
ಬೆಂಗಳೂರು(ಅ.15): ಮದುವೆಯಾಗುವುದಾಗಿ ನಂಬಿಸಿ ಹಿಂದೂ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಆರೋಪದಡಿ ಯುವಕನೊಬ್ಬನ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ’ (ಮತಾಂತರ ನಿಷೇಧ ಕಾಯ್ದೆ) ಅಡಿ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಈ ಕಾಯ್ದೆ ಜಾರಿಯಾದ ಬಳಿಕ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ಯಶವಂತಪುರದ ಬಿ.ಕೆ.ನಗರ ನಿವಾಸಿ ಸೈಯದ್ ಮೋಯಿನ್(23) ಬಂಧಿತ. ಆರೋಪಿಯು ಅ.5ರಂದು ತನ್ನದೇ ಬಡಾವಣೆಯ 18 ವರ್ಷದ ಯುವತಿಯನ್ನು ಆಂಧ್ರಪ್ರದೇಶದ ಪೆನುಕೊಂಡದ ದರ್ಗಾಕ್ಕೆ ಕರೆದೊಯ್ದು ಮತಾಂತರ ಮಾಡಿದ್ದಾನೆ. ಈ ಸಂಬಂಧ ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಹಿಂದೂ ಯುವತಿಯೊಂದಿಗೆ ಲವ್ವಿ ಡವ್ವಿ, ಮುಸ್ಲಿಂ ಯುವಕನಿಂದ ಲವ್ ಜಿಹಾದ್?
ಆರೋಪಿ ಸೈಯದ್ ಮೋಯಿನ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಅ.5ರಂದು ಸಂಜೆ 4 ಗಂಟೆಗೆ ಅಂಗಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಹೋಗಿದ್ದ ಯುವತಿ ರಾತ್ರಿಯಾದರೂ ಮನೆಗೆ ವಾಪಸಾಗಿಲ್ಲ. ಈ ವೇಳೆ ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗಿಲ್ಲ. ಪ್ರಿಯಕರ ಸೈಯದ್ ಮೋಯಿನ್ ಜತೆಗೆ ಯುವತಿ ಹೋಗಿರಬಹುದು ಎಂದು ಪೋಷಕರು ಅನುಮಾನಿಸಿದ್ದರು. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಈ ನಡುವೆ ಸೈಯದ್ ಮೋಯಿನ್ ಮತ್ತು ಯುವತಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಈ ವೇಳೆ ಯುವತಿ ಸ್ವಯಂ ಪ್ರೇರಣೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವುದಾಗಿ ಹೇಳಿಕೆ ನೀಡಿದ್ದಾಳೆ. ಆದರೆ, ಮತಾಂತರ ನಿಷೇಧ ಕಾಯ್ದೆ ಪ್ರಕಾರ ಈ ರೀತಿಯ ಮತಾಂತರ ಕಾನೂನುಬಾಹಿರವಾಗಿದೆ. ಹೀಗಾಗಿ ಯುವತಿ ಪೋಷಕರು ನೀಡಿದ ದೂರಿನ ಮೇರೆಗೆ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸೈಯದ್ ಮೋಯಿನ್‌ನನ್ನು ಬಂಧಿಸಲಾಗಿದೆ.
ಕಾನೂನುಬದ್ಧ ಮತಾಂತರ ಹೇಗೆ?:
ನೂತನ ಕಾಯ್ದೆ ಅನ್ವಯ, ಯಾವುದೇ ವ್ಯಕ್ತಿ ಸ್ವಯಂಪ್ರೇರಣೆಯಿಂದ ಬೇರೆ ಮತಕ್ಕೆ ಮತಾಂತರವಾಗುವಾಗ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಈ ವೇಳೆ ಜಿಲ್ಲಾಧಿಕಾರಿ 30 ದಿನಗಳೊಳಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡುತ್ತಾರೆ. ಒಂದು ವೇಳೆ ಆಕ್ಷೇಪಣೆಗಳು ವ್ಯಕ್ತವಾದರೆ, ಈ ಸಂಬಂಧ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ವಿಚಾರಣೆಗೆ ಆದೇಶಿಸುತ್ತಾರೆ.
ಇಸ್ಲಾಂಗೆ ಮತಾಂತರ, ಹಿಂದೂ ಧರ್ಮದ ವಿರುದ್ಧ ಬ್ರೈನ್ ವಾಶ್: ಮಾಜಿ ಕಾರ್ಪೊರೇಟರ್ ಸೆರೆ
ವಿಚಾರಣೆ ವೇಳೆ ಆ ವ್ಯಕ್ತಿ ಆಸೆ-ಆಮಿಷಗಳಿಗೆ ಒಳಗಾಗಿರುವುದು ಅಥವಾ ಬಲವಂತಕ್ಕೆ ಮತಾಂತರವಾಗುತ್ತಿರುವುದು ಕಂಡು ಬಂದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಿದ್ದಾರೆ. ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದಿದ್ದಲ್ಲಿ ಕಾನೂನುಬದ್ಧ ಮತಾಂತರಕ್ಕೆ ಅನುಮೋದನೆ ಸಿಗಲಿದೆ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಸೆಕ್ಷನ್ 5ರ ಪ್ರಕಾರ ಬಲವಂತದ ಮತಾಂತರ ಮಾಡುವವರಿಗೆ 3ರಿಂದ 5 ವರ್ಷ ಜೈಲು ಹಾಗೂ 25 ಸಾವಿರ ರು. ದಂಡ ವಿಧಿಸಲು ಅವಕಾಶವಿದೆ.
ಏನಿದು ಪ್ರಕರಣ?
- 18 ವರ್ಷದ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ ಬೆಂಗಳೂರಿನ ನಿವಾಸಿ ಸೈಯದ್ ಮೋಯಿನ್
- ಅ.5ರಂದು ಆಕೆಯನ್ನು ಆಂಧ್ರದ ಪೆನುಕೊಂಡದ ದರ್ಗಾಕ್ಕೆ ಕರೆದೊಯ್ದು ಇಸ್ಲಾಂಗೆ ಮತಾಂತರ
- ಯುವತಿ ಮನೆಗೆ ಬಾರದ್ದರಿಂದ ಪೋಷಕರಿಂದ ಎಲ್ಲೆಡೆ ಹುಡುಕಾಟ, ಪೊಲೀಸರಿಗೆ ದೂರು ದಾಖಲು
- ಏತನ್ಮಧ್ಯೆ, ಯುವಕ-ಯುವತಿ ಠಾಣೆಗೆ ಹಾಜರು. ತಾನೇ ಮತಾಂತರ ಆಗಿದ್ದಾಗಿ ಯುವತಿ ಹೇಳಿಕೆ
- ಆದರೆ, ಇತ್ತೀಚೆಗೆ ರಾಜ್ಯದಲ್ಲಿ ಜಾರಿ ಆದ ಮತಾಂತರ ನಿಷೇಧ ಕಾಯ್ದೆ ಅನ್ವಯ ಇದು ಕಾನೂನುಬಾಹಿರ
- ಸ್ವಪ್ರೇರಿತ ಮತಾಂತರಕ್ಕೆ ಡೀಸಿಯ ಪೂರ್ವಾನುಮತಿ ಕಡ್ಡಾಯ. ಉಲ್ಲಂಘನೆ ಕಾರಣಕ್ಕೆ ಕೇಸು ದಾಖಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ