highlights

ಮದುವೆಯ ಬಗ್ಗೆ ವೈದ್ಯನೊಂದಿಗೆ ಮಾತನಾಡುತ್ತಿದ್ದ ಮಹಿಳೆ ವೈದ್ಯನಿಂದ ಬರೋಬ್ಬರಿ ಒಂದು ಕೋಟಿ 80 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾಳೆ. 

ಲಕ್ನೋ (ಜೂ. 22): ಲಕ್ನೋದ ಹೃದಯ ತಜ್ಞ ವೈದ್ಯರೊಬ್ಬರು ಎರಡನೇ ಮದುವೆಯ ಕನಸು ಕಂಡಿದ್ದು ಈಗ ದುಬಾರಿಯಾಗಿ ಪರಿಣಮಿಸಿದೆ. ಮದುವೆಯ ಬಗ್ಗೆ ವೈದ್ಯನೊಂದಿಗೆ ಮಾತನಾಡುತ್ತಿದ್ದ ಮಹಿಳೆ ವೈದ್ಯನಿಂದ ಬರೋಬ್ಬರಿ ಒಂದು ಕೋಟಿ 80 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾಳೆ. ನಂತರ ಫೋನ್ ಆಫ್ ಮಾಡಿದ್ದಾಳೆ. ತಾನು ವಂಚನೆಗೊಳಗಾಗಿರುವುದು ತಿಳಿದ ವೈದ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಕ್ನೋದ ನಿವಾಸಿ  70 ವರ್ಷದ ಹೃದಯ ತಜ್ಞ ವೈದ್ಯ ಮೊರಾದಾಬಾದ್‌ನ ದೊಡ್ಡ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  

ಮೂರು ವರ್ಷಗಳ ಹಿಂದೆ ಅವರ ಪತ್ನಿ ತೀರಿಕೊಂಡಿದ್ದು ವೈದ್ಯರಿಗೆ ಒಂಟಿತನ ಕಾಡುತ್ತಿತ್ತು. ಹೀಗಾಗಿ ಮತ್ತೆ ಮದುವೆಯಾಗಲು ಯೋಚಿಸಿದ್ದರು. ಇದಕ್ಕಾಗಿ ವೈದ್ಯರು ಜನವರಿಯಲ್ಲಿ ಮದುವೆಯ ಜಾಹೀರಾತೊಂದನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಮದುವೆ ಜಾಹೀರಾತನ್ನು ಮುದ್ರಿಸಿದ ಬಳಿಕ ಹಲವು ಪ್ರಸ್ತಾವನೆಗಳು ಬಂದಿವೆ ಎಂದು ವೈದ್ಯರು ದೂರಿನಲ್ಲಿ ತಿಳಿಸಿದ್ದಾರೆ. 

ಆದರೆ ಅವರು 40 ವರ್ಷದ ಕ್ರಿಶಾ ಶರ್ಮಾ ಅವರನ್ನು ಇಷ್ಟಪಟ್ಟಿದ್ದಾರೆ. ಈ ಬಳಿಕ ಕ್ರಿಶಾ ಜತೆಗೆ ವಾಟ್ಸಾಪ್‌ ಹಾಗೂ ಕರೆಗಳ ಮೂಲಕ ಮಾತುಕತೆ ಪ್ರಾರಂಭವಾಗಿದೆ. ತನ್ನನ್ನು ತಾನು ಮೆರೈನ್ ಇಂಜಿನಿಯರ್ ಎಂದು ಬಣ್ಣಿಸಿದ ಕ್ರಿಶಾ, ತಾನು ವಿಚ್ಛೇದಿತ ಮಹಿಳೆ ಮತ್ತು ಯುಎಸ್‌ಎಯ ಫ್ಲೋರಿಡಾದಲ್ಲಿ ವಾಸಿಸುತ್ತಿದ್ದೇನೆ ಎಂದು ನಂಬಿಸಿದ್ದಾರೆ.

ಇದನ್ನೂ ಓದಿ: ಬೆಳದಿಂಗಳ ಬಾಲೆ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರು ನಿವಾಸಿ

ಪ್ರಸ್ತುತ ಅಮೆರಿಕದಲ್ಲಿ ದೊಡ್ಡ ಸರಕು ಸಾಗಣೆ ಹಡಗಿನಲ್ಲಿ ಇಂಜಿನಿಯರ್ ಕೆಲಸದಲ್ಲಿದ್ದೇನೆ ಎಂದು ಕ್ರಿಶಾ ವೈದ್ಯರಿಗೆ ತಿಳಿಸಿದ್ದಾಳೆ. ಅಲ್ಲದೇ ಸುಮಾರು ಒಂದೂವರೆ ತಿಂಗಳ ನಂತರ ಮುಂಬೈ ಮೂಲಕ ಲಕ್ನೋಗೆ ಬರುವುದಾಗಿ ಹೇಳಿದ್ದಾಳೆ.  ಈಗ ಕೆಲಸ ಬಿಟ್ಟು ವ್ಯಾಪಾರ ಮಾಡುವ ಯೋಚನೆಯಲ್ಲಿದ್ದೇನೆ ಎಂದು ಕ್ರಿಶಾ ವೈದ್ಯರಿಗೆ ತಿಳಿಸಿದ್ದಾರೆ. ಅಲ್ಲದೇ ಕೆಲಸದ ಸಮಯದಲ್ಲಿ, ಆಫ್ರಿಕಾದಿಂದ ಸಾಕಷ್ಟು ಚಿನ್ನವನ್ನು ಖರೀದಿಸಿದ್ದು ಅದನ್ನು  ಭಾರತಕ್ಕೆ ಕಳುಹಿಸಲು ಬಯಸುತ್ತೆನೆ ಎಂದು ತಿಳಿಸಿದ್ದಾಳೆ.  ಅಷ್ಟೂ ಚಿನ್ನವನ್ನು ತನ್ನೊಂದಿಗೆ ತಂದರೆ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದ್ದಾಳೆ. 

ಹಣ ಪಾವತಿ ನಂತರ ಮಹಿಳೆಯ ಫೋನ್ ಸ್ವಿಚ್ ಆಫ್: ರಾಯಲ್ ಸೆಕ್ಯುರಿಟಿ ಕಂಪನಿಯಿಂದ ಚಿನ್ನ ಕಳುಹಿಸುತ್ತಿದ್ದು ಚಿನ್ನವನ್ನು ಸ್ವೀಕರಿಸುವಂತೆ ವೈದ್ಯರಿಗೆ ಕ್ರಿಶಾ ತಿಳಿಸಿದ್ದಾಳೆ. ಬಳಿಕ ಕೊರಿಯರ್ ಕಂಪನಿಯಿಂದ ವೈದ್ಯರಿಗೆ ಕರೆ ಬಂದಿದ್ದು, ಕಸ್ಟಮ್ ಡ್ಯೂಟಿ ಮತ್ತು ಅನುಮತಿ ಶುಲ್ಕದ ಹೆಸರಿನಲ್ಲಿ ವೈದ್ಯರಿಂದ 1 ಕೋಟಿ 80 ಲಕ್ಷ ರೂ ಕೇಳಿದ್ದಾರೆ. ಇದನ್ನೂ ನಂಬಿ ವೈದ್ಯರೂ ಅವರಿಗೆ ಹಣ ಕಳುಹಿಸಿದ್ದಾರೆ. 

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ನಲ್ವತ್ತೈದೇ ದಿನಕ್ಕೆ ಚಿನ್ನಾಭರಣ ಕದ್ದು ಮಾಜಿ ಪ್ರಿಯಕರನೊಂದಿಗೆ ಪತ್ನಿ ಪರಾರಿ

 ಬಳಿಕ ಕ್ರಿಶಾಗೆ ಕರೆ ಮಾಡಿದಾಗ ಅವರ ನಂಬರ್ ಸ್ವಿಚ್ ಆಫ್ ಆಗಿದ್ದು, ವೈದ್ಯರಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಅವರು ಲಕ್ನೋ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಎಡಿಸಿಪಿ ರಾಘವೇಂದ್ರ ಮಿಶ್ರಾ ಪ್ರಕಾರ, ವೈದ್ಯರ ದೂರಿನ ಮೇರೆಗೆ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.

click me!