* ಸರ್ಕಾರಿ ಗೆಜೆಟೆಡ್ ಅಧಿಕಾರಿಗಳ ನಕಲಿ ಸೀಲ್ ಬಳಸಿ ದಾಖಲೆ ಸೃಷ್ಟಿ
* ಬೆಂಗಳೂರು ಒನ್‌ನಲ್ಲಿ ದಾಖಲೆ ಸಲ್ಲಿಕೆ
* ನುಸುಳುಕೋರರಿಗೆ ಆಧಾರ್ ಕಾರ್ಡ್ ಮಾರಾಟ
ಬೆಂಗಳೂರು(ಜೂ.12): ಅಕ್ರಮ ಬಾಂಗ್ಲಾದೇಶದ ವಲಸಿಗರಿಗೆ ಕೇವಲ 500ಗೆ ಆಧಾರ್ ಕಾರ್ಡ್ ಸೇರಿದಂತೆ ಭಾರತೀಯ ನಾಗರಿಕರೆಂದು ನಿರೂಪಿಸಲು ಸರ್ಕಾರಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಬೃಹತ್ ಜಾಲವನ್ನು ಪತ್ತೆ ಹಚ್ಚಿರುವ ನಗರದ ಹೊರವಲಯದ ಮಾದನಾಯಕನಹಳ್ಳಿ ಠಾಣೆ ಪೊಲೀಸರು, ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ.
ಬಾಂಗ್ಲಾ ಮೂಲದ ಸೈದುಲ್ ಅಕೂನ್ ಅಲಿಯಾಸ್ ಶಾಹಿದ್ ಅಹಮ್ಮದ್, ಮೊಹಮ್ಮದ್ ಅಬ್ದುಲ್ ಅಲೀಂ, ಡಿ.ಜೆ.ಹಳ್ಳಿಯ ಸುಹೈಲ್ ಅಹಮ್ಮದ್, ಮೊಹಮ್ಮದ್ ಇದಾಯತ್, ಜೆ.ಪಿ.ನಗರದ ಸೈಯ್ಯದ್ ಮನ್ಸೂರ್, ಇಸ್ತಿಯಾ, ಚಾಮರಾಜಪೇಟೆಯ ಆಯೇಷಾ, ಪಿಳ್ಳಣ್ಣ ಗಾರ್ಡನ್‌ನ ಅಮೀನ್ ಸೇಠ್, ಪರಪ್ಪನ ಅಗ್ರಹಾರದ ರಾಕೇಶ್ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಐವರು ಬಾಂಗ್ಲಾ ಪ್ರಜೆಗಳಿಗೆ ಕಾರ್ಯಾಚರಣೆ ಮುಂದುವರೆದಿದೆ.
undefined
Bengaluru: ಬಾರ್ ಮುಂದೆ ಗಲಾಟೆ: ಅಣ್ಣನಿಂದಲೇ ತಮ್ಮನ ಹತ್ಯೆ!
ಆರೋಪಿಗಳಿಂದ ಬೌರಿಂಗ್, ವಾಣಿ ವಿಲಾಸ ಆಸ್ಪತ್ರೆ ಹಾಗೂ ಬಿಬಿಎಂಪಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ 5 ನಕಲಿ ಸೀಲ್‌ಗಳು, 26 ಗೆಜೆಟೆಡ್ ಅಧಿಕಾರಿಗಳ ಲೆಟರ್‌ಹೆಡ್, 16 ಮೊಬೈಲ್, 31 ಆಧಾರ್ ಕಾರ್ಡ್, 13 ಪ್ಯಾನ್ ಕಾರ್ಡ್, 28 ಮತದಾರ ಗುರುತಿನ ಪತ್ರ, 5 ಚಾಲನಾ ಪರವಾನಗಿ, 3 ಆಯುಷ್ಮಾನ್ ಕಾರ್ಡ್, 92 ಬಿಬಿಎಂಪಿ ಮೆಡಿಕಲ್ ಆಫೀಸರ್‌ಗಳ ಸೀಲು ಮತ್ತು ಸಹಿ ಇರುವ ಸರ್ಟಿಫಿಕೇಟ್ ಫಾರ್ ಆಧಾರ್ ಎನ್ರೋಲ್‌ಮೆಂಟ್ ಫಾಮ್‌ರ್‍ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಾಗಡಿ ರಸ್ತೆಯ ಚಿಕ್ಕ ಗೊಲ್ಲರಹಟ್ಟಿಸಮೀಪ ಎಂಟಿಎ ಕೇಂದ್ರದ ಹಣ ಕಳ್ಳತನ ಪ್ರಕರಣದ ತನಿಖೆ ವೇಳೆ ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ಸಿಕ್ಕಿತು. ಆ ಸುಳಿವು ಆಧರಿಸಿ ಪ್ರತ್ಯೇಕ ತನಿಖೆ ನಡೆಸಿದಾಗ ಬಾಂಗ್ಲಾ ಪ್ರಜೆಗಳಿಗೆ ಸರ್ಕಾರಿ ದಾಖಲೆ ಸೃಷ್ಟಿಸುತ್ತಿದ್ದ ಜಾಲ ಬಯಲಾಯಿತು.
ಆಧಾರ್ ಕಾರ್ಡ್ ನೀಡಲು ವ್ಯವಸ್ಥಿತ ಜಾಲ ರಚನೆ
ತ್ರಿಪುರ ರಾಜ್ಯದ ಗಡಿಯಿಂದ ಅಕ್ರಮವಾಗಿ ನಸುಳಿ ಭಾರತ ಪ್ರವೇಶಿಸಿದ್ದ ಬಾಂಗ್ಲಾ ಪ್ರಜೆಗಳು, ಬೆಂಗಳೂರು ಹೊರವಲಯದಲ್ಲಿ ಬಂದು ನೆಲೆಸಿದ್ದರು. ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಸಂಗ್ರಹ ಮಾಡಿ ಜೀವನ ಸಾಗಿಸುತ್ತಿದ್ದ ಅವರು, ಸ್ಥಳೀಯ ನಾಗರಿಕರೆಂದು ನಿರೂಪಿಸಲು ಆಧಾರ್ ಕಾರ್ಡ್, ಮತದಾರ ಗುರುತಿನ ಪತ್ರ ಸೇರಿದಂತೆ ಸರ್ಕಾರಿ ದಾಖಲೆಗಳನ್ನು ಪಡೆದಿದ್ದರು. ಈ ಸರ್ಕಾರಿ ದಾಖಲೆಗಳ ಸೃಷ್ಟಿಯ ಅಕ್ರಮ ಜಾಲದ ಮಾಸ್ಟರ್ ಮೈಂಡ್ ಸೈದುಲ್ ಅಕೂನ್. ಈತ ಬಾಂಗ್ಲಾ ಪ್ರಜೆಗಳ ಫೋಟೋ ಹಾಗೂ ಸ್ವವಿವರ ಸಂಗ್ರಹಿಸಿ ತನ್ನ ಸಹಚರರಾದ ಅಬ್ದುಲ್ ಅಲೀಂಗೆ ರವಾನಿಸುತ್ತಿದ್ದ. ನಂತರ ಇನ್ನುಳಿದ ಆರೋಪಿಗಳ ಜತೆ ಅಬ್ದುಲ್ ಸರ್ಕಾರಿ ದಾಖಲೆಗಳನ್ನು ತಯಾರಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ತಾವರೆಕೆರೆ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ನಡೆಸುವ ಹೊರಗುತ್ತಿಗೆ ನೌಕರ ಇಸ್ತಿಯಾಕ್ ಪಾಷಾ, ಬಿಬಿಎಂಪಿ ಗೆಜೆಟೆಡ್ ಅಧಿಕಾರಿಗಳ ಮೊಹರು, ವಿಳಾಸವನ್ನು ಆರೋಪಿ ರಾಕೇಶ್‌ಗೆ ಕೊಡುತ್ತಿದ್ದ. ಫೋಟೊಶಾಪ್ ಮೂಲಕ ನಕಲಿ ಲೆಟರ್‌ಹೆಡ್ ತಯಾರಿಸಿ ಅದರಲ್ಲಿ ಆಧಾರ್‌ಕಾರ್ಡ್ ಪಡೆಯುವ ಬಾಂಗ್ಲಾ ಪ್ರಜೆಗಳ ಹೆಸರನ್ನು ರಾಕೇಶ್ ನಮೂದಿಸುತ್ತಿದ್ದ. ಬಳಿಕ ಲೆಟರ್‌ಹೆಡ್ ಮೇಲೆ ಗೆಜೆಟೆಡ್ ಆಫೀಸರ್ ನಕಲಿ ಸೀಲ್ ಮತ್ತು ಸಹಿ ಹಾಕುತ್ತಿದ್ದರು. ಈ ದಾಖಲೆಯನ್ನು ಬೆಂಗಳೂರು ಒನ್ ಕೇಂದ್ರಕ್ಕೆ ಸಲ್ಲಿಸಿ ಬಾಂಗ್ಲಾ ಪ್ರಜೆಗಳ ಹೆಸರಿನಲ್ಲಿ ಆರೋಪಿಗಳಾದ ಮೊಹಮ್ಮದ್ ಇದಾಯತ್ ಮತ್ತು ಸೈಯ್ಯದ್ ಮನ್ಸೂರ್ ಸರ್ಜಿ ಸಲ್ಲಿಸುತ್ತಿದ್ದರು. ಹೀಗೆ ಆಧಾರ್ ಕಾರ್ಡ್ ಸಿದ್ಧವಾದ ಬಳಿಕ ಅವುಗಳನ್ನು ಬಾಂಗ್ಲಾ ಪ್ರಜೆಗಳಿಗೆ .500 ರಿಂದ .1 ಸಾವಿರಕ್ಕೆ ಆರೋಪಿಗಳು ಮಾರುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಎಟಿಎಂ ಕಳ್ಳ ನೀಡಿದ ಸುಳಿವು
ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ಏ.14ರಂದು ನಸುಕಿನಲ್ಲಿ ಕನ್ನ ಹಾಕಿ ದುಷ್ಕರ್ಮಿಗಳು .18 ಲಕ್ಷ ದೋಚಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಇಸ್ಮಾಯಿಲ್ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆತ ತಾನು ಬಾಂಗ್ಲಾ ಪ್ರಜೆ ಎಂದು ಹೇಳಿದ್ದ. ‘ಕಳ್ಳತನ ಮಾಡಿದ .18 ಲಕ್ಷ ಪೈಕಿ ತನಗೆ .2 ಲಕ್ಷ ಮಾತ್ರ ಸಿಕ್ಕಿತು. ಇನ್ನುಳಿದ ಹಣದ ಸಮೇತ ಉಳಿದವರು ಬಾಂಗ್ಲಾ ಸೇರಿದ್ದಾರೆ’ ಎಂದು ಇಸ್ಮಾಯಿಲ್ ಹೇಳಿದ್ದ. ಆರೋಪಿ ಸಂಪರ್ಕ ಜಾಲವನ್ನು ಜಾಲಾಡಿದಾಗ ಬಾಂಗ್ಲಾ ಪ್ರಜೆಗಳಿಗೆ ಸರ್ಕಾರಿ ದಾಖಲೆ ಪೂರೈಸುವ ಪ್ಲಾಸ್ಟಿಕ್ ವ್ಯಾಪಾರಿ ಸೈದುಲ್ ಅಕೂನ್ ತಂಡ ಸಿಕ್ಕಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾಕ್ಕೆ 4 ಕೋಟಿ ವರ್ಗ
ನಗರದ ಹೊರ ವಲಯದಲ್ಲಿ ಎಸ್‌ಎ ಪ್ಲಾಸ್ಟಿಕ್ ಹೆಸರಿನ ಕಂಪನಿ ಹೊಂದಿರುವ ಸೈದುಲ್, ಬಾಂಗ್ಲಾ ಪ್ರಜೆಗಳ ಮೂಲಕ ಗುಜರಿ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ನಡೆಸುವ ವ್ಯವಹಾರ ನಡೆಸುತ್ತಿದ್ದಾನೆ. ಅಲ್ಲದೆ ಬಾಂಗ್ಲಾ ಪ್ರಜೆಗಳು ಸಂಪಾದಿಸಿದ ಹಣವನ್ನು ಅವರ ಕುಟುಂಬದವರಿಗೆ ತಲುಪಿಸಲು ಸೈದಲು ಪ್ರಮುಖ ಪಾತ್ರ ವಹಿಸಿದ್ದ. ಒಂದು ವರ್ಷದ ಅವಧಿಯಲ್ಲಿ ಸುಮಾರು .4 ಕೋಟಿಯನ್ನು ಬಾಂಗ್ಲಾ ಕರೆನ್ಸಿಗೆ ಬದಲಾಯಿಸಿ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬಾಲಕನ ಅಪಹರಿಸಿ 50 ಲಕ್ಷಕ್ಕೆ ಡಿಮ್ಯಾಂಡ್: ಸಿನಿಮೀಯ ರೀತಿಯಲ್ಲಿ ಬಾಲಕನ ರಕ್ಷಿಸಿದ ಪೊಲೀಸರು!
ಎಸ್‌ಬಿಐ ಹಾಗೂ ಆ್ಯಕ್ಸಿಸ್ ಬ್ಯಾಂಕ್‌ಗಳಲ್ಲಿ 13 ಖಾತೆಗಳನ್ನು ಸೈದುಲ್ ಹೊಂದಿದ್ದು, ಈ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿದ್ದಾನೆ. ಈ ಖಾತೆಗಳಿಗೆ ಬಾಂಗ್ಲಾ ನಾಗರಿಕರಿಂದ ಭಾರತೀಯ ರೂಪಾಯಿ ಮುಖಾಂತರ ಆರೋಪಿ ಹಣ ಜಮೆ ಮಾಡಿಸುತ್ತಿದ್ದ. ನಂತರ ತನ್ನ ಕೊಲ್ಕತ್ತಾ, ಚೆನ್ನೈ ಹಾಗೂ ಪಂಜಾಬ್‌ಗಳಲ್ಲಿ ನೆಲೆಸಿರುವವರ ತನ್ನ ಪರಿಚಿತರ ಮೂಲಕ ಹಣವನ್ನು ಬಾಂಗ್ಲಾ ಕರೆನ್ಸಿಗೆ ಪರಿವರ್ತನೆ ಮಾಡುತ್ತಿದ್ದ. ನಂತರ ವ್ಯಾಪಾರದ ಸೋಗಿನಲ್ಲಿ ಬಾಂಗ್ಲಾ ಗಡಿ ಭಾಗದಲ್ಲಿ ವ್ಯಾಪಾರಿಗಳ ಮೂಲಕ ಬಾಂಗ್ಲಾ ಪ್ರಜೆಗಳ ಪರಿವಾರಕ್ಕೆ ಹಣ ಪೂರೈಸುತ್ತಿದ್ದ. ಈ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೆಲಮಂಗಲ ಉಪ ವಿಭಾಗದ ಡಿವೈಎಸ್ಪಿ ಗೌತಮ್, ಮಾದನಾಯಕನಹಳ್ಳಿ ಇನ್‌ಸ್ಪೆಕ್ಟರ್ ಆರ್.ಮಂಜುನಾಥ್ ನೇತೃತ್ವದ ತಂಡ ಈ ಜಾಲವನ್ನು ಪತ್ತೆ ಹಚ್ಚಿದೆ. ತನಿಖಾ ತಂಡಕ್ಕೆ ಪ್ರಶಂಸನಾ ಪತ್ರಗಳನ್ನು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ನೀಡಿ ಗೌರವಿಸಿದ್ದಾರೆ.
ನಕಲಿ ದಾಖಲೆ ಜಾಲ ಬೇಧಿಸಿದ ಪೊಲೀಸರಿಗೆ ಆರಗ ಅಭಿನಂದನೆ
ಅಕ್ರಮ ಬಾಂಗ್ಲಾದೇಶಿ ನುಸುಳುಕೋರರಿಗೆ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆ ಒದಗಿಸುತ್ತಿದ್ದ ಜಾಲವನ್ನು ಭೇದಿಸಿರುವ ಬೆಂಗಳೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿನಂದಿಸಿದ್ದಾರೆ.
ಅಕ್ರಮ ವಲಸಿಗರು ಹಾಗೂ ಅವರಿಗೆ ಆಶ್ರಯ ಹಾಗೂ ಇನ್ನಿತರ ಸಹಕಾರ ಹಾಗೂ ಸಹಾಯವನ್ನು ಒದಗಿಸುತ್ತಿದ್ದವರ ವಿರುದ್ಧ ತೀವ್ರ ನಿಗಾ ವಹಿಸಬೇಕು ಮತ್ತು ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣ ಹೇರಬೇಕು ಎಂದು ನಿರ್ದೇಶನ ನೀಡಿದ್ದೆ. ಅಕ್ರಮ ವಲಸೆ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಅಕ್ರಮ ವಲಸಿಗರು ಮತ್ತು ಅವರಿಗೆ ಆಶ್ರಯ ಹಾಗೂ ಇನ್ನಿತರ ಸಹಕಾರ ಒದಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈಗಾಗಲೇ ರಾಜ್ಯದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿರುವ ವರ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.