ದೆಹಲಿಯ ಕುಖ್ಯಾತ 35 ಪೀಸ್ ಮರ್ಡರ್ ಪ್ರಕರಣದಲ್ಲಿ ಭಾನುವಾರ ಇನ್ನೂ ಕೆಲವು ಬೆಳವಣಿಗೆಗಳು ಆಗಿವೆ. ಆರೋಪಿಯಾಗಿರುವ ಅಫ್ತಾಬ್ ಅಮಿನ್ ಪೂನಾವಾಲನ ಮಂಪರು ಪರೀಕ್ಷೆ ಸೋಮವಾರ ನಡೆಯಲಿದ್ದರೆ, ಪೊಲೀಸರು ಶ್ರದ್ಧಾ ವಾಕರ್ ತಲೆಬುರುಡೆಗಾಗಿ ಕೊಳದಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಇನ್ನು ಮೆಹ್ರೌಲಿ ಅರಣ್ಯದಲ್ಲಿ ಈವರೆಗೂ ಶ್ರದ್ಧಾಳ 17 ಮೂಳೆಗಳು ಪತ್ತೆಯಾಗಿವೆ.
ನವದೆಹಲಿ (ನ.20): ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದ ಗೆಳತಿಯನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದಲ್ಲಿ ಹೊಸ ಹೊಸ ವಿಚಾರಗಳು ಪ್ರತಿದಿನ ಬೆಳಕಿಗೆ ಬರುತ್ತಿದೆ. ಶ್ರದ್ಧಾ ವಾಕರ್ ಎನ್ನುವ ಹುಡುಗಿಯನ್ನು ಕೊಲೆ ಮಾಡಿ 35 ಪೀಸ್ ಮಾಡಿದ ಪ್ರಕರಣದಲ್ಲಿ ಅಫ್ತಾಬ್ ಅಮಿನ್ ಪೂನಾವಾಲಾನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಆತ ಆಕೆಯ ದೇಹದ ಭಾಗಗಳನ್ನು ಹುಡುಕುವ ಕೆಲಸ ನಡೆಯುತ್ತಿದೆ. ಈವರೆಗೂ ಪೊಲೀಸರಿಗೆ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ 17 ಮೂಳೆಗಳು ಪತ್ತೆಯಾಗಿವೆ. ಇದರ ನಡುವೆ ದೆಹಲಿ ಪೊಲೀಸರು ಭಾನುವಾರ ಸಂಜೆ ಛತ್ತರ್‌ಪುರ ಜಿಲ್ಲೆಯ ಮೈದಾನ್ ಗರ್ಹಿಗೆ ಆಗಮಿಸಿದ್ದರು. ಅಲ್ಲಿರುವ ಕೊಳವನ್ನು ಖಾಲಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಅದರೊಂದಿಗೆ ಡೈವರ್‌ಗಳನ್ನು ಕೂಡ ಕರೆಸಿದ್ದಾರೆ. ಶ್ರದ್ಧಾಳ ತಲೆಬುರುಡೆಯನ್ನು ಕೊಳದಲ್ಲಿ ಹಾಕಿದ್ದಾಗಿ ಅಫ್ತಾಬ್ ಹೇಳಿರುವ ಕಾರಣ, ಅದಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಕೆಲ ಸಮಯದ ಹಿಂದೆ ಪೊಲೀಸರು ಅಫ್ತಾಬ್‌ನನ್ನು ಇಲ್ಲಿಗೆ ಕರೆತಂದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಈ ಕೊಳದಲ್ಲಿ ಶ್ರದ್ಧಾಳ ತಲೆಯನ್ನು ಎಸೆದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯ ಆಯುಧ ಕೂಡ ಈವರೆಗೂ ಪತ್ತೆಯಾಗಿಲ್ಲ ಎನ್ನಲಾಗಿದೆ. ಛತ್ತರ್‌ಪುರ ಜಿಲ್ಲೆಯ ಮೆಹ್ರೌಲಿ ಅರಣ್ಯದಿಂದ ಪೊಲೀಸರು ಇದುವರೆಗೆ 17 ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ, ಅವುಗಳನ್ನು ತನಿಖೆಗಾಗಿ ಕಳುಹಿಸಿದ್ದಾರೆ.
ಸೋಮವಾರ ಮಂಪರು ಪರೀಕ್ಷೆ: ಇನ್ನು ಅಫ್ತಾಬ್ ಪೂನಾವಾಲಾನ ಮಂಪರು ಪರೀಕ್ಷೆ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಪೊಲೀಸರು ಮಂಪರು ಪರೀಕ್ಷೆಗಾಗಿ ಈವರೆಗೂ 40 ಪ್ರಶ್ನೆಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಅದರೊಂದಿಗೆ ಭಾನುವಾರ ಬೆಳಗ್ಗೆ ದೆಹಲಿ ಪೊಲೀಸರು ಅಫ್ತಾಬ್‌ನ ಮನೆಗೆ ತೆರಳಿದ್ದು, ಶ್ರದ್ಧಾಳ ಕೊಲೆಯ ದಿನದ ಕ್ಷಣವನ್ನು ಮರುಸೃಷ್ಟಿ ಮಾಡಿದ್ದಾರೆ. ಇನ್ನು ಅಫ್ತಾಬ್‌ನದ್ದು ಎನ್ನಲಾದ ಸಿಸಿಟಿವಿ ದೃಶ್ಯಾವಳಿಗಳು ಈಗಾಗಲೇ ಪೊಲೀಸರ ಕೈಸೇರಿವೆ. ಇದಲ್ಲದೇ ದೆಹಲಿ ಪೊಲೀಸರು ಮೆಹ್ರೌಲಿ ಫ್ಲಾಟ್‌ನಿಂದ ಎಲ್ಲಾ ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳಲ್ಲಿ ಶ್ರದ್ಧಾ ಅವರ ಬಟ್ಟೆಗಳೂ ಸೇರಿವೆ. ಆದರೆ, ಕೊಲೆಯ ದಿನ ಇಬ್ಬರೂ ಧರಿಸಿದ್ದ ಬಟ್ಟೆಗಳಿಗಾಗಿ ಪೊಲೀಸರ ಶೋಧ ಕಾರ್ಯ ಇನ್ನೂ ಮುಂದುವರಿದಿದೆ.
ಶ್ರದ್ಧಾ ಮರ್ಡರ್ ಕೇಸ್‌ನ ಭಾನುವಾರದ ಅಪ್‌ಡೇಟ್‌ಗಳು
ಮುಂಜಾನೆ 4 ಗಂಟೆಗೆ ಬ್ಯಾಗ್ ಹಿಡಿದು ಹೊರಟಿದ್ದ ಅಫ್ತಾಬ್, ಸಿಸಿಟಿವಿ ದೃಶ್ಯಾವಳಿ ಬಿಡುಗಡೆ!
ಫ್ಲಾಟ್ ಮಾಲೀಕರ ಹೇಳಿಕೆ ದಾಖಲು: ಶ್ರದ್ಧಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೀಗಲ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಮಾಲೀಕರಾಗಿರುವ ಜಯಶ್ರೀ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಜಯಶ್ರೀಯಿಂದ ಅಗ್ರಿಮೆಂಟ್ ಪೇಪರ್ ಗಳನ್ನೂ ತೆಗೆದುಕೊಂಡಿದ್ದಾರೆ.
ಆಫ್ತಾಬ್ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಬಯಸಿದ್ದ ಶ್ರದ್ಧಾ, ವ್ಯಾಟ್ಸ್ಆ್ಯಪ್ ಚಾಟ್ ಬಹಿರಂಗ!
ಅಫ್ತಾಬ್ ಮತ್ತು ಶ್ರದ್ಧಾ ಯಾವಾಗ ಬಂದರು ಮತ್ತು ಎಷ್ಟು ಸಮಯ ಇದ್ದರು ಎಂದು ಪೊಲೀಸರು ಜಯಶ್ರೀ ಅವರನ್ನು ಈ ವೇಳೆ ಕೇಳಿದ್ದಾರೆ. ಅಂದಾಜು 10 ತಿಂಗಳ ಕಾಲ ಅವರು ಈ ಫ್ಲಾಟ್‌ನಲ್ಲಿ ವಾಸವಿದ್ದರು. ಅವರ ಅಡುಗೆ ಮನೆಯಲ್ಲಿ ಹೆಚ್ಚಿನ ಆಹಾರ ಇರುತ್ತಿರಲಿಲ್ಲ. ಬ್ರೋಕರ್ ಮೂಲಕ ಈ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಇನ್ನು ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತೇ ಎನ್ನುವ ಪ್ರಶ್ನೆಗೆ ಈ ಕುರಿತಾಗಿ ನಾನು ಎಂದೂ ದೂರುಗಳನ್ನು ಸ್ವೀಕರಿಸಿರಲಿಲ್ಲ ಎಂದಿದ್ದಾರೆ.