
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಅ.15): ಅದು ಕಾಂಗ್ರೆಸ್ ಶಾಸಕರೊಬ್ಬರ ನಿರ್ವಹಣೆಯಲ್ಲಿದ್ದ ಕಲ್ಲು ಕ್ರಷರ್ ಅಲ್ಲಿ ಕಳೆದ ರಾತ್ರಿ ಬ್ಲಾಸ್ಟಿಂಗ್ ವೇಳೆ ನಡೆದ ಅವಘಡದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಾಯವಾಗಿದೆ, ಆದರೆ ಇಡೀ ಘಟನೆಯನ್ನು ಅಪಘಾತ ಎಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕಲು ಹೋದ ಕಾರಣ ಇಡಿ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟು ದೊಡ್ಡ ಹೈಡ್ರಾಮ ಸೃಷ್ಟಿಮಾಡಿದೆ.
ಭೂಗರ್ಭವೇ ಕಾಣುವಂತೆ ಬೆಟ್ಟದಲ್ಲಿ ನಡೆದಿರುವ ಕಲ್ಲುಗಣಿಗಾರಿಕೆ, ಅದರಲ್ಲಿ ಪರಿಶೀಲನೆ ನಡೆಸುತ್ತಿರುವ ಎಫ್ಎಸ್ಎಲ್ ತಂಡ, ಐಜಿಪಿ ಹಾಗೂ ಎಸ್ಪಿ ಹಿರಿಯ ಅಧಿಕಾರಿಗಳ ತಂಡ, ಮತ್ತೊಂದೆಡೆ ಸಚಿವ ಮುನಿರತ್ನ ಅವರ ಕಾರಿಗೆ ಅಡ್ಡಗಟ್ಟಿ ನಡೆಯುತ್ತಿರುವ ಪ್ರತಿಭಟನೆ, ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗರಂ ಆದ ಎಸ್ಪಿ ದೇವರಾಜ್ ಪ್ರತಿಭಟನೆ ಮಾಡಿದವನಿಗೆ ಕೈನಲ್ಲೇ ಬಾರಿಸುತ್ತಿರುವ ದೃಶ್ಯಗಳು ಇದೆಲ್ಲಾ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಟೇಕಲ್ ಬಳಿಯ ಕೊಮ್ಮನಹಳ್ಳಿ ಬಳಿ.
Kolar: ಹಿಜಾಬ್ ತೀರ್ಪು ಕುರಿತು ಹಿರಿಯೂರ ಕ್ಷೇತ್ರದ ಶಾಸಕಿ ಪೂರ್ಣಿಮಾ ಹೇಳಿದ್ದೇನು?
ಹೌದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಕೊಮ್ಮನಹಳ್ಳಿ ಗ್ರಾಮದ ಬಳಿ ಕಳೆದ ರಾತ್ರಿ ಮಂಜುನಾಥ್ ಎಂಬುವರಿಗೆ ಸೇರಿದ ಕಲ್ಲಿಕ್ವಾರಿ ಸಂಖ್ಯೆ 1022 ನಲ್ಲಿ ಬ್ಲಾಸ್ಟಿಂಗ್ ವೇಳೆ ಬಿಹಾರ ಮೂಲದ ರಾಕೇಶ್ ಸಾಣೆ ಎಂಬಾತ ಮೃತಪಟ್ಟಿದ್ದರೆ, ಓರ್ವನಿಗೆ ಗಂಭೀರ ಗಾಯವಾಗಿದೆ. ಕ್ವಾರಿ ಮಾಲೀಕರು ಹಾಗೂ ಸ್ಥಳೀಯ ಕೆಲವು ಪ್ರಭಾವಿಗಳು ಪ್ರಕರಣವನ್ನು ಅಪಘಾತ ಎಂದು ತಿರುಚಿ ಲಾರಿ ಹರಿದು ಸಾವನ್ನಪ್ಪಿದ್ದಾನೆ ಎಂದು ಮಾಸ್ತಿ ಪೊಲೀಸರಿಗೆ ದೂರು ಕೊಟ್ಟು, ರಾತ್ರೋ ರಾತ್ರಿ ಶವದ ಮರಣೋತ್ತರ ಪರೀಕ್ಷೆ ಮುಗಿಸಿ ಪ್ರಕರಣವನ್ನು ಮುಗಿಸಲು ಪ್ರಯತ್ನಿಸಿದ್ದಾರೆ.
ಆದರೆ ಬೆಳಿಗ್ಗೆ ವೇಳೆಗೆ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ ಪರಿಣಾಮ ಇಲ್ಲಿ ಏನೋ ಮುಚ್ಚಿಡಲಾಗುತ್ತಿದೆ ಎಂದು ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಶವವನ್ನು ಪರಿಶೀಲನೆ ನಡೆಸಿದಾಗ ಶವದ ಮೇಲೆ ಸುಟ್ಟಗಾಯಗಳಾಗಿರುವುದು ಕಂಡು ಬಂದಿದೆ. ಪರಿಣಾಮ ಘಟನೆ ನಡೆದ ಕೊಮ್ಮನಹಳ್ಳಿಯ ಮಂಜುನಾಥ್ ಅವರ ಕ್ವಾರಿ ಇದ್ದ ಸ್ಥಳಕ್ಕೆ ಎಸ್ಪಿ ದೇವರಾಜ್, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಎಫ್ಎಸ್ಎಲ್ ತಂಡ, ಬಾಂಬ್ ಸ್ವಾಡ್, ಹಾಗೂ ಶ್ವಾನ ದಳದ ತಂಡ ಕೂಡಾ ಪರಿಶೀಲನೆ ನಡೆಸಿತು.
ಈ ವೇಳೆ ಮಾತನಾಡಿದ ಐಜಿ ಚಂದ್ರಶೇಖರ್ ಪ್ರಕರಣವನ್ನು ತಿರುಚುವ ಪ್ರಯತ್ನ ನಡೆದಿದೆ. ಹಾಗಾಗಿ ಇದರಲ್ಲಿ ಪ್ರಕರಣವನ್ನು ಸಂಪೂರ್ಣವಾಗಿ ಕೂಲಂಕುಶ ತನಿಖೆ ಮಾಡಲು ಸೂಚನೆ ನೀಡಿದ್ದೇನೆ, ಕಲ್ಲು ಕ್ವಾರಿ ಮಾಲೀಕ, ಬ್ಲಾಸ್ಟಿಂಗ್ ಪರವಾನಿಗೆ ಹೊಂದಿರುವವರು, ಗಾಯಗೊಂಡಿರುವವರು ಎಲ್ಲರ ಹೇಳಿಕೆ ಪಡೆದ ನಂತರ ಪ್ರಕರಣದ ನಿಜಾಂಶ ತಿಳಿಯಲಿದೆ ಎಂದರು. ಇನ್ನು ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ಒಡೆತನದ ನಂಜುಂಡೇಶ್ವರ ಸ್ಟೋನ್ ಕ್ರಶರ್ಸ್ ಕೂಡಾ ಇದೆ. ಹಾಗಾಗಿ ಇಡೀ ಪ್ರಕರಣ ರಾಜಕೀಯ ತಿರುವನ್ನು ಪಡೆದುಕೊಂಡಿತು, ಮೇಲಿಂದ ಮೇಲೆ ಹೈಡ್ರಾಮಗಳು ನಡೆಯಲು ಶುರುವಾಯಿತು.
ಶಾಸಕರ ಕ್ರಶರ್ಸ್‌ಗೆ ಇದೇ ಕ್ವಾರಿಯಿಂದಲೇ ಕಲ್ಲು ಸರಬರಾಜು ಮಾಡಲಾಗುತ್ತಿತ್ತು. ಅಲ್ಲದೆ ಈ ಕ್ವಾರಿಯನ್ನು ಶಾಸಕ ನಂಜೇಗೌಡರೇ ನಿರ್ವಹಣೆ ಮಾಡುತ್ತಿದ್ದರು ಎಂದು ತಿಳಿದು ಬರುತ್ತಿದ್ದಂತೆ, ಟೇಕಲ್ ಬಳಿ ಕಾರ್ಯಕ್ರಮವೊಂದಕ್ಕೆ ಬರುತ್ತಿದ್ದ ಸಚಿವ ಮುನಿರತ್ನ ಅವರ ಕಾರಿಗೆ ಕೆಲವು ಸಂಘಟನೆ ಮುಖಂಡರು ಅಡ್ಡಹಾಕಿ ಕ್ವಾರಿಯಲ್ಲಿ ನಡೆದಿರುವುದು ಅಪಘಾತವಲ್ಲ, ಅಕ್ರಮ ಬ್ಲಾಸ್ಟ್ನಿಂದ ಸಾವು ಸಂಭವಿಸಿದೆ, ಅಲ್ಲದೆ ಈ ಕ್ರಶರ್ಗಳ ಹಾವಳಿಯಿಂದ ಇಲ್ಲಿ ಜನರ ಕುಡಿಯು ನೀರು ಆಹಾರ ಎಲ್ಲವೂ ಧೂಳು ಮಯವಾಗಿದೆ ಈ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದರು.
ಈ ವೇಳೆ ಪ್ರತಿಭಟನಾಕಾರರ ಅಹವಾಲು ಆಲಿಸಿದ ಸಚಿವ ಮುನಿರತ್ನ ಅದರ ತನಿಖೆ ನಡೆಸುವುದಾಗಿ ತಿಳಿಸಿದರು. ಈ ವೇಳೆ ಸಚಿವರ ಕಾರಿಗೆ ಅಡ್ಡಹಾಕಿದಕ್ಕೆ ಗರಂ ಆದ ಎಸ್ಪಿ ದೇವರಾಜ್ ಸಂಘಟನೆ ಮುಖಂಡನೊಬ್ಬರಿಗೆ ಕೈಯಿಂದಲೇ ಬಾರಿಸಿದ್ರು. ಇನ್ನು ಘಟನೆ ಸ್ಥಳದಲ್ಲಿ ನಡೆಯುತ್ತಿದ್ದ ಎಲ್ಲಾ ಘಟನೆಗಳ ನಿರ್ವಹಣೆ ಮಾಡುತ್ತಿದ್ದ ಶಾಸಕ ಕೆ.ವೈ.ನಂಜೇಗೌಡ ತಮಗೂ ಈ ಘಟನೆಗೂ ಸಂಬಂಧವಿಲ್ಲ, ಅಷ್ಟಕ್ಕೂ ಘಟನೆ ನಡೆದ ವೇಳೆ ನಾನು ಇಲ್ಲಿ ಇರಲೇ ಇಲ್ಲ, ಈ ಬ್ಲಾಸ್ಟ್ ನಡೆದಿರುವ ಕ್ವಾರಿಯಿಂದ ನಮ್ಮ ಕ್ರಶರ್ಗೆ ಕಲ್ಲು ಸರಬರಾಜು ಮಾಡಲಾಗುತ್ತಿತ್ತು ಅದನ್ನು ಹೊರತು ಪಡಿಸಿದ್ರೆ ಇದರಲ್ಲಿ ನಮ್ಮದಾಗಲೀ ನಮ್ಮ ಕುಟುಂಬದಾಗಲೀ ಯಾವುದೇ ಪಾತ್ರವಿಲ್ಲ ಪೊಲೀಸರು ಏನೇ ತನಿಖೆ ಮಾಡಿದ್ರು ಅದಕ್ಕೆ ನಮ್ಮ ಸಹಕಾರ ನೀಡುವುದಾಗಿ ಹೇಳಿದ ಶಾಸಕ ನಂಜೇಗೌಡ ಘಟನೆಯನ್ನು ರಾಜಕೀಯವಾಗಿ ತಿರುಚಲಾಗುತ್ತಿದೆ ಎಂದರು.
ಅಂತಿಮವಾಗಿ ಶವಾಗಾರಕ್ಕೆ ಭೇಟಿ ನೀಡಿದ ಸಚಿವ ಮುನಿರತ್ನ ಇದೊಂದು ಗಂಭೀರ ಪ್ರಕರಣ. ಇಲ್ಲಿ ಅವಸರದಲ್ಲಿ ಶವಪರೀಕ್ಷೆ ವಿಚಾರದ ಬಗ್ಗೆ ಮತ್ತು ಅಧಿಕಾರಿಗಳ ಲೋಪವಾಗಿದ್ದರೆ ಯಾರನ್ನು ಕೂಡ ಬಿಡುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಮ್ಮೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಿ ಕೂಲಕುಂಶವಾಗಿ ಸಮಗ್ರ ತನಿಖೆ ಮಾಡಲಾಗುವುದು ಎಂದಿದ್ದಾರೆ. ಸದ್ಯ ಯಾವುದೇ ಪರಿಶೀಲನೆ ನಡೆಸದೆ ಅಪಘಾತ ಎಂದು FIR ದಾಖಲು ಮಾಡಿರುವ ಮಾಸ್ತಿ ಠಾಣೆಯ ಇನ್ಸ್ಪೆಕ್ಟರ್ ವಸಂತ್‌ರನ್ನು ಅಮಾನತು ಮಾಡಲಾಗಿದ್ದು, ಇಡೀ ಪ್ರಕರಣದ ತನಿಖೆಯನ್ನು ಡಿವೈಎಎಸ್ಪಿ ಅವರಿಗೆ ವಹಿಸಲಾಗಿದೆ.
Kolar: ‘ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ ಯಶಸ್ವಿಗೊಳಿಸಿ: ಕಾಗೇರಿ ಕರೆ
ಒಟ್ಟಾರೆ ಕಲ್ಲುಕ್ವಾರಿಯಲ್ಲಿ ಬ್ಲಾಸ್ಟ್ ಮಾಡುವ ವೇಳೆ ನಡೆದ ಅವಘಡವನ್ನು ಮುಚ್ಚಿಹಾಕಲು ಯತ್ನಿಸಿದ ಕೆಲವು ಪ್ರಭಾವಿಗಳು ಸದ್ಯ ಪೇಚೆಗೆ ಸಿಲುಕಿದ್ದು, ಏನೋ ಮಾಡಲು ಹೋಗಿ ಮತ್ತೇನೋ ಆಯ್ತು ಎನ್ನುವಂತಾಗಿದೆ. ಹಾಗಾದ್ರೆ ನಿಜ ಘಟನೆ ನಡೆದಿದ್ದಾದ್ರು ಏನು ಅನ್ನೋದು ಸದ್ಯ ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಆದ್ರೆ ಇಲ್ಲಿ ಮೂಲ ಪ್ರಶ್ನೆ ಇರೋದು ತಮ್ಮ ಕುಟುಂಬದ ಸದಸ್ಯ ರಾಕೇಶ್ ಕ್ವಾರಿ ಬ್ಲ್ಯಾಸ್ಟ್‌ನಿಂದ ಸುಟ್ಟು ಮೃತಪಟ್ಟಿದ್ದರು ಸಹ ಎಲ್ಲವನ್ನೂ ಮರೆಮಾಚಿ ಖುದ್ದು ಅಪಘಾತದಿಂದ ರಾಕೇಶ್ ಸಾವನಪ್ಪಿದ್ದಾನೆ ಎಂದು ದೂರು ದಾಖಲು ಮಾಡಿಸಿದ್ದು ಯಾರು, ಇಲ್ಲಿ ಯಾರೂ ತಮ್ಮ ಪ್ರಭಾವವನ್ನು ಬಳಸಿ ಘಟನೆಯನ್ನು ಮರೆ ಮಾಚಲು ಪ್ರಯತ್ನ ಮಾಡಿದ್ದಾರೋ ಅನ್ನೋ ಅಂಶ ತನಿಖೆಯಿಂದ ಹೊರ ಬರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ