ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಗ್ರಾಮದಲ್ಲಿ ನಡೆದ ಘಟನೆ
ಮೂಡಲಗಿ(ಅ.28): ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಪತಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಗುರ್ಲಾಪೂರ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ ಹಾರೂಗೇರಿ(58) ಕೊಲೆಯಾದ ಮಹಿಳೆ. ಪಾಂಡಪ್ಪ ಹಾರೂಗೇರಿ (62) ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿ.
ಬುಧವಾರ ರಾತ್ರಿ ದೀಪಾವಳಿ ಹಬ್ಬದ ನಿಮಿತ್ತವಾಗಿ ಎಲ್ಲ ಮಕ್ಕಳು ಭೂ ಮಾಲೀಕನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಪಾಂಡಪ್ಪ ಊಟ ಮಾಡಿ ಮಲಗಿದ್ದ ಪತ್ನಿ ಯಲ್ಲವ್ವಳನ್ನ ಕೂಡಲಿ ಹಾಗೂ ಕೂಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತಂತೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸಿಪಿಐ ಶ್ರೀಶೈಲ ಬ್ಯಾಕೂಡ ಹಾಗೂ ಪೊಲೀಸ್ ಸಿಬ್ಬಂದಿ ಆರೋಪಿಗಾಗಿ ಬಲೆ ಬೀಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
Belagavi: ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾದ ವೃದ್ಧ ಪತಿ
ದುಡಿಮೆ ಮಾಡಲು ಎರಡು ವರ್ಷಗಳ ಹಿಂದೆ ಗುರ್ಲಾಪೂರ ಗ್ರಾಮದ ಲಕ್ಷ್ಮಣ ಹಳ್ಳೂರ ಎಂಬುವವರ ತೋಟದಲ್ಲಿ ಈ ಕುಟುಂಬ ವಾಸವಾಗಿದೆ, ದಂಪತಿಗೆ ನಾಲ್ಕು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು ದಂಪತಿ ಮಧ್ಯೆ ಯಾವುದೇ ಕಲಹ ಇರಲಿಲ್ಲ ಎಂದು ಮಕ್ಕಳು ಹೇಳುತ್ತಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ಅಧಿಕಾರಿಗಳ ತನಿಖೆಯಿಂದ ಕೊಲೆಗೆ ನಿಖರ ಕಾರಣವೇನು ಎಂದು ತಿಳಿದು ಬರಬೇಕು. ಆರೋಪಿ ಪತಿ ಪರಾರಿಯಾಗಿದ್ದಾನೆ. ಗಂಡ-ಹೆಂಡತಿ ಮೂಲತಃ ವಿಜಯಪುರ ಜಿಲ್ಲೆಯ ದನ್ಯಾಳ ಗ್ರಾಮದವರು.