Karnataka Election 2023: ಯಾದಗಿರಿಯ ಕೆಂಭಾವಿ, ಸುರಪುರದಲ್ಲಿ ಸೆಕ್ಷನ್‌ 144 ಜಾರಿ: 2 ದಿನ ಹೊರಬರುವಂತಿಲ್ಲ

By Sathish Kumar KH  |  First Published May 10, 2023, 10:23 PM IST

ಯಾದಗಿರಿ ಜಿಲ್ಲೆಯ ಕೆಂಭಾವಿ ಮತ್ತು ಸುರಪುರ ಪಟ್ಟಣಗಳಲ್ಲಿ ಕಾಂಗ್ರಸ್‌- ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, 144 ಸೆಕ್ಷನ್‌ ಜಾರಿ ಮಾಡಲಾಗಿದೆ.


ಯಾದಗಿರಿ (ಮೇ 10): ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಯಾದಗಿರಿ ಜಿಲ್ಲೆಯಲ್ಲಿ ಮತದಾನ ಪೂರ್ಣಗೊಳ್ಳುವ ವೇಳೆ ಮತದಾನದ ವಿಚಾರವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಗಲಾಟೆ ನಡೆದಿದ್ದು, ಕೆಂಭಾವಿ ಮತ್ತು ಸುರಪುರ ಪಟ್ಟಣಗಳಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ 2 ದಿನಗಳ ಕಾಲ ಸೆಕ್ಷನ್‌ 144 ಜಾರಿ ಮಾಡಿದ್ದಾರೆ. ಮುಂದಿನ ಎರಡು ದಿನಗಳು ಯಾರೊಬ್ಬರೂ ಗುಂಪಾಗಿ ಓಡಾಡುವಂತಿಲ್ಲ. 

ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆ ಜಿಲ್ಲೆಯ ಕೆಂಭಾವಿ ಮತ್ತು ಸುರಪುರ ಪಟ್ಟಣಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ಗಲಾಟೆಯಲ್ಲಿ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ 2 ದಿನಗಳ ಕಾಲ ಸೆಕ್ಷನ್‌ 144 (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ. 

Tap to resize

Latest Videos

undefined

Karnataka Election 2023: ಬೆಂಗಳೂರಲ್ಲಿ ಈ ಬಾರಿಯೂ ನೀರಸ ಮತದಾನ

ಕಾಂಗ್ರೆಸ್‌- ಬಿಜೆಪಿ ಕಾರ್ಯಕರ್ತರ ಮಾರಾಮಾರಿ:  ಯಾದಗಿರಿ ಜಿಲ್ಲೆಯ ಶಹಾಪುರ‌ ಕ್ಷೇತ್ರದ ಕೆಂಭಾವಿಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿದ ಘಟನೆ ನಡೆದಿದೆ. ಬಿಜೆಪಿ ಮುಖಂಡರಿಂದ ಕಾಂಗ್ರೆಸ್ ಮುಖಂಡರ‌‌ ಮೇಲೆ‌ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಬಿಜೆಪಿಯ ಕಾರ್ಯಕರ್ತರು ಮತ್ತು ಮುಖಂಡರು ಕೈಯಲ್ಲಿ ದೊಣ್ಣೆಗಳನ್ನ ಹಿಡಿದುಕೊಂಡು‌ ಬಂದು ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಮೂರು ಜನ ಕಾಂಗ್ರೆಸ್ ಮುಖಂಡರಿಗೆ‌ ಗಾಯವಾಗಿದೆ. ಆದಿತ್ಯ ಪಾಟೀಲ್, ರಾಘವೇಂದ್ರ ಹಾಗೂ ವಿನೋಧ ಎಂಬುವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಗಲಾಟೆ ನಡೆಯಲು ಕಾರಣವೇನು?  ಕೆಂಭಾವಿಯಲ್ಲಿ ಮತಗಟ್ಟೆ ಸಮೀಪದಲ್ಲೇ ಮತದಾರರನ್ನ ಬಿಜೆಪಿ ಮತ ಹಾಕುವಂತೆ ಹೇಳಿದ್ದಾರೆ. ಇದೇ ವಿಚಾರವನ್ನು ಕಾಂಗ್ರೆಸ್ ಮುಖಂಡರು ಪ್ರಶ್ನೆ ಮಾಡಿದ್ದಕ್ಕೆ‌ ಹಲ್ಲೆ‌ ನಡೆದಿದೆ ಎಂದು ಆರೋಪಿಸಿದ್ದಾರೆ. ಶಹಾಪುರ‌ ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ ಬೆಂಬಲಿಗರಿಂದ, ಶಹಾಪುರ‌ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ಬೆಂಬಲಿಗರ‌ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ ಮುಖಂಡರ ಮೇಲೆ ಹಲ್ಲೆ ಮಾಡಿದ ನಂತರ ಬಿಜೆಪಿ ಕಾರ್ಯಕರ್ತರು ಕೈಯಲ್ಲಿ ‌ದೊಣ್ಣೆಗಳನ್ನ ಹಿಡಿದು ಜೋರಾಗಿ ಕೂಗು ಹಾಕಿದ್ದಾರೆ. ಸ್ಥಳಕ್ಕೆ ಪ್ಯಾರಾ ಮಿಲಿಟರಿ ಫೋರ್ಸ್ ಸ್ಥಳಕ್ಕೆ ಬಂದು ವಾತಾವರಣ ತಿಳಿಗೊಳಿಸಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಂಗಳೂರು: ಕೈ - ಕಮಲ ಕಾರ್ಯಕರ್ತರ ನಡುವೆ ಘರ್ಷಣೆ: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರು ಧ್ವಂಸ

ಎರಡು ದಿನ ನಿಷೇಧಾಜ್ಞೆ ಜಾರಿ:  ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ಮಾಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಎಸ್ಪಿ ವೇದಮೂರ್ತಿ ಅವರು ಇಂದು ಮತ್ತು ನಾಳೆ ಕೆಂಭಾವಿ ಹಾಗೂ ಸುರಪುರ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶಿಸಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ಮೇ 12ರ ಬೆಳಿಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಈ ಎರಡು ದಿನಗಳ ಕಾಲ ಪೊಲೀಸರು ರಾತ್ರಿ ಪಟ್ರೋಲಿಂಗ್ ಹಾಗೂ ಗಸ್ತು ಪಡೆ ಠಿಕಾಣಿ ಹೂಡಲಿದೆ. ಇನ್ನು ನಿಷೇಧಾಜ್ಞೆ ಜಾರಿ ಪಟ್ಟಣಗಳಲ್ಲಿ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಎಲ್ಲರೂ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.

click me!