ಉಳ್ಳಾಲ: ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ

By Kannadaprabha News  |  First Published Oct 28, 2022, 9:09 AM IST

Mangaluru News: ಪತ್ನಿಯ ಕತ್ತು ಹಿಸುಕಿ ಕೊಂದು ಪತಿ ನೇಣಿಗೆ ಶರಣು, ಮಂಗಳೂರು ಹೊರವಲಯದ ಪಿಲಾರು ಎಂಬಲ್ಲಿ ಘಟನೆ


ಉಳ್ಳಾಲ (ಅ. 28): ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿ ಗುರುವಾರ ಮಧ್ಯಾಹ್ನ ವೇಳೆ ಬೆಳಕಿಗೆ ಬಂದಿದ್ದು, ಪತಿಯೇ ಪತ್ನಿಯನ್ನು ಕೊಂದು ಆತ್ಮಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಲಾರು ನಿವಾಸಿ ಪೈಂಟರ್‌ ಕೆಲಸ ಮಾಡುವ ಶಿವಾನಂದ ಪೂಜಾರಿ (55) ಮೃತದೇಹ ತೋಟದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ ಪತ್ನಿ ಶೋಭಾ ಪೂಜಾರಿ (45) ಮೃತದೇಹ ಮನೆಯ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶಿವಾನಂದನೇ ಪತ್ನಿ ಶೋಭಾರನ್ನು ಕತ್ತು ಹಿಸುಕಿ ಕೊಲೆ ನಡೆಸಿ ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಘಟನೆಯ ವಿವರ: ಮೃತ ಶಿವಾನಂದ ಶೋಭಾ ದಂಪತಿಗೆ ಪುತ್ರ ಮತ್ತು ಪುತ್ರಿಯಿದ್ದು, ಪುತ್ರಿಗೆ ಒಂದೂವರೆ ವರುಷದ ಹಿಂದೆ ಮದುವೆಯಾಗಿದ್ದು, ಪುತ್ರ ಮಂಗಳೂರಿನಲ್ಲಿ ಮೊಬೈಲ್‌ ಶಾಪ್‌ನಲ್ಲಿ ಕೆಲಸಕ್ಕಿದ್ದು, ಗುರುವಾರ ಬೆಳಗ್ಗೆ 9 ಗಂಟೆಗೆ ಪುತ್ರ ಮನೆಯಿಂದ ಹೊರಟ ಬಳಿಕ ಈ ಘಟನೆ ನಡೆದಿದ್ದು, ಶಿವಾನಂದ ಪತ್ನಿ ಶೋಭಾಳ ಕತ್ತು ಹಿಸುಕಿ ಬಳಿಕ ನೇಣಿಗೆ ಶರಣಾಗಿದ್ದ ಎನ್ನಲಾಗಿದೆ.

Tap to resize

Latest Videos

ದೂರವಾಣಿ ಕರೆ ಮಾಡಿದ್ದ: ಶಿವಾನಂದ ಪೂಜಾರಿ ಪತ್ನಿಯ ಶೀಲ ಶಂಕಿಸಿ ಪ್ರತೀ ದಿನ ಗಲಾಟೆ ಮಾಡುತ್ತಿದ್ದು, ಸ್ಥಳೀಯವಾಗಿ ಪತ್ನಿಯನ್ನು ಕೊಂದು ನಾನು ಸಾಯುತ್ತೇನೆ ಎಂದು ಹೇಳಿ ತಿರುಗಾಡುತ್ತಿದ್ದ ಎಂದು ಆತನ ಪರಿಚಯದವರು ತಿಳಿಸಿದ್ದಾರೆ. ಸ್ಥಳೀಯವಾಗಿ ಶೋಭಾ ಅವರ ಬಗ್ಗೆ ಉತ್ತಮ ಅಭಿಪ್ರಾಯವಿದ್ದು, ಶಿವಾನಂದ ಮಾನಸಿಕವಾಗಿ ವರ್ತಿಸುತ್ತಿದ್ದ ಎಂದು ಮಾಹಿತಿಯಿಂದ ತಿಳಿದು ಬಂದಿದೆ. ಇಂದು ಮಧ್ಯಾಹ್ನ ಶೋಭಾರನ್ನು ಕತ್ತುಹಿಸುಕಿ ಕೊಲೆ ನಡೆಸಿದ ಬಳಿಕ ತನ್ನ ಸಂಬಂಧಿಕ ಮಹಿಳೆಯೊಬ್ಬರಿಗೆ ಕರೆ ಮಾಡಿ ಬರುವಾಗ ಹೂ ಹಿಡಿದುಕೊಂಡು ಬರಲು ತಿಳಿಸಿದ್ದರು.

ಇದನ್ನೂ ಓದಿನೇಕಾರನ ಹತ್ಯೆ ಕೇಸ್‌ಗೆ ಟ್ವಿಸ್ಟ್:‌ ಪ್ರಿಯಕರನ ಜತೆ ಸೇರಿ ಪತಿಯನ್ನೆ ಕೊಂದ ಪತ್ನಿ

ಮಹಿಳೆ ಸಂಶಯಗೊಂಡು ಶೋಭಾ ಅವರಿಗೆ ಕರೆ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಬಂದಿದ್ದು, ಇವರ ಪುತ್ರನಿಗೂ ಕರೆ ಮಾಡಿ ತಿಳಿಸಿದ್ದರು. ಬಳಿಕ ಪುತ್ರ ಸ್ಥಳೀಯ ಮಹಿಳೆಯೊಬ್ಬರಿಗೆ ತಿಳಿಸಿದ್ದು ಅವರು ಬಂದು ನೋಡಿದಾಗ ಟಿ.ವಿ. ಆನ್‌ ಆಗಿದ್ದು, ಬಾಗಿಲು ದೂಡಿ ಒಳ ಹೋದಾಗ ಬೆಡ್ರೂಂನಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆ ತಕ್ಷಣ ಮನೆಯವರನ್ನು ಕರೆದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಕಮಿಷನರ್‌ ಶಶಿಕುಮಾರ್‌, ಎಸಿಪಿ ದಿನಕರ ಶೆಟ್ಟಿ, ಎಸ್‌ಐ ಪ್ರದೀಪ್‌ ಕುಮಾರ್‌ ಆಗಮಿಸಿದ್ದು, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

click me!