ಅಕ್ರಮ ಸಂಬಂಧಕ್ಕೆ ಅಡ್ಡಿ; ಗಂಡನ ಕೊಲ್ಲಿಸಿ ಅಪಘಾತ ಎಂದು ಬಿಂಬಿಸಿದ್ದವಳ ಸೆರೆ

By Kannadaprabha News  |  First Published Jul 23, 2023, 5:11 AM IST

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರೇಮಿಯೊಂದಿಗೆ ಸೇರಿ ಕೊಲೆ ಮಾಡಿಸಿದ್ದ ಪತ್ನಿ, ಆಕೆಯ ಪ್ರಿಯಕನನ್ನು ಮೂರು ತಿಂಗಳ ಬಳಿಕ ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ್ದ ಮತ್ತೊಬ್ಬನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


ಆನೇಕಲ್‌ (ಜು.23) :  ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರೇಮಿಯೊಂದಿಗೆ ಸೇರಿ ಕೊಲೆ ಮಾಡಿಸಿದ್ದ ಪತ್ನಿ, ಆಕೆಯ ಪ್ರಿಯಕನನ್ನು ಮೂರು ತಿಂಗಳ ಬಳಿಕ ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ್ದ ಮತ್ತೊಬ್ಬನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮೂಲತಃ ಆಂಧ್ರಪ್ರದೇಶದ ಕದಿರಿ ತಾಲೂಕಿನ ಬೊಮ್ಮರೆಡ್ಡಿಪೆಲ್ಲಿಯ ಸರ್ಜಾಪುರದ ನಿವಾಸಿ ಪವನ್‌ ಕುಮಾರ್‌ ಕೊಲೆಯಾದ ವ್ಯಕ್ತಿ. ಈತನ ಪತ್ನಿ ಪಾರ್ವತಿ(33), ಆಕೆಯ ಪ್ರಿಯಕರ ಯಲ್ಲಪ್ಪ(39)ನನ್ನು ಬಂಧಿಸಲಾಗಿದ್ದು, ಕೊಲೆ ಸಹಕರಿಸಿ, ತಲೆಮರೆಸಿಕೊಂಡಿರುವ ನಾರಾಯಣಸ್ವಾಮಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೇ 1ರಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕುರುಮಾಕನಹಳ್ಳಿ ಬಳಿ ವ್ಯಕ್ತಿ ಪವನ್‌ನನ್ನು ಕೊಲೆ ಮಾಡಿ, ಆತನ ಮೇಲೆ ವಾಹನ ಹತ್ತಿಸಿ, ಅಪಘಾತದಿಂದ ಮೃತಪಟ್ಟಿದ್ದಾನೆ ಎಂಬಂತೆ ಬಿಂಬಿಸಲಾಗಿತ್ತು.

Tap to resize

Latest Videos

undefined

ಚಾಲಕನ ನಿರ್ಲಕ್ಷ್ಯದಿಂದ ವಿದ್ಯಾರ್ಥಿ ಮೇಲೆ ಹರಿದ ಶಾಲಾ ಬಸ್, ಸ್ಥಳದಲ್ಲೇ ವಿದ್ಯಾರ್ಥಿ ಸಾವು

ಪವನ್‌ಕುಮಾರ್‌ ಮತ್ತು ಕೊಲೆಗೆ ಸಂಚು ರೂಪಿಸಿದ ಪತ್ನಿ ಪಾರ್ವತಿ ಆಂಧ್ರಪ್ರದೇಶದ ಕದಿರಿ ತಾಲೂಕಿನ ಬೊಮ್ಮರೆಡ್ಡಿಪೆಲ್ಲಿಯ ನಿವಾಸಿಗಳು. ಆನೇಕಲ್‌ ತಾಲೂಕಿನ ಸರ್ಜಾಪುರದಲ್ಲಿ ವಾಸವಾಗಿದ್ದರು. ಪವನ್‌ಕುಮಾರ್‌ ಖಾಸಗಿ ಕಂಪನಿಯ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪಾರ್ವತಿ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಇದೇ ಗಾರ್ಮೆಂಟ್ಸ್‌ನಲ್ಲಿ ವಾಹನ ಚಾಲಕನಾಗಿದ್ದ ಯಲ್ಲಪ್ಪನೊಂದಿಗೆ ಪಾರ್ವತಿಗೆ ಸಲುಗೆ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ಅನೈತಿಕ ಚಟುವಟಿಕೆ ಬಗ್ಗೆ ತಿಳಿದ ಪವನ್‌ ಆಕೆಯೊಂದಿಗೆ ಜಗಳವಾಡಿದ್ದ. ಬಳಿಕ ಪಾರ್ವತಿ ಮನೆ-ಮಕ್ಕಳನ್ನು ತೊರೆದು ಮದನಪಲ್ಲಿಗೆ ಹೋಗಿದ್ದಳು. ಬಳಿಕ ಪವನ್‌ಕುಮಾರ್‌ ಮಕ್ಕಳನ್ನು ನೋಡಿಕೊಂಡು ಕೆಲಸ ಮಾಡುತ್ತಿದ್ದ. ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪವನ್‌ನನ್ನು ಕೊಲ್ಲಲು ಪಾರ್ವತಿ ಮತ್ತು ಯಲ್ಲಪ್ಪ ಸಂಚು ರೂಪಿಸಿದ್ದರು. ಅದರಂತೆ ಮೇ 1ರಂದು ಪವನ್‌ಕುಮಾರ್‌ನನ್ನು ಬೊಲೆರೊ ವಾಹನದಲ್ಲಿ ಯಲ್ಲಪ್ಪ ಕರೆದೊಯ್ದಿದ್ದಾನೆ. ಇದಕ್ಕೆ ಸರ್ಜಾಪುರದ ನಿವಾಸಿ ನಾರಾಯಣಸ್ವಾಮಿ ಸಾಥ್‌ ನೀಡಿದ್ದಾನೆ. ಮೂವರೂ ಜೊತೆಗೂಡಿ ಮಾರ್ಗಮಧ್ಯೆ ಎರಡು ಮೂರು ಬಾರಿ ಮದ್ಯಸೇವಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಸಮೀಪದ ಕುರುಮಾಕನಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಪವನ್‌ಕುಮಾರ್‌ನನ್ನು ಹತ್ಯೆ ಮಾಡಿದ ಯಲ್ಲಪ್ಪ, ನಂತರ ಬೊಲೆರೋ ವಾಹನವನ್ನು ಪವನ್‌ಕುಮಾರ್‌ ಮೇಲೆ ಹತ್ತಿಸಿದ್ದಾನೆ. ಅಪಘಾತದಿಂದ ಮೃತಪಟ್ಟಂತೆ ಬಿಂಬಿಸಿ ಸರ್ಜಾಪುರಕ್ಕೆ ವಾಪಸ್‌ ಬಂದಿದ್ದರು. ಪವನ್‌ ಶವವನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಾರಸುದಾರರು ಇಲ್ಲದ ಶವ ಎಂದು ತಾವೇ ಅಂತ್ಯ ಸಂಸ್ಕಾರ ಮಾಡಿದ್ದರು.

ಈ ಮಧ್ಯೆ ಗಂಡ ಪವನ್‌ಕುಮಾರ್‌ ಕಾಣೆ ಆಗಿರುವ ಬಗ್ಗೆ ಪಾರ್ವತಿ ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ತನಿಖೆ ಕೈಗೊಂಡಾಗ ಪಾರ್ವತಿಯೊಂದಿಗೆ ಯಲ್ಲಪ್ಪ ಹಲವು ಬಾರಿ ಫೋನ್‌ ಕರೆಯಲ್ಲಿ ಮಾತನಾಡಿರುವುದು ಮತ್ತು ವಾಟ್ಸಪ್‌ ಕರೆಗಳು ಪೊಲೀಸರ ಗಮನಕ್ಕೆ ಬಂದಿತು. ಕೊಲೆ ಆರೋಪಿ ಯಲ್ಲಪ್ಪ ಹಾಗೂ ಮೃತ ಪವನ್‌ಕುಮಾರ್‌ ಫೋನ್‌ಗಳು ಏಕಕಾಲದಲ್ಲಿ ಸ್ವಿಚ್‌ಆಫ್‌ ಆಗಿರುವುದು ತನಿಖೆಯಲ್ಲಿ ತಿಳಿದು ಬಂದಿತು. ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳಾದ ಪಾರ್ವತಿ ಮತ್ತು ಯಲ್ಲಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇವರ ಜೊತೆಯಲ್ಲಿದ್ದ ನಾರಾಯಣಸ್ವಾಮಿ ಕೊಲೆ ಸಂಚಿನಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.

ಆನೇಕಲ್: 87 ವರ್ಷದ ಕಣ್ಣು ಕಾಣದ, ಕಿವಿ ಕೇಳದ ಹಿರಿಯ ಆನೆಗೆ ವಿಶೇಷ ಆರೈಕೆ..!

ಸರ್ಜಾಪುರ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಪಿಎಸ್‌ಐ ದುಂಡಬ್ಬ ಬಾರಕಿ, ಸಿಬ್ಬಂದಿ ಪ್ರಭುಕುಮಾರ್‌, ರವಿ ಕುಮಾರ್‌, ಪ್ರಕಾಶ್‌ ತನಿಖೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಇವರನ್ನು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್‌ ಬಾಲದಂಡಿ ಹಾಗೂ ಅಡಿಷನಲ್‌ ಎಸ್‌ಪಿ ಎಂ.ಎಲ್‌.ಪುರುಷೋತ್ತಮ್‌ ಅಭಿನಂದಿಸಿದ್ದಾರೆ.

click me!