ಆನೇಕಲ್: 87 ವರ್ಷದ ಕಣ್ಣು ಕಾಣದ, ಕಿವಿ ಕೇಳದ ಹಿರಿಯ ಆನೆಗೆ ವಿಶೇಷ ಆರೈಕೆ..!
ಹಲವು ಪ್ರಯೋಗಗಳ ಮೂಲಕ ಸಾವಿನ ದವಡೆಯಿಂದ ನೂರಾರು ವನ್ಯಜೀವಿಗಳನ್ನ ಪಾರು ಮಾಡಿರುವ ಹೆಗ್ಗಳಿಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕಿದೆ. ಈಗ ಇದೇ ಉದ್ಯಾನವನದ 87 ವರ್ಷದ ಹಿರಿಯ ಆನೆ ಗಾಯಿತ್ರಿಗೆ ಇಲ್ಲಿನ ಮಾವುತರು ಹಾಗೂ ಕಾವಾಡಿಗಳು ವಿಶೇಷವಾಗಿ ಹಾರೈಕೆ ಮಾಡುತ್ತಿದ್ದು ಸ್ವಂತ ಮಗುವಿನಂತೆ ಜೋಪಾನ ಮಾಡುತ್ತಿದ್ದಾರೆ.
ವರದಿ: ಟಿ. ಮಂಜುನಾಥ, ಹೆಬ್ಬಗೋಡಿ, ಆನೇಕಲ್
ಆನೇಕಲ್(ಜು.04): ರಾಜ್ಯದಲ್ಲಿರುವ ಆನೆಗಳಿಗೆಲ್ಲಾ ಹಿರಿಯ ಆನೆ ರಾಜ್ಯದ ಉದ್ಯಾನ ಅಥವಾ ಶಿಬಿರಗಳಲ್ಲಿನ ಆನೆಗಳ ಪೈಕಿ ಅತ್ಯಂತ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಾಯತ್ರಿ ಎಂಬ ಹೆಸರಿನ ಹೆಣ್ಣಾನೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಶೇಷ ಹಾರೈಕೆ ಮಾಡಲಾಗುತ್ತಿದೆ. ಆದರೆ ಈ ಹಿರಿಯಜ್ಜಿಗೆ ಕಳೆದ ನಾಲ್ಕು ವರ್ಷದಿಂದ ಕಣ್ಣು ಕಾಣಿಸದು, ಕಿವಿಯು ಕೇಳಿಸದು, ಆದರೂ ಮುಸ್ಸಂಜೆಯ ವಯಸ್ಸಿನಲ್ಲಿ ಗಾಯಿತ್ರಿಯ ಜೀವನೋತ್ಸಾಹ ಎಲ್ಲಾ ಹಿರಿಯ ಜೀವಗಳಿಗೂ ಸ್ಫೂರ್ತಿಯಾಗಿದೆ. ಇದರ ಲಾಲನೆಪಾಲನೆಯಲ್ಲಿ ಮಾವುತ, ಕಾವಾಡಿ ಮತ್ತು ವೈದ್ಯರ ವಿಶೇಷ ಕಾಳಜಿಯಿಂದ ಜೀವನ ಸಾಗಿಸುತ್ತಿರುವ ಹಿರಿಯ ಆನೆ.
ಸುಕ್ಕು ಕಟ್ಟಿದ ಚರ್ಮ, ಎತ್ತರದ ನಿಲುವಿನಿಂದ ಅಜಾನುಬಾಹು, ಇಂದಿಗೂ ಈ ಆನೆಯ ಹೆಸರೇ ಗಾಯತ್ರಿ ಬದುಕುವ ಉತ್ಸಾಹ ಬೆಂಗಳೂರು ಸಮೀಪವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಹಲವು ವಿಶೇಷಗಳ ಮೂಲಕ ಪ್ರಾಣಿ ಪ್ರಿಯರ ನೆಚ್ಚಿನ ತಾಣವಾಗಿದೆ. ಹಲವು ಪ್ರಯೋಗಗಳ ಮೂಲಕ ಸಾವಿನ ದವಡೆಯಿಂದ ನೂರಾರು ವನ್ಯಜೀವಿಗಳನ್ನ ಪಾರು ಮಾಡಿರುವ ಹೆಗ್ಗಳಿಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕಿದೆ. ಈಗ ಇದೇ ಉದ್ಯಾನವನದ 87 ವರ್ಷದ ಹಿರಿಯ ಆನೆ ಗಾಯಿತ್ರಿಗೆ ಇಲ್ಲಿನ ಮಾವುತರು ಹಾಗೂ ಕಾವಾಡಿಗಳು ವಿಶೇಷವಾಗಿ ಹಾರೈಕೆ ಮಾಡುತ್ತಿದ್ದು ಸ್ವಂತ ಮಗುವಿನಂತೆ ಜೋಪಾನ ಮಾಡುತ್ತಿದ್ದಾರೆ.
ಬನ್ನೇರುಘಟ್ಟದಲ್ಲಿ ಹೆರಿಗೆ ನೋವಲ್ಲೇ ಪ್ರಾಣಬಿಟ್ಟ ಮಹಾತಾಯಿ ಆನೆ: ಕ್ರೂರಿಗೂ ಈ ಕಷ್ಟ ಬಾರದಿರಲಿ
ಕಳೆದ 4 ವರ್ಷದಿಂದ ಗಾಯತ್ರಿಗೆ ಕಣ್ಣು ಕಾಣಿಸುತ್ತಿಲ್ಲ, ಜೊತೆಗೆ ಕಿವಿಯೂ ಕೇಳಿಸುತ್ತಿಲ್ಲ. ಹಲ್ಲುಗಳು ಸಂಪೂರ್ಣ ಉದುರಿಹೋಗಿದೆ. ಇಂತಹ ಪರಿಸ್ಥಿತಿಯಲ್ಲೂ ಆನೆ ಪ್ರತಿದಿನ ತನ್ನ ಸ್ನೇಹಿತರ ಜೊತೆ ಕಾಡಿಗೆ ಹೋಗಿ ಮತ್ತೆ ಆನೆ ಕ್ಯಾಂಪ್ ಗೆ ವಾಪಸ್ ಬರುತ್ತಿದೆ. ಜೊತೆಗೆ ಕ್ಯಾಂಪ್ ಆನೆಗಳು ಗಾಯತ್ರಿ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಿದ್ದು ಅರಣ್ಯದಲ್ಲಿ ಗಾಯಿತ್ರಿಯನ್ನು ಜೋಪಾನ ಮಾಡುತ್ತವೆ. ಈ ಬಗ್ಗೆ ಮಾತನಾಡಿದ ಆನೆ ಮಾವುತ ರಾಜ ಕಳೆದ 20 ವರ್ಷದಿಂದ ಗಾಯಿತ್ರಿಯನ್ನು ನೋಡಿಕೊಳ್ಳುತ್ತಿದ್ದೇನೆ. ಮೊದಲು ತುಂಬಾ ಚುರುಕಾಗಿದ್ದ ಆನೆ ಈಗ ಕಳೆದ ನಾಲ್ಕು ವರ್ಷದಿಂದ ಕಣ್ಣು ಕಾಣದೇ ಸ್ವಲ್ಪ ಮಂಕಾಗಿದೆ. ಆದರೆ ತನ್ನ ಜೊತೆಗಾರರ ಜೊತೆ ಕಾಡಿಗೆ ಹೋಗಿ ಮತ್ತೆ ವಾಸನೆ ಹಿಡಿದು ಕ್ಯಾಂಪ್ ಕಡೆ ಬರುತ್ತದೆಂದು ಗಾಯತ್ರಿ ಬಗ್ಗೆ ಸಂತಸದಿಂದ ಮಾತನಾಡುತ್ತಾರೆ.
ಗಾಯತ್ರಿ ವಯಸ್ಸಿನಲ್ಲಿ ಟಿಂಬರ್ ನಲ್ಲಿ ಕೆಲಸ ಮಾಡುತ್ತಿತ್ತು, ಖೆಡ್ಡಾ ಅಪರೇಶನ್ ಗಳಿಗೆ ಬಳಕೆ ಮಾಡುತ್ತಿದ್ದರು, ಇದೀಗ ಆನೆಗೆ ವಿಶೇಷ ಕಾಳಜಿ ಮತ್ತು ಸೌಲಬ್ಯಗಳನ್ನ ಅಧಿಕಾರಿಗಳು ನೀಡಿದ್ದಾರೆ, ಇನ್ನೂ ರಾತ್ರಿ ವೇಳೆ ಕಾಡಿಗೆ ಬಿಟ್ಟಾಗ ಮಾವುತರು ಸಹಾಯಕರು ಕಾಡಿನಲ್ಲಿ ಹುಡುಕಿ ಆನೆಯನ್ನ ಕ್ಯಾಂಪ್ ಕಡೆಗೆ ಕರೆ ತರಬೇಕಾದ ಪರಿಸ್ಥಿತಿ ಇದೆ. ಎಂದರು. ಆನೆ ಮೇಲ್ವಿಚಾರಕ ಸುರೇಶ್ ಮಾತನಾಡಿ 1968 ರಲ್ಲಿ ಖೆಡ್ಡಾ ಆಪರೇಷನ್ ಮೂಲಕ ಆನೆಯನ್ನ ಸೆರೆ ಹಿಡಿದು ಬಳಿಕ 2002 ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತರಲಾಯಿತು. ತರಬೇತಿ ಪಡೆದ ಆನೆಯಾಗಿದ್ದ ಗಾಯಿತ್ರಿ, ಹಲವು ಕಾರ್ಯಗಳಿಗೆ ಬಳಸಿಕೊಳ್ಳಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷದಿಂದ ವಿಶೇಷವಾಗಿ ಆಹಾರ ನೀಡುತ್ತಾ ಬಂದಿದ್ದು ಆನೆಯನ್ನು ಜೋಪಾನ ಮಾಡಲಾಗುತ್ತದೆ. ಕಾಡಾನೆಗಳು ಸಾಮಾನ್ಯವಾಗಿ ಇಷ್ಟು ವರ್ಷ ಬದುಕುವುದು ಅಪರೂಪ. ಆದರೆ ಗಾಯತ್ರಿ 100 ವರ್ಷ ಬದುಕಬೇಕು ಎಂಬ ಸದ್ದುದೇಶದಲ್ಲಿ ನಮ್ಮ ಮಾವುತರು ಗಾಯತ್ರಿನ್ನ ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದೆವೆಂದು ಮತ್ತೋರ್ವ ಸಿಬ್ಬಂದಿ ಸುರೇಶ್ ತಿಳಿಸಿದರು.
ಗಾಯತ್ರಿ ಬಗ್ಗೆ ಮಾತನಾಡಿದ ಬನ್ನೇರುಘಟ್ಟ ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಪನ್ವಾರ, ಮೊದಲು ಆನೆಗಳು ಟಿಂಬರ್ ಲೊಡಿಂಗ್ ಹಾಗೂ ಖೆಡ್ಡಾ ಆಪರೇಷನ್‌ಗೆ ಬಳಸಿಕೊಳ್ಳಲಾಗುತ್ತಿತ್ತು ಬಳಿಕ ವನ್ಯಜೀವಿ ಕಾಯ್ದೆ ಅನ್ವಯ ಆನೆಗಳನ್ನು ಕೆಲವೇ ಕೆಲವು ಕಾರ್ಯಾಚರಣೆಗಳಲ್ಲಿ ಬಳಸಲು ಅವಕಾಶವಿದೆ. ಅದೇ ರೀತಿ ಗಾಯಿತ್ರಿ ಈ ಹಿಂದೆ ಹಲವು ಕಾರ್ಯಾಚರಣೆ ನಡೆಸಿ ಈಗ ನಿವೃತ್ತಿ ಜೀವನವನ್ನು ನಡೆಸುತ್ತಿದೆ. ಹಿರಿಯ ನಾಗರಿಕರ ರೀತಿಯಲ್ಲಿ ಗಾಯತ್ರಿಗೆ ವಿಶೇಷವಾಗಿ ಆರೈಕೆ ಮಾಡುತ್ತಿದ್ದೇವೆ. ಆನೆಗಳ ಗುಂಪು ಸಹ ಗಾಯಿತ್ರಿಯನ್ನು ಜೋಪಾನ ಮಾಡುತ್ತಿವೆ. ಆನೆ ಗುಂಪಿನ ಪ್ರೀತಿ, ವಾತ್ಸಲ್ಯ, ಅವುಗಳ ಮಮತೆ ಗಾಯತ್ರಿ ಇಷ್ಟು ವರ್ಷಗಳ ಕಾಲ ಬದುಕಲು ಸಹಕಾರಿಯಾಗಿದೆ ಎಂದು ಸುನಿಲ್ ಪನ್ವಾರ ತಿಳಿಸಿದರು.
ಬೆಂಗಳೂರು: ಬನ್ನೇರುಘಟ್ಟ ಉದ್ಯಾನವನದಲ್ಲಿ ಮರಿಗೆ ಜನ್ಮ ನೀಡಿದ ಝೀಬ್ರಾ
ಹಿರಿಯಜ್ಜಿ ಗಾಯತ್ರಿಯ ಆರೋಗ್ಯದ ಮೇಲೆ ನಿಗಾಯಿರಿಸಿರುವ ವೈದ್ಯರಾದ ಡಾ. ಉಮಾಶಂಕರ್ ಸದಾ ಗಾಯತ್ರಿಯ ಆರೋಗ್ಯದ ಮೇಲೆ ಕಣ್ಣಿಟ್ಟಿರುತ್ತೇನೆ, ರಾತ್ರಿ ವೇಳೆ ಕಾಡಿಗೆ ಬಿಟ್ಟಾಗ ಅದು ಬೆಳಗ್ಗೆ ನಮಗೆ ವಾಪಸ್ ಸಿಗುವವರೆಗೂ ಸ್ವಲ್ಪ ಆತಂಕವಿರುತ್ತೇ ಹೊರತುಪಡಿಸಿದರೆ ಅದು ಆರೋಗ್ಯವಾಗಿದೆಯೆನ್ನುತ್ತಾರೆ ಡಾ. ಉಮಾಶಂಕರ್.
ಬನ್ನೇರಘಟ್ಟ ಜೈವಿಕ ಉದ್ಯಾನವನದಲ್ಲಿ ನಿವೃತ್ತಿ ಜೀವನವನ್ನು ನಡೆಸುತ್ತಿರುವ ಗಾಯತ್ರಿ ಶತಮಾನವನ್ನ ಪೂರೈಸಲಿ, 100 ವರ್ಷ ಬಾಳಲಿ ಎಂಬುದು ನಮ್ಮ ಆಶಯ.