ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಕೊಲೆಗೆ ಹೋಟೆಲ್‌ ಭದ್ರತಾ ವೈಫಲ್ಯ ಕಾರಣವೇ?

By Kannadaprabha News  |  First Published Jul 7, 2022, 9:05 PM IST

*    ಬಂದು ಹೋದ ಕರೆಗಳ ಮಾಹಿತಿ, ಸಾಮಾಜಿಕ ಜಾಲತಾಣ ಜಾಲಾಡುತ್ತಿರುವ ಪೊಲೀಸರು
*   ಕಾರಿನಲ್ಲೇ ಬಟ್ಟೆ ಬದಲು 
*   ಭದ್ರತಾ ಸಿಬ್ಬಂದಿಗಳ ಕೈಯಲ್ಲಿ ಒಂದು ಬೆತ್ತ ಬಿಟ್ಟರೆ ಬೇರೆ ಯಾವುದೇ ಆಯುಧವೂ ಇಲ್ಲ


ಹುಬ್ಬಳ್ಳಿ(ಜು.07): ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಪ್ರೆಸಿಡೆಂಟ್‌ ಹೋಟೆಲ್‌ನ ಭದ್ರತಾ ವೈಫಲ್ಯವೂ ಕಾರಣವೇ? ಇದು ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಪ್ರಶ್ನೆ. 

ನಗರದ ಪ್ರತಿಷ್ಠಿತ ಹೋಟೆಲ್‌ಗಳ ಪೈಕಿ ಪ್ರೆಸಿಡೆಂಟ್‌ ಕೂಡ ಒಂದು. ಗಣ್ಯಾತಿಗಣ್ಯರ ಆಗಮನ, ನಿರ್ಗಮನ ನಿರಂತರ ನಡೆಯುತ್ತಲೇ ಇರುತ್ತದೆ. ಆದರೂ ಇಲ್ಲಿ ಮೆಟಲ್‌ ಡಿಟೆಕ್ಟರ್‌ ಅಳವಡಿಸಿಲ್ಲ. ಹೀಗಾಗಿ ಒಳಗೆ ಯಾರು ಬಂದರೂ, ಅವರ ಬಳಿ ಎಂಥದೇ ಆಯುಧ ಇದ್ದರೂ ಆ ಬಗ್ಗೆ ಭದ್ರತಾ ಸಿಬ್ಬಂದಿ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಇಲ್ಲಿನ ಭದ್ರತಾ ಸಿಬ್ಬಂದಿಗಳ ಕೈಯಲ್ಲಿ ಒಂದು ಬೆತ್ತ ಬಿಟ್ಟರೆ ಬೇರೆ ಯಾವುದೇ ಆಯುಧವೂ ಇಲ್ಲ. ಇನ್ನು ಇಲ್ಲಿನ ಭದ್ರತಾ ಸಿಬ್ಬಂದಿ ವಾಹನಗಳ ಪಾರ್ಕಿಂಗ್‌ಗಷ್ಟೇ ಸೀಮಿತವಾಗಿರುತ್ತಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

Tap to resize

Latest Videos

ಚಂದ್ರಶೇಖರ ಗುರೂಜಿ ಹತ್ಯೆ ಕೇಸ್: ವಿಚಾರಣೆ ವೇಳೆ ರೋಚಕ ಅಂಶಗಳನ್ನ ಬಾಯ್ಬಿಟ್ಟ ಹಂತಕರು

ಹೋಟೆಲ್‌ನಲ್ಲಿ ಮೆಟಲ್‌ ಡಿಟೆಕ್ಟರ್‌ ಇದ್ದಿದ್ದರೆ, ಪ್ರತಿಯೊಬ್ಬರನ್ನು ಪರಿಶೀಲಿಸಿ ಒಳಗೆ ಕಳುಹಿಸುತ್ತಿದ್ದರೆ ಆರೋಪಿಗಳು ಚಾಕು, ಚೂರಿ ಸೇರಿದಂತೆ ಮತ್ತಿತರ ಮಾರಕಾಸ್ತ್ರಗಳನ್ನು ಒಳಗೆ ಒಯ್ಯಲು ಸಾಧ್ಯವಾಗುತ್ತಿರಲಿಲ್ಲ. ಭದ್ರತಾ ಸಿಬ್ಬಂದಿ ಧೈರ್ಯ ತೋರಿ ಮುನ್ನುಗ್ಗಿದ್ದರೆ ಗುರೂಜಿ ಹತ್ಯೆಯಾಗುತ್ತಿರಲಿಲ್ಲ. ಹೋಟೆಲ್‌ ಆಡಳಿತ ಮಂಡಳಿಯ ವೈಫಲ್ಯ ಇದರಲ್ಲಿ ಕಂಡು ಬರುತ್ತಿದೆ ಎಂಬ ಆರೋಪ ಪ್ರಜ್ಞಾವಂತರದ್ದು. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಒತ್ತಾಯ ಕೇಳಿ ಬಂದಿದೆ.

ಚುರುಕುಗೊಂಡ ಹತ್ಯೆ ತನಿಖೆ ಆರೋಪಿಗಳಿಗೆ ಪ್ರಶ್ನೆಗಳ ಸುರಿಮಳೆ

ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಡಿಜಿಟಲ್‌ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಘಟನೆ ಪೂರ್ವ ನಿಯೋಜಿತವೇ? ಪೂರ್ವ ನಿಯೋಜಿತವಾಗಿದ್ದರೆ ಈ ಹಿಂದೆ ಹೋಟೆಲ್‌ಗೆ ಆರೋಪಿಗಳು ಆಗಮಿಸಿ ಸಂಚು ರೂಪಿಸಿದ್ದರೇ? ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹೋಟೆಲ್‌ನ ಸಿಸಿ ಕ್ಯಾಮೆರಾದ ಸಂಪೂರ್ಣ ದೃಶ್ಯಾವಳಿ ಪಡೆದುಕೊಂಡಿರುವ ಪೊಲೀಸರು, ಹಿಂದೇನಾದರೂ ಆರೋಪಿಗಳು ಬಂದಿದ್ದರಾ ಎಂದು ಹೋಟೆಲ್‌ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆನ್ನಲಾಗಿದೆ. ಅಲ್ಲದೆ, ಆರೋಪಿಗಳು ಯಾವ ಮಾರ್ಗವಾಗಿ ಹೋಟೆಲ್‌ಗೆ ಬಂದರು ಹಾಗೂ ಅಲ್ಲಿಂದ ತೆರಳಿದರು ಎಂಬುದನ್ನೂ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು, ಇಬ್ಬರು ಆರೋಪಿಗಳ ಮೊಬೈಲ್‌ ವಶಪಡಿಸಿಕೊಳ್ಳಲಾಗಿದ್ದು, ಬಂದು ಹೋಗಿರುವ ಕರೆಗಳ ಮಾಹಿತಿ ಪಡೆಯಲು ಸಿಡಿಆರ್‌ ಒಳಪಡಿಸಿದ್ದಾರೆ. ಇನ್ನು ಆರೋಪಿಗಳ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಚಾರದ ಕುರಿತು ತನಿಖೆ ನಡೆಯುತ್ತಿದೆ.

ಚಂದ್ರಶೇಖರ ಗುರೂಜಿ ಮರ್ಡರ್ ಮಿಸ್ಟ್ರಿ! ಪೊಲೀಸರೆದುರು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹಂತಕರು

ಇದರೊಂದಿಗೆ ಪ್ರಕರಣದಲ್ಲಿ ಈ ಇಬ್ಬರೇ ಭಾಗಿಯಾಗಿದ್ದಾರಾ ಅಥವಾ ಇನ್ನಾರದ್ದಾದರೂ ಕೈವಾಡ ಇದೆಯಾ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೊಲೆಗೈದ ಬಳಿಕ ಕಾರಿನ ಮೂಲಕವಾಗಿ ಎಲ್ಲೆಲ್ಲಿ ಹೋದಿರಿ ಎಂಬುದರಿಂದ ಹಿಡಿದು ನಿಮ್ಮ ಜತೆಗೆ ಮತ್ಯಾರಾದರೂ ಇದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ದುಮ್ಮವಾಡ ಬಳಿ ಕೆಲ ಕ್ಷಣ ನೆಟ್‌ವರ್ಕ್ ಲೋಕೆಶನ್‌ ಗೊಂದಲಮಯವಾಗಿದ್ದು, ಅದಕ್ಕೆ ಕಾರಣವೇನು ಎಂದು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರಿನಲ್ಲೇ ಬಟ್ಟೆ ಬದಲು:

ಇನ್ನು ಕೊಲಗೈದ ಬಳಿಕ ಪರಾರಿಯಾಗಿದ್ದ ಆರೋಪಿಗಳು ಬೆಳಗಾವಿ ರಾಮದುರ್ಗಕ್ಕೆ ತೆರಳುವ ಮಾರ್ಗಮಧ್ಯೆ ಕಾರಿನಲ್ಲೆ ಬಟ್ಟೆಬದಲಿಸಿದ್ದಾರೆ. ರಕ್ತಸಿಕ್ತ ಬಟ್ಟೆಗಳನ್ನು ತೆಗೆದಿರಿಸಿ ತಯಾರಾಗಿಟ್ಟುಕೊಂಡು ಬಂದಿದ್ದ ಬೇರೊಂದು ಬಟ್ಟೆಧರಿಸಿದ್ದಾರೆ.

ಪಂಚನಾಮೆ:

ಬುಧವಾರ ವಿದ್ಯಾನಗರ ಪೊಲೀಸರು ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ಪಂಚನಾಮೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ ಹೆಚ್ಚಿನ ಮಾಹಿತಿ ಪಡೆದ ಬಳಿಕ ಕೊಲೆ ನಡೆದ ಸ್ಥಳ ಮಹಜರು ಮಾಡಿರುವ ಪೊಲೀಸರು ಮತ್ತಷ್ಟುಸಾಕ್ಷ್ಯಕ್ಕಾಗಿ ತಡಕಾಡಿದ್ದಾರೆ. ಒಂದೆರಡು ದಿನಗಳಲ್ಲಿ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಪುನಃ ಅಪರಾಧ ಕೃತ್ಯದ ಮರು ಸೃಷ್ಟಿಮಾಡಲಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
 

click me!