ಗೆಳತಿಯ ಕೊಂದು ನಾಲ್ಕು ದಿನ ಮೆಡಿಕಲ್‌ ಶಾಪ್‌ನಲ್ಲಿ ಇಟ್ಟಿದ್ದ ಪಾಪಿ!

By Santosh NaikFirst Published Nov 20, 2022, 11:16 PM IST
Highlights

ಗೋಣಿಚೀಲ ಹಾಗೂ ಟಾರ್ಪಲಿನ್‌ನಲ್ಲಿ ಶವವನ್ನು ಸುತ್ತಿಕೊಂಡು ಮಧ್ಯರಾತ್ರಿಯ ವೇಳೆ ತನ್ನ ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಾಯ್‌ಪುರ (ನ.20): ದೆಹಲಿಯಲ್ಲಿ ಶ್ರದ್ಧಾಳ 35 ಪೀಸ್‌ ಮರ್ಡರ್‌ ಪ್ರಕರಣ ಜನರ ನೆನಪಿನಿಂದ ಮರೆಯಾಗುವ ಮುನ್ನವೇ ಅದೇ ರೀತಿಯ ಭೀಬತ್ಸ ಕೊಲೆ ಪ್ರಕರಣವೊಂದರು ಛತ್ತೀಸ್‌ಗಢದಲ್ಲಿ ವರದಿಯಾಗಿದೆ. ಶೇರ್‌ಮಾರ್ಕೆಟ್‌ನಲ್ಲಿ ಹಾಕಿದ್ದ ಹಣವನ್ನು ವಾಪಾಸ್‌ ನೀಡುವಂತೆ ಕೇಳಿದ್ದಕ್ಕೆ ಗೆಳತಿಯನ್ನೇ ಕೊಲೆ ಮಾಡಿದ್ದ ಪಾಪಿ ಆಕೆಯ ಶವವನ್ನು ನಾಲ್ಕು ದಿನಗಳ ಕಾಲ ಮೆಡಿಕಲ್‌ ಶಾಪ್‌ನಲ್ಲಿ ಇರಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಗೋಣಿಚೀಲ ಹಾಗೂ ಟಾರ್ಪಲಿನ್‌ನಲ್ಲಿ ಶವವನ್ನು ಸುತ್ತಿ ಕಾರಿನಲ್ಲಿ ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಸಂಬಂಧಪಟ್ಟಂತೆ ಮೆಡಿಕಲ್‌ ಶಾಪ್‌ನ ಮಾಲೀಕ ಆಶೀಶ್‌ ಸಾಹುನನ್ನು ಬಂಧಿಸಸಲಾಗಿದೆ. ಹಣಕಾರಿನ ವಿಚಾರವಾಗಿ 24 ವರ್ಷದ ಪ್ರಿಯಾಂಕಾ ಸಿಂಗ್‌ಗಳನ್ನು ಕೊಲೆ ಮಾಡಿ, ಆಕೆಯ ಶವವನ್ನು ಶಾಪ್‌ನಲ್ಲಿ ಇರಿಸಿದ್ದ. ಆದರೆ, ಶವವನ್ನು ಎಸೆಯುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿಯ ವೇಳೆ ಶವವನ್ನು ತನ್ನ ಶಾಪ್‌ನಿಂದ ಸಾಗಾಟ ಮಾಡಲು ಆಶೀಸ್‌ ಸಾಹು ಬಯಸಿದ್ದ ಈ ವೇಳೆ ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ಮಾಡಿದ್ದಾರೆ.

ಪೊಲೀಸರ ಪ್ರಕಾರ, ಇಬ್ಬರ ನಡುವೆ ಹಣದ ವಿಚಾರವಾಗಿ ಕೆಲ ಸಮಯದಿಂದ ವಾಗ್ವಾದಗಳು ನಡೆಯುತ್ತಿದ್ದವು. ಭಿಲಾಯಿ ನಿವಾಸಿಯಾಗಿರುವ ಪ್ರಿಯಾಂಕಾ ಅವರು ಬಿಲಾಸ್‌ಪುರದಲ್ಲಿ ಕೋಚಿಂಗ್‌ ತರಬೇತಿ ಪಡೆಯುತ್ತಿದ್ದರು. ರಾಜ್ಯ ನಾಗರಿಕ ಸೇವಾ ಪರೀಕ್ಷೆಗಾಗಿ ಅವರು ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಿಯಾಂಕಾ ಸಿಂಗ್‌ ಇಲ್ಲಿ ದಯಾಲ್‌ಬಂದ್‌ ಪ್ರದೇಶದ ಮಹಿಳೆಯ ಹಾಸ್ಟೆಲ್‌ನಲ್ಲಿ ವಾಸವಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಅಶೀಶ್‌ ಸಾಹು ಹಾಗೂ ಪ್ರಿಯಾಂಕಾ ಸಿಂಗ್‌ ಕಳೆದ ಕೆಲ ಸಮಯದಿಂದ ಪ್ರೀತಿ ಮಾಡುತ್ತಿದ್ದರು. ಈ ವೇಳೆ ಆತ, ಪ್ರಿಯಾಂಕಾಗೆ ಶೇರ್‌ ಮಾರ್ಕೆಟ್‌ನಲ್ಲಿ ಹಣ ಹೂಡುವಂತೆ ಪ್ರೋತ್ಸಾಹಿಸಿದ್ದ. ಆರಂಭದಲ್ಲಿ 4 ಲಕ್ಷ ಹಣ ಹೂಡಿಕೆ ಮಾಡಿದ್ದ ಪ್ರಿಯಾಂಕಾ ಸಿಂಗ್‌ ಇದರಲ್ಲಿ 5 ಲಕ್ಷ ಲಾಭ ಪಡೆದುಕೊಂಡಿದ್ದರು. ಆದರೆ, ಇದು ಹೆಚ್ಚು ಸಮಯ ಉಳಿದಿರಲಿಲ್ಲ. ಕೆಲವೇ ತಿಂಗಳ ಅಂತರದಲ್ಲಿ ಶೇರ್‌ ಮಾರ್ಕೆಟ್‌ನಿಂದಲೇ 11 ಲಕ್ಷ ಕಳೆದುಕೊಂಡಿದ್ದರು. ನವೆಂಬರ್‌ 15 ರಂದು ಪ್ರಿಯಾಂಕಾ ಸಿಂಗ್‌, ಆಶೀಶ್‌ ಸಾಹು ಅವರ ಮೆಡಿಕಲ್‌ ಶಾಪ್‌ಗೆ ಬಂದಿದ್ದಲ್ಲದೆ, ಹಣವನ್ನು ವಾಪಾಸ್‌ ನೀಡುವತೆ ಹೇಳಿದ್ದರು. ಈ ವೇಳೆ ಇವರಿಬ್ಬರ ನಡುವೆ ಜೋರಾದ ಗಲಾಟೆ ನಡೆದಿದೆ. ಈ ಹಂತದಲ್ಲಿ ಆಶೀಶ್‌ ಸಾಹು, ಸ್ಕಾರ್ಫ್‌ಅನ್ನು ಬಳಸಿಕೊಂಡು ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರದ್ಧಾಳ ತಲೆಬರುಡೆಗಾಗಿ ಕೊಳದಲ್ಲಿ ಶೋಧ, ಮೆಹ್ರೌಲಿ ಅರಣ್ಯದಿಂದ ಈವರೆಗೂ 17 ಮೂಳೆಗಳು ಪತ್ತೆ!

ಆರೋಪಿ ಆಶೀಶ್ ಸಾಹು ಆಕೆಯ ಮೃತದೇಹವನ್ನು ಶಾಪ್‌ನಲ್ಲಿಯೇ ಇರಿಸಿದ್ದ. ಆದರೆ, ದಿನ ಕಳೆದಂತೆ ಶವದಿಂದ ವಾಸನೆ ಬರಲು ಆರಂಭವಾಗಿತ್ತು. ಅದಕ್ಕಾಗಿ ರೂಮ್‌ ಫ್ರೆಶ್ನರ್‌ ಕೂಡ ಹಾಕಿದ್ದ. ಶನಿವಾರದ ವೇಳೆಗೆ ತನ್ನ ಮನೆಗೆ ಶವವನ್ನು ಸಾಗಾಟ ಮಾಡಲು ಪ್ರಯತ್ನ ಮಾಡಿದ್ದ. ಅಲ್ಲಿಂದ ಶವವನ್ನು ಕಾಡಿಗೆ ಸಾಗಿಸಲು ಬಯಸಿದ್ದ. ಈ ವೇಳೆಯೇ ಅತ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮುಂಜಾನೆ 4 ಗಂಟೆಗೆ ಬ್ಯಾಗ್‌ ಹಿಡಿದು ಹೊರಟಿದ್ದ ಅಫ್ತಾಬ್‌, ಸಿಸಿಟಿವಿ ದೃಶ್ಯಾವಳಿ ಬಿಡುಗಡೆ!

ಕಳೆದ ಕೆಲವು ದಿನಗಳಿಂದ ಮಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಪ್ರಿಯಾಂಕಾ ಸಿಂಗ್‌ ಅವರ ಕುಟುಂಬ ಕಾಣೆಯಾದ ಕುರಿತು ಬಿಲಾಸ್‌ಪುರದ ಕೊತ್ವಾಲಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪ್ರಿಯಾಂಕಾ ಸಿಂಗ್ ಅವರ ಮೊಬೈಲ್ ಸಂಖ್ಯೆಯ ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ ಪೊಲೀಸರು ಆಶಿಶ್ ಸಾಹು ಅವರನ್ನು ಬಂಧಿಸಿದ್ದಾರೆ, ಅವರು ಹಣ ಸಂಬಂಧಿತ ವಿವಾದದ ಮೇಲೆ ಆಕೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

click me!